ಕೃಷ್ಣಯ್ಯ ಬಂಧನ ವಿರೋಧಿಸಿ ಆದಿವಾಸಿಗಳ ಧರಣಿ
ಹುಣಸೂರು: ಕರ್ನಾಟಕ ರಾಜ್ಯ ಲ್ಯಾಂಪ್ಸ್ ಸಹಕಾರ ಮಹಾಮಂಡಳಿ ಅಧ್ಯಕ್ಷ ಯಶೋಧಪುರದ ಎಂ. ಕೃಷ್ಣಯ್ಯ ಅವರ ಮೇಲೆ ಸುಳ್ಳು ದೂರು ದಾಖಲಿಸಿ, ಬಂಧಿಸಿರುವುದನ್ನು ವಿರೋಧಿಸಿ ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ಹಾಗೂ ಆದಿವಾಸಿ ಸಂಘಟನೆಗಳ ಸಹಕಾರದೊಂದಿಗೆ ಉಪವಿಭಾಗಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟಿಸಿದರು. ಇಲ್ಲಿನ ಪುರಸಭೆ ಮೈದಾನದಿಂದ ಉಪವಿಭಾಗಾಧಿಕಾರಿ ಕಚೇರಿಯವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ, ಸುಳ್ಳು ಪ್ರಕರಣ ದಾಖಲಿಸಿರುವ ಎಸ್ಐ ಅರುಣ ಅವರನ್ನು ಅಮಾನತುಪಡಿಸಬೇಕು ಹಾಗೂ ಸುಳ್ಳು ದೂರು ನೀಡಿರುವ ಜಿ. ಮಹದೇವಪ್ಪ ಅವರನ್ನು ಬಂಧಿಸುವಂತೆ ಒತ್ತಾಯಿಸಿದರು. ಆದಿವಾಸಿ ಮುಖಂಡರಾದ ಕಾವೇರ, ಮುದ್ದಯ್ಯ, ಹುಣಸೂರು ತಾಲೂಕು ಲ್ಯಾಂಪ್ಸ್ ಸಹಕಾರ ಸಂಘದ ಅಧ್ಯಕ್ಷ ಮಧುಕುಮಾರ್, ಎಚ್.ಡಿ. ಕೋಟೆ ತಾಲೂಕು ಲ್ಯಾಂಪ್ಸ್ ಸಹಕಾರ ಸಂಘದ ಅಧ್ಯಕ್ಷ ವಿಜಯಕುಮಾರ್ ಹಾಗೂ ಮಾಸ್ತಮ್ಮ, ಇಂದೂ ಕೊಡಗಿನ ಜಿ.ಎಸ್. ಪುಷ್ಕಾರ್, ಸಣ್ಣಯ್ಯ, ಜಿ. ಸ್ವಾಮಿ, ಬಿಳಿಗಿರಿರಂಗನ ಬೆಟ್ಟದ ಆದಿವಾಸಿ ಮುಖಂಡರಾದ ಜಡಿಯಗೌಡ, ಅಲುಮಲೆ ಹಾಗೂ ಆದಿವಾಸಿ ಮುಖಂಡರು ಭಾಗವಹಿಸಿದ್ದರು.