ಪಠ್ಯೇತರ ಚಟುವಟಿಕೆಯಲ್ಲಿಯೂ ಕೀರ್ತಿ ತನ್ನಿ
ಕ.ಪ್ರ.ವಾರ್ತೆ ಹುಣಸೂರು ಸೆ. 11
ವಿದ್ಯಾರ್ಥಿನಿಯರು ರಾಜ್ಯ ಹಾಗೂ ಅಂತಾರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಸಾಧನೆ ಮಾಡುವ ಮೂಲಕ ತಾಲೂಕಿನ ಕೀರ್ತಿ ಹೆಚ್ಚಿಸಬೇಕೆಂದು ಶಾಸಕ ಎಚ್.ಪಿ. ಮಂಜುನಾಥ್ ಕರೆ ನೀಡಿದರು.
ಇಲ್ಲಿನ ಸರ್ಕಾರಿ ಮಹಿಳಾ ಕಾಲೇಜಿನ 2013-14ನೇ ಸಾಲಿನ ಸಾಂಸ್ಕೃತಿಕ, ಕ್ರೀಡಾ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಚಟುವಟಿಕೆಗಳ ಸಮಾರಂಭವನ್ನು ಉದ್ಘಾಟಿಸಿ ಹಾಗೂ ಒಂದು ಕೋಟಿ ರು.ಗಳ ವೆಚ್ಚದಲ್ಲಿ ಮೊದಲ ಅಂತಸ್ತಿನ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಹುಣಸೂರು ಕ್ಷೇತ್ರ ಕಲೆ, ಸಾಹಿತ್ಯಕ್ಕೆ ಹೆಸರುವಾಸಿಯಾಗಿದೆ. ಹಾಗೆ ತಾಲೂಕಿನಲ್ಲಿ ಮಹಿಳಾ ಕಾಲೇಜು ಕೂಡ ಉತ್ತಮವಾಗಿ ನಡೆಯುತ್ತಿದೆ. ವಿದ್ಯಾರ್ಥಿನಿಯರು ಸಾಧನೆ ಮಾಡುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕಿದೆ. ವಿದ್ಯಾರ್ಥಿಗಳು ಓದುವ ಜೊತೆಗೆ ಕ್ರೀಡೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ಮತ್ತಿತರ ಪಠ್ಯೇತರ ಚಟುವಟಿಕೆಯಲ್ಲಿ ಭಾಗಿಯಾಗುವಂತೆ ತಿಳಿ ಹೇಳಿದರು. ಗುರುವಿನ ಗುಲಾಮನಾಗುವ ತನಕ ಮುಕ್ತಿ ಸಿಗದು, ಪ್ರತಿನಿತ್ಯ ಗುರುವಂದನೆ ಸಲ್ಲಿಸಿದಲ್ಲಿ ಮಾತ್ರ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿದೆ ಎಂದು ಹೇಳಿದರು.
ಮೈಸೂರು ಮುಕ್ತ ವಿವಿಯ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಶಿವಣ್ಣ ಮಾತನಾಡಿ, ಪ್ರಸ್ತುತ ದಿನದಲ್ಲಿ ದೇಶದ ಆರ್ಥಿಕ ಸ್ಥಿತಿ ಏರುಪೇರಾಗಿದ್ದು, ಮುಂದಿನ ದಿನದಲ್ಲಿ ಸರಿದೂಗಿಸಲು ಅರ್ಥಶಾಸ್ತ್ರಜ್ಞರು ಚಿಂತನೆ ನಡೆಸುತ್ತಿದ್ದಾರೆ. ದೇಶದಲ್ಲಿ ಎಲ್ಲ ಸಂಪತ್ತು ಇದ್ದರೂ, 2020ಕ್ಕೆ ಆಹಾರದ ಕೊರತೆ ಎದುರಿಸಬೇಕಾದ ಸ್ಥಿತಿ ನಿರ್ಮಾಣವಾಗಲಿದೆ. ಆಹಾರದ ಕೊರತೆ ನಿಗಿಸುವ ನಿಟ್ಟಿನಲ್ಲಿ ವಿಜ್ಞಾನಿಗಳು ಮತ್ತು ಜನಪ್ರತಿನಿಧಿಗಳು ಮುಂಜಾಗ್ರತೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಜಿಪಂ ಸದಸ್ಯೆ ಡಾ.ಪುಷ್ಪಾವತಿ ಅಮರನಾಥ್ ಮಾತನಾಡಿದರು. ಪ್ರಾಂಶುಪಾಲ ಸೌಭಾಗ್ಯ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಸವರಾಜು, ಕಸಾಪ ಅಧ್ಯಕ್ಷ ವಿ.ಪಿ. ಸಾಯಿನಾಥ್, ಸ್ಪೂರ್ತಿ ಸಂಸ್ಥೆ ಮುಖ್ಯಸ್ಥೆ ಎ.ಆರ್. ಸುಧಾಮಣಿ, ಕಸಾಪ ಮಾಜಿ ಅಧ್ಯಕ್ಷ ಜಯರಾಮು, ಕಾಲೇಜಿನ ಅಭಿವೃದ್ಧಿ ಸಮಿತಿ ಸದಸ್ಯರಾದ ಹರೀಶ್ಬಾಬು, ಗೋವಿಂದರಾಜುಗುಪ್ತ, ಡಾ.ವೃಷಬೇಂದ್ರಸ್ವಾಮಿ, ವಿಜಯ ಕರಿಗೌಡ, ಗೋಪಿ ಹಾಗೂ ಮುಖಂಡರಾದ ಕಲ್ಕುಣಿಕೆ ಶ್ರೀನಿವಾಸ್, ಪುರಸಭೆ ಸದಸ್ಯೆ ಸುನೀತಾ ಜೈರಾಮೇಗೌಡ ಇದ್ದರು.