ಪೊಲೀಸರತ್ತ ದೃಷ್ಟಿಕೋನ ಬದಲಾಗಲಿ
ಕ.ಪ್ರ.ವಾರ್ತೆ ಮೈಸೂರು ಸೆ. 11
ಕಾನೂನು, ಸುವ್ಯವಸ್ಥೆ ಕಾಪಾಡಲು, ಜನ ರಕ್ಷಣೆಗಾಗಿ ಹಗಲಿರುಳು ಅದಮ್ಯ ಬದ್ಧತೆಯೊಡನೆ ತೊಗಡಿಸಿಕೊಂಡಿರುವ ಪೊಲೀಸರನ್ನು ನೋಡುವ ದೃಷ್ಟಿಕೋನ ಬದಲಾಗಬೇಕಿದೆ ಎಂದು ಕರ್ನಾಟಕ ಪೊಲೀಸ್ ಅಕಾಡೆಮಿಯ ಉಪನಿರ್ದೇಶಕಿ ಡಾ.ಧರಣೀದೇವಿ ಮಾಲಗತ್ತಿ ಹೇಳಿದರು.
ಕರ್ನಾಟಕ ಪೊಲೀಸ್ ಅಕಾಡೆಮಿ ಹಾಗೂ ಒಡನಾಡಿ ಸೇವಾಸಂಸ್ಥೆಯ ಸಹಯೋಗದೊಂದಿಗೆ ಏರ್ಪಡಿಸಿದ್ದ ಮೂರು ದಿನಗಳ ತರಬೇತಿ ಕಾರ್ಯಾಗಾರದ ಅಂಗವಾಗಿ ಒಡನಾಡಿಯ ಮಡಿಲಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೊಸ ಕಾನೂನುಗಳಲ್ಲಿ ಮಹಿಳೆಯರು, ಮಕ್ಕಳನ್ನು ರಕ್ಷಿಸುವ ಹಾಗೂ ಸಾಂತ್ವನ ನೀಡುವ ಪೊಲೀಸರು ಸಮವಸ್ತ್ರದಲ್ಲಿರಬಾರದು ಎಂಬುದು ನೋವಿನ ವಿಚಾರ. ಇದು ವೈದ್ಯರಿಗಾಗಲಿ, ವಕೀಲರಿಗಾಗಲಿ ಅನ್ವಯಿಸುವುದಿಲ್ಲ. ಮುಂದಿನ ದಿನಗಳಲ್ಲಿ ಪೊಲೀಸರು ಕೂಡ ತಮ್ಮ ಸಮವಸ್ತ್ರದೊಡನೆ ಗುರುತಿಸಿಕೊಳ್ಳುವ ವ್ಯವಸ್ಥೆ ಬರಲಿ ಎಂದು ಆಶಿಸಿದರು.
ಪ್ರಮಾಣ ಪತ್ರ ವಿತರಣೆ: ಇದೆ ವೇಳೆ ಅವರು ಒಡನಾಡಿಯ ಹಸುಗೂಸಿಗೆ ಧೃತಿಸಾಗರಿ ಎಂದು ನಾಮಕರಣ ಮಾಡಿದರು. ಪೊಲೀಸ್ ತಂಡವು ಒಡನಾಡಿಯ ಗಂಡುಮಕ್ಕಳ ಮನೆ ಒಡಲಿಗೆ ಭೇಟಿ ನೀಡಿ, ಅಲ್ಲಿನ ಮಕ್ಕಳೊಂದಿಗೂ ಸಮಯ ಕಳೆದು, ಊಟ ಮಾಡಿದರು. ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಎಲ್ಲ ಅಧಿಕಾರಿಗಳಿಗೂ ಕಾರ್ಯಾಗಾರದ ಪ್ರಮಾಣಪತ್ರ ವಿತರಿಸಲಾಯಿತು.
ಒಡನಾಡಿಯ ಸ್ಟ್ಯಾನ್ಲಿ, ಪರಶುರಾಮ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸೋಮಲತಾ, ಅಕಾಡೆಮಿಯ ಸಹಾಯಕ ನಿರ್ದೇಶಕ ಶಂಕರೇಗೌಡ, ಶಿವಕುಮಾರಯ್ಯ, ಕೆ.ಆರ್. ಆಸ್ಪತ್ರೆಯ ಮನೋವೈದ್ಯ ಡಾ. ರವೀಶ್, ಜೆಎಸ್ಎಸ್ ಕಾಲೇಜಿನ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಕುಮುದಿನಿ ಅಚ್ಚಿ, ಜೆಎಸ್ಎಸ್ ಕಾನೂನು ಕಾಲೇಜಿನ ಸಹ ಪ್ರಾಧ್ಯಾಪಕ ಜಗದೀಶ್, ವಕೀಲರ ಸುಮನಾ, ಪ್ರಸೂತಿ ತಜ್ಞೆ ಡಾ. ದಮಯಂತಿ, ಯುನಿಸೆಫ್ ರೋವಿನಾ ಬಾಸ್ಟಿನ್, ಡಾ. ಶೋಯಿಬಾ ಸಾಲ್ಡಾನ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸೋಮಲತ, ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಶ್ರೀನಿವಾಸೇರಾಜೇ ಅರಸ್ ಭಾಗವಹಿಸಿದ್ದರು.