ಮುಂದುವರಿದ ಅರ್ಜುನ ಭಾರ ನಡಿಗೆ
ಕ.ಪ್ರ.ವಾರ್ತೆ ಮೈಸೂರು ಸೆ. 11
ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಕಾಡಿನಿಂದ ನಾಡಿಗೆ ಮೊದಲ ತಂಡದಲ್ಲಿ ಆಗಮಿಸಿರುವ ಆನೆಗಳು ದಸರಾ ಮೆರವಣಿಗೆ ಮಾರ್ಗದಲ್ಲಿ ಬುಧವಾರ ಸಹ ತಾಲೀಮು ನಡೆಸಿದವು. ಅಂಬಾರಿ ಆನೆ ಅರ್ಜುನನಿಗೆ 250 ಕೆ.ಜಿ. ಭಾರ ಹೊರಿಸಲಾಗಿತ್ತು. ಬಲರಾಮ, ಗಜೇಂದ್ರ, ಅಭಿಮನ್ಯು, ವರಲಕ್ಷ್ಮಿ ಮತ್ತು ಸರಳ ಆನೆಗಳು ಅರ್ಜುನನನ್ನು ಹಿಂಬಾಲಿಸಿದವು. ಅರಮನೆ ಆವರಣದಿಂದ ಹೊರಟ ಗಜಪಡೆಯ ನಡಿಗೆಯು ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ, ಚಾಮರಾಜ ವೃತ್ತ, ಕೆ.ಆರ್. ವೃತ್ತ, ಸಯ್ಯಾಜಿರಾವ್ ರಸ್ತೆ ಮೂಲಕ ಹೈವೆ ವೃತ್ತಕ್ಕೆ ತಲುಪಿ ಅದೇ ಮಾರ್ಗವಾಗಿ ವಾಪಸ್ ಅರಮನೆ ತಲುಪಿದವು.
ಇಂದು ಉಪಾಹಾರ: ಕಂದಾಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸಪ್ರಸಾದ್ ಅವರು ಸೆ.12ರ ಬೆಳಗ್ಗೆ 9ಕ್ಕೆ ಅರಮನೆ ಆವರಣದಲ್ಲಿ ಮಾವುತರು, ಕಾವಾಡಿಗಳು ಮತ್ತು ಅವರ ಕುಟುಂಬ ಸದಸ್ಯರ ಜೊತೆಗೆ ಉಪಾಹಾರ ಸೇವಿಸಲಿದ್ದಾರೆ.