ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸಿಪಿಐ ನೇಮಿರಾಜ್ ಅಮಾನತು

Rashmi Kasaragodu
Updated On : 12 Sept 2013, 12:21 pm

ಮೈಸೂರು: ಅಪಘಾತ ಪ್ರಕರಣದ ತನಿಖೆಯಲ್ಲಿ ಲೋಪ ಎಸಗಿದ ಕಾರಣಕ್ಕಾಗಿ ಮೈಸೂರು ಗ್ರಾಮಾಂತರ ಸರ್ಕಲ್ ಇನ್ಸ್ಪೆಕ್ಟರ್ ನೇಮಿರಾಜ್ ಅವರನ್ನು ಎಸ್ಪಿ ಅಭಿನವ್ ಖರೆ ಅವರು ಅಮಾನತುಗೊಳಿಸಿದ್ದಾರೆ. ಕಳೆದ ತಿಂಗಳು ಟ್ರ್ಯಾಕ್ಟರ್ನಿಂದ ಬಿದ್ದು ಇಬ್ಬರು ಮೃತಪಟ್ಟಿದ್ದರು. ಈ ಪ್ರಕರಣದ ತನಿಖೆ ನಡೆಸಿದ ನೇಮಿರಾಜ್ ಅವರು ನಿಜವಾದ ಟ್ರ್ಯಾಕ್ಟರ್ ಚಾಲಕನ ಬಿಟ್ಟು ಬೇರೆ ವ್ಯಕ್ತಿಯ ಮೇಲೆ ದೂರು ದಾಖಲಿಸಿದ್ದರು. ಈ ಸಂಬಂಧ ಮೈಸೂರು ಗ್ರಾಮಾಂತರ ಉಪ ವಿಭಾಗದ ಡಿವೈಎಸ್ಪಿ ಟಿ. ಸಿದ್ದಪ್ಪ ಅವರು ತನಿಖೆ ನಡೆಸಿ, ವರದಿ ನೀಡಿದರು. ಈ ಹಿನ್ನೆಲೆಯಲ್ಲಿ ನೇಮಿರಾಜ್ ಅವರನ್ನು ಎಸ್ಪಿ ಅಮಾನತುಗೊಳಿಸಿದ್ದಾರೆ ಎಂದು ಹೆಚ್ಚುವರಿ ಎಸ್ಪಿ ಆರ್.ಬಿ. ಮೋಹನ್ರೆಡ್ಡಿ ತಿಳಿಸಿದ್ದಾರೆ.
ನಗರದಲ್ಲಿ ಜೋರು ಸುರಿದ ಮಳೆ
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬುಧವಾರ ಸಂಜೆ ಜೋರು ಮಳೆ ಆಗಿದೆ. ಮಳೆಯಿಂದಾಗಿ ತಗ್ಗುಪ್ರದೇಶಕ್ಕೆ ನೀರು ನುಗ್ಗಿದ್ದು, ಮರದ ಕೊಂಬೆಗಳು ಕೆಲವು ಕಡೆ ಮುರಿದು ಬಿದ್ದಿವೆ. ರಾತ್ರಿ 8ರವರೆಗೆ ಮಳೆ ಮಂದುವರಿದಿತ್ತು. ಜೋರು ಮಳೆ ಸುರಿದರು ಸಹ ಬಹುತೇಕ ಟ್ರಾಫಿಕ್ ಸಿಗ್ನಲ್ ಲೈಟ್ಗಳು ಸ್ಥಗಿತಗೊಂಡಿರಲಿಲ್ಲ. ಮಳೆಯಾದರೂ ಸಹ ಯಾವುದೇ ಸಿಗ್ನಲ್ ಲೈಟ್ಗಳನ್ನು ಆಫ್ ಮಾಡದಂತೆ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ ಸೂಚಿಸಿದ್ದು, ಹೀಗಾಗಿ ಸಿಗ್ನಲ್ ಲೈಟ್ಗಳು ಆಫ್ ಮಾಡುತ್ತಿಲ್ಲ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
ಪಾಲಿಕೆ ಆಯುಕ್ತರಾಗಿ ಮತ್ತೆ ರಮೇಶ್
ಮೈಸೂರು: ಮೈಸೂರು ನಗರಪಾಲಿಕೆಯ ಆಯುಕ್ತರಾಗಿ ಪಿ.ಜಿ. ರಮೇಶ್ ಸೆ.12 ರಂದು ಬೆಳಗ್ಗೆ 10.30ಕ್ಕೆ ಅಧಿಕಾರ ಸ್ವೀಕರಿಸಲಿದ್ದಾರೆ. ರಮೇಶ್ ಅವರನ್ನು ವರ್ಗ ಮಾಡಿ, ಅವರ ಸ್ಥಾನಕ್ಕೆ ಈ ಹಿಂದೆ ಆಯುಕ್ತರಾಗಿದ್ದ ಡಾ.ಎಂ.ಆರ್. ರವಿ ಅವರನ್ನು ಸರ್ಕಾರ ನೇಮಿಸಿತ್ತು. ಅವರು ಅಧಿಕಾರ ಸ್ವೀಕರಿಸಿದ್ದರು. ಪಾಲಿಕೆ ಆಯುಕ್ತರ ಹುದ್ದೆಗೆ ಐಎಎಸ್ ಅಥವಾ ಕೆಎಎಸ್ ಆಯ್ಕೆ ಶ್ರೇಣಿಯ ಅಧಿಕಾರಿಯನ್ನು ನೇಮಿಸಬೇಕು. ತಾವು ಕೆಎಂಎಎಸ್ ಆಯ್ಕೆ ಶ್ರೇಣಿಯ ಅಧಿಕಾರಿ. ಆದರೆ ರವಿ ಅವರು ಆಯ್ಕೆ ಶ್ರೇಣಿಯ ಅಧಿಕಾರಿಯಲ್ಲ ಎಂಬ ರಮೇಶ್ ಅವರ ವಾದವನ್ನು ಪುರಸ್ಕರಿಸಿ, ಕೆಎಟಿ ವರ್ಗಾವಣೆಗೆ ತಡೆ ನೀಡಿದೆ.
ವಾರ್ಷಿಕ ಮಹಾಸಭೆ
ಕನಕದಾಸ ಪತ್ತಿನ ಸಹಕಾರ ಸಂಘದ ವಾರ್ಷಿಕ ಸಭೆಯು ಸೆ.22 ರಂದು ವಾರ್ಷಿಕ ಮಹಾಸಭೆ ನಡೆಯಲಿದ್ದು, ಇದೇ ವೇಳೆ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕರಿಸಲಾಗುವುದು. ಆದ್ದರಿಂದ ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿಗಳು ಸೆ.13 ರೊಳಗೆ ಅರ್ಜಿ ಸಲ್ಲಿಸುವಂತೆ ಕಾರ್ಯದರ್ಶಿ ಕೆ. ಬಸವೇಗೌಡ ತಿಳಿಸಿದ್ದಾರೆ. ದೂ.0821- 2435963 ಸಂಪರ್ಕಿಸಬಹುದು.
ವ್ಯಕ್ತಿ ಸಾವು
ಮೈಸೂರು: ವಾಹನ ಡಿಕ್ಕಿಯಾಗಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಕೆಆರ್ಎಸ್ ರಸ್ತೆಯಲ್ಲಿ ನಡೆದಿದೆ. ತಿಲಕ್ನಗರ ನಿವಾಸಿ ರಂಗಯ್ಯ ಎಂಬವರ ಪುತ್ರ ರಾಮು (55) ಮೃತಪಟ್ಟವರು. ಇವರು ಕೆಆರ್ಎಸ್ ರಸ್ತೆ ಕುಂಬಾರಕೊಪ್ಪಲು ಸುಜಾತ ಟೆಂಟ್ ಮುಂದೆ ಮಂಗಳವಾರ ಹೋಗುತ್ತಿದ್ದಾಗ ವಾಹನ ಡಿಕ್ಕಿಯಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ಬುಧವಾರ ಬೆಳಗ್ಗೆ ಮೃತಪಟ್ಟಿದ್ದಾರೆ.
ಬಾಲಕ ನಾಪತ್ತೆ
ಮೈಸೂರು: ಉದಯಗಿರಿ ಠಾಣೆ ವ್ಯಾಪ್ತಿಯ ನಿವಾಸಿ ಲೇ. ಬಾಬು ಎಂಬವರ ಪುತ್ರ ತೌಫೀಕ್ ಪಾಷ (15) ಆ.19 ರಿಂದ ನಾಪತ್ತೆಯಾಗಿದ್ದಾರೆ. ಈತ ಈ ಹಿಂದೆಯೆ 2 -3 ಬಾರಿ ಮನೆ ಬಿಟ್ಟು ಹೋಗಿ ವಾಪಸ್ ಬಂದಿದ್ದ. ಈ ಬಾರಿ ಬಂದಿಲ್ಲ. ಚಹರೆ- 4.6 ಅಡಿ ಎತ್ತರ, ಗೋದಿ ಮೈಬಣ್ಣ, ಗುಂಡು ಮುಖ, ಸಾಧಾರಣ ಮೈಕಟ್ಟು, ಕನ್ನಡ ಮಾತನಾಡುತ್ತಾನೆ. 0821- 2418309, 509 ಸಂಪರ್ಕಿಸಿ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement