ನಿವಾರಣೆಯಾಗದ ಕುಂದನಹಳ್ಳಿ 'ಬಡಾ'ವಣೆ ಸಮಸ್ಯೆ
ಕ.ಪ್ರ.ವಾರ್ತೆ ಮೈಸೂರು ಸೆ. 12
ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕು ಹುಣಸವಾಡಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕುಂದನಹಳ್ಳಿ ಜನತಾ ಬಡಾವಣೆಯ ಸಮಸ್ಯೆಗಳ ಪರಿಹಾರಕ್ಕಾಗಿ ದಿಲ್ಲಿಯ ತನಕ ದೂರು ನೀಡಿದರೂ ಪ್ರಯೋಜನವಾಗಿಲ್ಲ.
ಈ ಬಡಾವಣೆ ರಚನೆಯಾಗಿ ಎರಡು ದಶಕಗಳು ಉರುಳಿವೆ. ಅಲ್ಲಿ 30 ಮನೆಗಳಿದ್ದು, ಸರ್ಕಾರಿ ಶಾಲೆ ಹಾಗೂ ಅಂಗನವಾಡಿ ಕೇಂದ್ರ ಇದೆ. ಆದರೆ ಮೂಲಭೂತವಾಗಿ ಬೇಕಾದ ರಸ್ತೆ ಹಾಗೂ ಚರಂಡಿ ಸೌಲಭ್ಯವೇ ಇಲ್ಲ.
ಬಡಾವಣೆಗೆ ಮೂಲಭೂತ ಸೌಲಭ್ಯ ಪಡೆಯಬೇಕು ಎಂದು ನಿವಾಸಿಗಳಾದ ಜಯಮ್ಮ, ಶಿವಣ್ಣ ಅವರು ಗ್ರಾಪಂ, ತಾಪಂ, ಜಿಪಂ, ಸದಸ್ಯರು, ಶಾಸಕರು, ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ವಿವಿಧ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ಲೋಕಾಯುಕ್ತರು, ರಾಜ್ಯ ಮಾನವ ಹಕ್ಕುಗಳ ಆಯೋಗ, ಮುಖ್ಯಮಂತ್ರಿಗಳು, ರಾಜ್ಯಪಾಲರು- ಹೀಗೆ ಎಲ್ಲರಿಗೂ ಮನವಿ ಪತ್ರಗಳನ್ನು ಸಲ್ಲಿಸಿದ್ದಾರೆ. ಕೊನೆಗೆ ರಾಷ್ಟ್ರಪತಿ, ಪ್ರಧಾನಮಂತ್ರಿಗಳ ಗಮನವನ್ನೂ ಸೆಳೆದಿದ್ದಾರೆ. ಇವರ ಮನವಿಗೆ ಸ್ಪಂದಿಸಿ, ಪ್ರಧಾನಮಂತ್ರಿಗಳ ಕಾರ್ಯಾಲಯದಿಂದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಕ್ತ ಕ್ರಮ ವಹಿಸುವಂತೆ ಪತ್ರ ಬರೆದರೂ ಪ್ರಯೋಜನವಾಗಿಲ್ಲ.
ಐದು ಜಿಲ್ಲಾಧಿಕಾರಿಗಳ ಬದಲು: ಪ್ರತಿ ತಿಂಗಳ ಮೂರನೇ ಗುರುವಾರ ಮೈಸೂರು ಜಿಲ್ಲಾಧಿಕಾರಿ ಫೋನ್ ಇನ್ ಕಾರ್ಯಕ್ರಮ ನಡೆಸುತ್ತಾರೆ. ನಂತರ ಸಾರ್ವಜನಿಕ ಕುಂದುಕೊರತೆ ವಿಚಾರಣೆ ಸಭೆ ನಡೆಸುತ್ತಾರೆ. ಈವರೆಗೆ ಜಿಲ್ಲಾಧಿಕಾರಿಗಳಾಗಿ ಬಂದ ಐವರು ನಡೆಸಿದ ಇಂಥ ಸಭೆಗಳಿಗೆ ಹಾಜರಾಗಿ, ಮನವಿ ಸಲ್ಲಿಸಿದ್ದೇನೆ. ಅವರು ರಾಜಕಾರಣಿಗಳಿಗಿಂತ ಹೆಚ್ಚಾಗಿ ಭರವಸೆ ನೀಡುತ್ತಾರೆ. ಕೆಲಸ ಒಂದು ವಾರ ಅಥವಾ ಹದಿನೈದು ದಿನಗಳಲ್ಲಿ ಆಗಿಬಿಡುತ್ತದೆ ಎಂದು ಹೇಳುತ್ತಾರೆ. ಆದರೆ ಈಡೇರುವುದಿಲ್ಲ ಎನ್ನುತ್ತಾರೆ ಬಡಾವಣೆಯ ಹಿರಿಯ ನಾಗರಿಕ ಶಿವಣ್ಣ.
ಅದೇ ರೀತಿ ಜಿಪಂ ಸಿಇಒ ಸ್ಥಾನಕ್ಕೆ ನಾಲ್ವರು ಬಂದು ಹೋಗಿದ್ದಾರೆ. ಹಾಲಿ ಸಿಇಒ ಪಿ.ಎ. ಗೋಪಾಲ್ ಅವರು ಈ ಹಿಂದೆ ಜಿಪಂ ಯೋಜನಾ ನಿರ್ದೇಶಕರಾಗಿದ್ದಾಗ ಬಡಾವಣೆಗೆ ಭೇಟಿ ನೀಡಿ, ಸಮಸ್ಯೆಗಳನ್ನು ಕಣ್ಣಾರೆ ಕಂಡಿದ್ದರೂ ಬಗೆಹರಿಸಿಲ್ಲ. ಜಿಲ್ಲೆಯವರೇ ಆದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾದ ನಂತರ ನಾಲ್ಕು ಬಾರಿ ಮನವಿಪತ್ರಗಳನ್ನು ಕಳುಹಿಸಲಾಗಿದೆ. ಅಲ್ಲಿಂದ ಸಂಬಂಧಪಟ್ಟವರಿಗೆ ಎರಡು ಬಾರಿ ಪತ್ರ ಬಂದಿದ್ದರೂ ಅಧಿಕಾರಿಗಳು ಏನೂ ಮಾಡಿಲ್ಲ.
ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ್, ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್, ವಸತಿ ಸಚಿವ ಎಂ.ಎಚ್. ಅಂಬರೀಷ್ ಅವರಿಂದ ಯಾವುದೇ ಉತ್ತರ ಬಂದಿಲ್ಲ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾಗಿ ಬಂದ ಐವರಿಗೂ ಮನವಿಪತ್ರ ಸಲ್ಲಿಸಲಾಗಿದೆ.
ಜಿಪಂ ಸಿಇಒ ತಾಪಂ ಇಒಗೆ, ಗ್ರಾಪಂ ಪಿಡಿಒಗೆ ಪತ್ರ ಬರೆಯುತ್ತಾರೆ. ಪಿಡಿಒ ಕೇಳಿದರೆ ಜಿಪಂಗೆ ಬರೆದಿದ್ದೇವೆ. ಇನ್ನೂ ಉತ್ತರ ಬಂದಿಲ್ಲ ಎನ್ನುತ್ತಾರೆ. ಐದು ವರ್ಷಗಳಿಂದ ಇದೇ ಕಥೆಯಾಗಿದೆ ಎಂದು ವಿಷಾದಿಸುತ್ತಾರೆ ಶಿವಣ್ಣ. ನುಡಿದಂತೆ ನಡೆಯುವ ಸರ್ಕಾರ, ಅಭಿವೃದ್ಧಿಯೇ ಆಡಳಿತದ ಮಂತ್ರ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ಅವರ ಸರ್ಕಾರವಾದರೂ ಬಡಾವಣೆಗೆ ಮೂಲಭೂತ ಸೌಕರ್ಯ ಕಲ್ಪಿಸಬೇಕು. ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳನ್ನು ವಜಾ ಮಾಡಬೇಕು ಎಂಬುದು ಅವರ ಆಗ್ರಹ.
ಶಿಸ್ತು ಕ್ರಮದ ಎಚ್ಚರಿಕೆ: ಕುಂದನಹಳ್ಳಿ ಜನತಾ ಬಡಾವಣೆಗೆ ಮೂಲಭೂತ ಸೌಕರ್ಯ ಕಲ್ಪಿಸುವ ವಿಷಯ 2010ನೇ ಸಾಲಿನಿಂದಲೂ ಬಾಕಿ ಇದ್ದು, ರಾಷ್ಟ್ರಪತಿ, ಪ್ರಧಾನಮಂತ್ರಿವರೆಗೂ ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ಸಂಬಂಧಿಸಿದ ಕಾರ್ಯನಿರ್ವಾಹಕ ಅಧಿಕಾರಿ, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ, ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಕೆ.ಆರ್. ನಗರ ಪಂಚಾಯತ್‌ರಾಜ್ ಎಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ಗೆ ಕ್ರಿಯಾ ಯೋಜನೆಯಲ್ಲಿ ಸೇರ್ಪಡೆ ಮಾಡಿಕೂಂಡು ಅಗತ್ಯ ಕ್ರಮವಹಿಸಲು ತಿಳಿಸಿದ್ದರೂ ಯಾವುದೇ ಕ್ರಮ ವಹಿಸಿಲ್ಲ. ಈಗಲಾದರೂ ಕ್ರಮ ಕೈಗೊಳ್ಳದಿದ್ದಲ್ಲಿ ಹಾಗೂ ಪುನಃ ಮನವಿದಾರರಿಂದ ದೂರು ಬಂದಲ್ಲಿ ಸಂಬಂಧಪಟ್ಟವರನ್ನೆಲ್ಲ ಜವಾಬ್ದಾರಿಪಡಿಸಿ, ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಪಂ ಸಿಇಒ ಪಿ.ಎ. ಗೋಪಾಲ್ ಎಚ್ಚರಿಸಿದ್ದಾರೆ.
ಅಂಶಿ ಪ್ರಸನ್ನಕುಮಾರ್