ಸಹಾಯಕ ನಿರ್ದೇಶಕರ ವರ್ಗಕ್ಕೆ ಒತ್ತಾಯ
ಕ.ಪ್ರ.ವಾರ್ತೆ ಮೈಸೂರು ಸೆ. 12
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಕೆ.ಸುರೇಶ್ ಅವರನ್ನು ಕೂಡಲೆ ಮಾತೃ ಇಲಾಖೆಗೆ ವರ್ಗಾಯಿಸಬೇಕು ಎಂದು ಜಿಲ್ಲಾ ಖೋ ಖೋ ಕ್ರೀಡಾ ಸಂಸ್ಥೆ ಕಾರ್ಯದರ್ಶಿ ಎನ್.ಕೆ. ಸುಂದರ್ ಸೇರಿದಂತೆ ವಿವಿಧ ಕ್ರೀಡಾ ಸಂಘಟನೆಗಳ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.
ಜಿಲ್ಲಾ ವಾಲಿಬಾಲ್ ಸಂಸ್ಥೆಯ ಕಾರ್ಯದರ್ಶಿ ಎಚ್.ವಿ. ಉದಯಕುಮಾರ್, ಫುಟ್ಬಾಲ್ ಕ್ಲಬ್ ಕಾರ್ಯದರ್ಶಿ ಕೆ. ಗುರುರಾಜ್, ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಕಾರ್ಯದರ್ಶಿ ಎಲ್. ಮಂಜುನಾಥ್, ಸೂಪರ್ ಸಾನಿಕ್ ಸ್ಪೋಟ್ಸ್ ಕ್ಲಬ್ ಕಾರ್ಯದರ್ಶಿ ಪ್ರಕಾಶ್, ಜಿಲ್ಲಾ ಬಾಸ್ಕೆಟ್ಬಾಲ್ ಸಂಸ್ಥೆಯ ಖಜಾಂಚಿ ದಿನೇಶ್, ಈಜು ತರಬೇತುದಾರ ಟಿ.ಪುಟ್ಟಸ್ವಾಮಿ ಮತ್ತಿತರರು ಈ ಸಂಬಂಧ ಜಂಟಿ ಹೇಳಿಕೆ ನೀಡಿದ್ದಾರೆ. ಕ್ರೀಡಾ ಇಲಾಖೆಯಲ್ಲಿ ಐದು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಕೆ. ಸುರೇಶ್ ಇತಿಹಾಸ ಉಪನ್ಯಾಸಕರಾಗಿದ್ದು, ಅವರಿಗೆ ಕ್ರೀಡೆಯ ಬಗ್ಗೆ ಅರಿವಿಲ್ಲ. ಕಳೆದ 2009-10ನೇ ಸಾಲಿನಲ್ಲಿ ಚಾಮುಂಡಿ ವಿಹಾರ ಕ್ರೀಡಾಂಗಣದ ಕ್ರೀಡಾ ನಿಲಯದಲ್ಲಿನ ಕ್ರೀಡಾ ಪಟುಗಳಿಗೆ ಸರಿಯಾಗಿ ಊಟ, ಸಮವಸ್ತ್ರ ನೀಡದೆ, ಹಣ ದುರುಪಯೋಗ ಪಡಿಸಿಕೊಂಡಿದ್ದ ಆರೋಪದ ಮೇಲೆ ಅಂದಿನ ಕ್ರೀಡಾ ಸಚಿವ ಗೂಳಿಹಟ್ಟಿ ಶೇಖರ್ ಅವರು ಕೆ. ಸುರೇಶ್ ಅವರನ್ನು ಅಮಾನತುಪಡಿಸಿದ್ದರು. ಆದರೆ ರಾಜಕೀಯ ಪ್ರಭಾವ ಬಳಸಿಕೊಂಡು ಸುರೇಶ್ ಅದೆ ಹುದ್ದೆಯಲ್ಲಿ ಮುಂದುವರಿದಿದ್ದಾರೆ ಎಂದು ದೂರಿದ್ದಾರೆ.
ತರಾತುರಿ ಕಾಮಗಾರಿಯಿಂದ ಗುಣಮಟ್ಟಕ್ಕೆ ಕೊಡಲಿಪೆಟ್ಟು ಬೀಳುತ್ತದೆ. ಆದ್ದರಿಂದ ಕೆ. ಸುರೇಶ್ ಅವರನ್ನು ಕೂಡಲೆ ವರ್ಗಾಯಿಸಿ, ಸೂಕ್ತ ವ್ಯಕ್ತಿಯನ್ನು ನಿಯೋಜಿಸಬೇಕು ಎಂದು ಒತ್ತಾಯಿಸಿದ್ದಾರೆ.