'ಸಾಮಾಜಿಕ ಪಿಡುಗು ನಿವಾರಣೆಗೆ ಶ್ರಮಿಸಬೇಕು'
ಕೆ.ಆರ್. ನಗರ: ಬಾಲ್ಯ ವಿವಾಹದಂತಹ ಸಾಮಾಜಿಕ ಪಿಡುಗನ್ನು ತೊಡೆದು ಹಾಕಲು ಪ್ರತಿಯೊಬ್ಬರು ಬದ್ಧತೆಯಿಂದ ಕೆಲಸ ಮಾಡಬೇಕು ಎಂದು ಸಿಡಿಪಿಒ ಸದಾಶಿವ ಹೇಳಿದರು. ಬಸವೇಶ್ವರ ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಇಲಾಖೆಯ ವತಿಯಿಂದ ನಡೆದ ಗ್ರಾಮಮಟ್ಟದ ಬಾಲ್ಯವಿವಾಹ ನಿಷೇದಾಧಿಕಾರಿಗಳ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ನಿಷ್ಠುರ ಮತ್ತು ಪರಿಣಾಮಕಾರಿಯಾಗಿ ಕೆಲಸ ಮಾಡಿದರೆ ಗುರಿ ಸಾಧಿಸಬಹುದು. ಬಾಲ್ಯ ವಿವಾಹ ಮಾಡುವ ಕೆಲವರಿಗೆ ಕಾನೂನಿನ ಅರಿವು ಇರುವುದಿಲ್ಲ. ಅವರಿಗೆ ಅಧಿಕಾರಿಗಳು ಮನವರಿಕೆ ಮಾಡಿ ತಪ್ಪು ಮಾಡಿದರೆ ಸರ್ಕಾರ ಮತ್ತು ನ್ಯಾಯಾಲಯ ವಿಧಿಸುವ ಶಿಕ್ಷೆಯ ಬಗ್ಗೆ ತಿಳಿಸಿದರೆ ಮನಪರಿವರ್ತನೆ ಮಾಡಬಹುದು ಎಂದು ಅವರು ಹೇಳಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಟಿ. ಜವರೇಗೌಡ ಮಾತನಾಡಿ, ಬಾಲ್ಯ ವಿವಾಹ ನಿಷೇಧ ಮತ್ತು ಅದರ ದುಷ್ಪರಿಣಾಮಗಳ ಬಗ್ಗೆ ಗ್ರಾಮಮಟ್ಟದಲ್ಲಿ ಹೆಚ್ಚು ಪ್ರಚಾರವಾಗಬೇಕು ಮತ್ತು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಧಿಕಾರಿ ವರ್ಗ ಕೆಲಸ ಮಾಡಬೇಕು ಎಂದು ತಿಳಿಸಿದರು. ಸಹಾಯಕ ಶಿಶು ಅಭಿವೃದ್ಧಿ ಅಧಿಕಾರಿ ಲೀಲಾಂಬಿಕಾ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಲೋಕನಾಥ್ ಇದ್ದರು.