ಸುದ್ದಿ ಸಂಕ್ಷೇಪ
ಶಂಕುಸ್ಥಾಪನಾ ಸಮಾರಂಭ
ಕೆ.ಆರ್. ನಗರ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹೆಚ್ಚುವರಿ ಕಟ್ಟಡಗಳ ಶಂಕುಸ್ಥಾಪನಾ ಸಮಾರಂಭವು ಸೆ.13ರ ಬೆಳಗ್ಗೆ 10ಕ್ಕೆ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್ ಸಮಾರಂಭ ಉದ್ಘಾಟಿಸುವರು. ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ ಭಾಗವಹಿಸುವರು. ಶಾಸಕ ಸಾ.ರಾ. ಮಹೇಶ್ ಅಧ್ಯಕ್ಷತೆ ವಹಿಸುವರು. ಸಂಸದೆ ರಮ್ಯ, ಜಿಪಂ ಅಧ್ಯಕ್ಷ ಸಿ.ಜೆ. ದ್ವಾರಕೀಶ್, ವಿಧಾನ ಪರಿಷತ್ ಸದಸ್ಯರಾದ ಸಿ.ಎಚ್. ವಿಜಯಶಂಕರ್, ಗೋ. ಮಧುಸೂದನ್, ಮರಿತಿಬ್ಬೇಗೌಡ, ಸಿದ್ದರಾಜು, ಎಸ್. ನಾಗರಾಜು, ಕೆ.ವಿ. ನಾರಾಯಣಸ್ವಾಮಿ, ಆರ್. ಧರ್ಮಸೇನ ಭಾಗವಹಿಸುವರು.
ಸುರೇಶ್ ಆಯ್ಕೆ
ಟಿ. ನರಸೀಪುರ: ಟಿ. ನರಸೀಪುರ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷರಾಗಿ ಲೋಕೋಪಯೋಗಿ ಇಲಾಖೆಯ ದ್ವಿತೀಯ ದರ್ಜೆ ಸಹಾಯಕ ಆರ್. ಸುರೇಶ್ ಅವರನ್ನು ಆಯ್ಕೆ ಮಾಡಲಾಗಿದೆ.
ಪೇದೆ ಅಮಾನತು
ಹುಣಸೂರು: ದುರ್ನಡತೆ ಆರೋಪದ ಮೇಲೆ ಹುಣಸೂರು ಗ್ರಾಮಾಂತರ ಠಾಣೆಯ ಪೇದೆ ಮಂಜುನಾಥ್ ಎಂಬವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ ಅಮಾನತುಗೊಳಿಸಿದ್ದಾರೆ. ಮಂಜುನಾಥ್ ಠಾಣೆಯಲ್ಲಿ ದುರ್ನಡತೆ ಹಾಗೂ ಅಕ್ರಮ ಮರಳು ದಂಧೆಯಲ್ಲಿ ಭಾಗಿಯಾಗಿದ್ದರು ಎಂಬ ಆಪಾದನೆ ಎದುರಿಸುತ್ತಿದ್ದಾರೆ.