ಹುಲಿ ಪ್ರತ್ಯಕ್ಷ: ಸಾರ್ವಜನಿಕರಲ್ಲಿ ಆತಂಕ
ಕ.ಪ್ರ.ವಾರ್ತೆ ಎಚ್.ಡಿ.ಕೋಟೆ ಸೆ. 12
ತಾಲೂಕಿನ ಕಟ್ಟೆಮನುಗನಹಳ್ಳಿ ಗ್ರಾಮದ ಸಂಗಪ್ಪ, ಕೆಂಡಗಣ್ಣಪ್ಪ ಎಂಬವರ ಜಮೀನಿನಲ್ಲಿ ಗುರುವಾರ ಸಂಜೆ 4 ಗಂಟೆ ಸುಮಾರಿನಲ್ಲಿ ಹುಲಿ ಪ್ರತ್ಯಕ್ಷವಾಗಿದ್ದು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ. ನಾಗನಹಳ್ಳಿ ಸುತ್ತಲಿನ ಜಮೀನುಗಳಲ್ಲಿ ಹುಲಿಯು ಮೇಲಿಂದ ಮೇಲೆ ಕಾಣಿಸಿಕೊಳ್ಳುತ್ತಿದ್ದು ರೈತರು ತಮ್ಮ ಜಮೀನುಗಳಲ್ಲಿ ಕೆಲಸ ಮಾಡಲು ಭಯಪಡುವಂತಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಹುಲಿ ಪತ್ತೆಹಚ್ಚಿ ಸೆರೆಹಿಡಿಯುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ. ಈ ಪ್ರದೇಶದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಕಾರ್ಯಾಚರಣೆ ನಿಲ್ಲಿಸಲಾಗಿದ್ದು, ಶುಕ್ರವಾರದಿಂದ ಕಾರ್ಯಾಚರಣೆ ಮುಂದುವರಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಹುಲಿ ಜಮೀನಿನಲ್ಲಿ 3 ಆಡುಗಳನ್ನು ತಿಂದಿದೆ ಎಂದು ಗ್ರಾಪಂ ಸದಸ್ಯ ಸುರೇಶ್ ತಿಳಿಸಿದ್ದಾರೆ.
ಹುಲಿ ಪ್ರತ್ಯಕ್ಷವಾದ ಸ್ಥಳಕ್ಕೆ ಎಸ್‌ಟಿಟಿಎಫ್‌ನ ಎಸಿಎಫ್ ಮಹದೇವಯ್ಯ, ಸಾಮಾಜಿಕ ವಲಯ ಅರಣ್ಯಾಧಿಕಾರಿ ಮೋಹನ್ ಕುಮಾರ್ ಮತ್ತು ಸಿಬ್ಬಂದಿ ಭೇಟಿ ನೀಡಿದ್ದರು.