ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಕೃಷಿಯಾಚೆಗಿನ ಮತ್ಸ್ಯ ಖುಷಿ

Mainashree
Updated On : 13 Sept 2013, 11:17 am

ಕ.ಪ್ರ.ವಾರ್ತೆ  ಮೈಸೂರು  ಸೆ. 13
ಆತ್ಮ ಯೋಜನೆಯಡಿ ಕೈಗೊಂಡ ಅಂತರ ಜಿಲ್ಲೆಯೊಳಗಿನ ತರಬೇತಿ ಕಾರ್ಯಕ್ರಮದಿಂದ ಉತ್ತೇಜನಗೊಂಡ ಹುಣಸೂರು ತಾಲೂಕಿನ ರೈತರು ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡು ಕೈತುಂಬ ಲಾಭ ಮಾಡುತ್ತಿದ್ದಾರೆ.
ಅನಾದಿ ಕಾಲದಿಂದಲೂ ಮಾನವರು ಪಶುಸಂಗೋಪನೆ, ಮೀನುಗಾರಿಕೆ, ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಕೃಷಿಯನ್ನು ತಮ್ಮ ಜೀವನೋಪಾಯಕ್ಕಾಗಿ ಬಳಸುತ್ತಿದ್ದರು. ಕಾಲಕ್ರಮೇಣ ಕೃಷಿಗೆ ಮಾತ್ರ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾ ಇತರೆ ಕಸುಬುಗಳ ಬಗ್ಗೆ ತಮ್ಮ ಒಲವನ್ನು ಕಡಿಮೆ ಮಾಡಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ರೈತ ಕೃಷಿಯಷ್ಟೇ ಪ್ರಾಮುಖ್ಯತೆ ಹೊಂದಿರುವ ಇತರೆ ಕ್ಷೇತ್ರಗಳಲ್ಲೂ ಹೆಚ್ಚಿನ ಆಸ್ಥೆ ವಹಿಸುತ್ತಿದ್ದಾರೆ.
ಆತ್ಮ ಯೋಜನೆಯು ಕೃಷಿ ಮತ್ತು ಸಂಬಂಧಿಸಿದ ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿರುವ ರೈತರಿಗೆ ಹೊಸ ಹೊಸ ತಂತ್ರಜ್ಞಾನಗಳ ಮೂಲಕ ಹೆಚ್ಚಿನ ಇಳುವರಿ ಪಡೆಯುವುದರ ಬಗ್ಗೆ ಮಾಹಿತಿ ಒದಗಿಸುವುದಾಗಿದೆ. ಹಾಗೆಯೇ ಮೀನುಗಾರಿಕೆಗೆ ಸಂಬಂಧಿಸಿದ ಹಲವಾರು ತಾಂತ್ರಿಕತೆಗಳನ್ನು ಪರಿಚಯಿಸಬೇಕೆಂದು ತೀರ್ಮಾನಿಸಿ ಹುಣಸೂರು ತಾಲೂಕು, ಆತ್ಮ ಯೋಜನೆಯ ಅಧಿಕಾರಿಗಳು 2012-13ನೇ ಸಾಲಿನಲ್ಲಿ ರಾಜ್ಯದೊಳಗಿನ ತರಬೇತಿ ಕಾರ್ಯಕ್ರಮವನ್ನು ಕುಶಾಲನಗರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಿದ್ದರು.
ಹುಣಸೂರು ತಾಲೂಕು ಕಸಬಾ ಹೋಬಳಿ ಗೌರಿಪುರ ಗ್ರಾಮದ ಸೋಮಶೇಖರ ಎಂಬವರು ಕುಶಾಲನಗರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಜ್ಯದೊಳಗಿನ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದು ಅವರಿಗೆ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿತು.
ವಾರ್ಷಿಕ ಗುತ್ತಿಗೆ: ಗೌರಿಪುರ, ರತ್ನಪುರಿ ಮತ್ತು ಧರ್ಮಾಪುರದ ಮೀನುಗಾರರನ್ನೊಳಗೊಂಡ ರತ್ನಪುರಿ ಮೀನುಗಾರಿಕಾ ಸಹಕಾರ ಸಂಘದ ಮೂಲಕ ರತ್ನಪುರಿ ಸಂತೆಕರೆಯನ್ನು ವಾರ್ಷಿಕ 5,000ಕ್ಕೆ ಗುತ್ತಿಗೆಗೆ ಪಡೆದು ಕಾಟ್ಲಾ, ರೋಹು ಮತ್ತು ಮೃಗಾಲ್ ತಳಿಯ ಮೀನಿನ ಮರಿಗಳನ್ನು ಬಿಟ್ಟರು. ಮೀನಿನ ಮರಿಗಳು ಮಾರಾಟಕ್ಕೆ ಬರಲು ಕನಿಷ್ಠ 6 ತಿಂಗಳು ಬೇಕಾಗುತ್ತದೆ.
ಅವರು ಪ್ರತಿ ಬಾರಿ ಮಧ್ಯಾಹ್ನ 2ಕ್ಕೆ ಕೆರೆಗೆ ಬಲೆ ಬಿಡುತ್ತಾರೆ, ಮಾರನೆಯ ದಿನ ಬೆಳಗಿನ ಜಾವ 5.30ಕ್ಕೆ ಮೀನಿಗೆ ಬಲೆ ಬೀಸಲು ಕೆರೆಗೆ ಇಳಿಯುತ್ತಾರೆ. ಸಂಘದಲ್ಲಿ 87 ಜನ ಸದಸ್ಯರಿದ್ದು, 35 ಜನರು ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ. ಜನವರಿಯಿಂದ ಆಗಸ್ಟ್ವರೆಗೆ ಪ್ರತಿದಿನ 800-1,500 ಕೆ.ಜಿ ಮೀನು ಸಿಗುತ್ತದೆ. ಸೆಪ್ಟೆಂಬರ್ನಿಂದ ಡಿಸೆಂಬರ್ವರೆಗೆ 50-60 ಕೆ.ಜಿ ಮೀನು ಪ್ರತಿದಿನ ಸಿಗುತ್ತದೆ.
ಪ್ರತಿ ದಿನ ಹಿಡಿಯುವ ಮೀನಿನ ಪ್ರಮಾಣ ಅವರ ಆದಾಯ ಅವಲಂಬಿಸಿದೆ. ಒಂದು ಕೆ.ಜಿ ಮೀನನ್ನು 80ಕ್ಕೆ ಮಾರಿದರೆ 20 ಉಳಿತಾಯವಾಗುತ್ತದೆ. ಉಳಿದ 60 ಗಳನ್ನು ಸಂಘದ ಖಾತೆಗೆ ಜಮಾ ಮಾಡುತ್ತಾರೆ. ಪ್ರತಿದಿನ ಕಡಿಮೆಯೆಂದರೆ 26 ಕೆ.ಜಿ ಮೀನನ್ನು ಪ್ರತಿ ಮೀನುಗಾರ ಹಿಡಿಯುತ್ತಾನೆ. ಅದರಂತೆ ಪ್ರತಿದಿನ 520 ಸಿಗುತ್ತದೆ. ಇದು ಅವರ ಜೀವನ ನಿರ್ವಹಣೆಗೆ ಆಗುತ್ತದೆ.
ಜನವರಿಯಿಂದ ಆಗಸ್ಟ್ವರೆಗೆ ಪ್ರತಿದಿನ ಒಬ್ಬರಿಗೆ 1,000 ದಿಂದ 1,300 ವರೆಗೆ ಸಿಗುತ್ತದೆ.
ಅವರಿಗೆ ಬರುವ ಖರ್ಚೆಂದರೆ ಸಂತೆಕೆರೆಗೆ ಪ್ರತಿ 1,000 ಮೀನಿನ ಮರಿಗೆ 400 ರಂತೆ 7,00,000 ಮೀನಿನ ಮರಿಗಳನ್ನು ಬಿಡಲು ಖರೀದಿಸಿದ ವೆಚ್ಚ 2,80,000. ವಾರ್ಷಿಕ ಸಂಘದ ಕಾರ್ಯದರ್ಶಿಯ ವೇತನ 60,000. ಕಚೇರಿ ಬಾಡಿಗೆ ವಾರ್ಷಿಕ 48,000 ಇತರೆ ವೆಚ್ಚ ವಾರ್ಷಿಕ 5,000. ಒಟ್ಟು ವಾರ್ಷಿಕ ಖರ್ಚು 3,93,000. ಖರ್ಚೆಲ್ಲಾ ಕಳೆದು ವಾರ್ಷಿಕ 1,28,000 ಲಾಭ  ಸಂಘಕ್ಕೆ ಸಿಗುತ್ತದೆ. ಪ್ರತಿ ಮೀನುಗಾರ ಕೂಲಿಯಾಗಿ ಗಳಿಸುವ ಹಣ ವಾರ್ಷಿಕವಾಗಿ 1,87,200ಸಂಘದಿಂದ ಮೀನಿನ ಮರಿ ಕೊಳ್ಳಲು, ಕೆರೆಯನ್ನು ಮೀನುಗಾರಿಕೆಗೆ ವಾರ್ಷಿಕ ಗುತ್ತಿಗೆಗೆ ಪಡೆಯಲು ಸಾಲ ಸೌಲಭ್ಯ ಒದಗಿಸಲಾಗಿದೆ. ಉಳಿಸಿರುವ ಹಣದಲ್ಲಿ ಸಂಘಕ್ಕೆ ಸ್ವಂತ ಕಟ್ಟಡ ಕಟ್ಟಿಸಲು ನಿವೇಶನ ಕೊಳ್ಳುತ್ತಿದ್ದಾರೆ. ಸರ್ಕಾರದಿಂದ ಕ್ರೆಟ್ಗಳು, ಬಲೆಗಳನ್ನು ಕೊಳ್ಳಲು ಆರ್ಥಿಕ ಸಹಾಯ ಪಡೆದಿದ್ದಾರೆ.

ನಾನು ಮೀನುಗಾರಿಕೆಯಿಂದ ಬಂದ ಆದಾಯದಿಂದ 3 ಜನ ಹೆಣ್ಮಕ್ಕಳನ್ನು ಮದುವೆ ಮಾಡಿವ್ನಿ. ಮಗನನ್ನ ಓದಿಸ್ತಿದ್ದೀನಿ. ಸೈಕಲ್ನ ಬದ್ಲು ಸ್ಕೂಟರ್ ತಗಂಡಿದಿನಿ. ಇತ್ತೀಚೆಗೆ ಆತ್ಮ ಯೋಜನೆಯಿಂದ ಪಡೆದ ತರಬೇತಿಯಿಂದ ಮೀನುಗಾರಿಕೆಯಲ್ಲಿ ಸಾಕಷ್ಟು ಲಾಭ ಗಳಿಸಿದ್ದೀನಿ. ಮೀನುಗಾರಿಕೆ ನನ್ನ ಕೈ ಬಿಟ್ಟಿಲ್ಲ. ಮುಂದಿನ ದಿನಗಳಲ್ಲಿ ಕೃಷಿ ಹೊಂಡದಲ್ಲಿ ಮೀನು ಸಾಕಾಣಿಕೆ ಮಾಡಬೇಕಂತಿದಿನಿ.
   ಸೋಮಶೇಖರ, ಮೀನುಗಾರಿಕೆ ರೈತ.

ಆತ್ಮ ಯೋಜನೆಯಡಿ ಕೃಷಿ, ಮೀನುಗಾರಿಕೆ, ತೋಟಗಾರಿಕೆ, ರೇಷ್ಮೆ ಮತ್ತು ಪಶುಸಂಗೋಪನೆಗೆ ಸಂಬಂಧಿಸಿದಂತೆ ತರಬೇತಿಗಳ ಮೂಲಕ ರೈತರಿಗೆ ಪ್ರಸ್ತುತ ಅನುಸರಿಸಲಾಗುತ್ತಿರುವ ತಾಂತ್ರಿಕತೆಗಳ ಬಗ್ಗೆ ಮಾಹಿತಿ ಒದಗಿಸುವುದಾಗಿದೆ. ತಾಂತ್ರಿಕತೆಗಳನ್ನು ಅಳವಡಿಸಿಕೊಳ್ಳುವಂತೆ ರೈತರನ್ನು ಪ್ರೆರೇಪಿಸಲು ಪ್ರಾತ್ಯಕ್ಷಿತೆಗಳು ಮತ್ತು ರೈತ ಕ್ಷೇತ್ರಪಾಠಶಾಲೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
   ಜೆ. ವೆಂಕಟೇಶ್, ಸಹಾಯಕ ಕೃಷಿ ನಿರ್ದೇಶಕರು, ಹುಣಸೂರು.

ಮೀನು ಆಹಾರ ಪೌಷ್ಟಿಕಾಂಶಗಳ ಸಾರ. ಆರೋಗ್ಯ ದೃಷ್ಟಿಯಿಂದಲೂ ಉತ್ತಮವಾಗಿದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಮೀನಿಗೆ ಅಪಾರ ಬೇಡಿಕೆಯಿರುವುದರ ಜೊತೆಗೆ ಮೀನು ಸಾಕಾಣಿಕೆಗೆ ಜಿಲ್ಲೆಯಲ್ಲಿ ವಿಪುಲ ಅವಕಾಶಗಳಿದ್ದು, ರೈತ ಬಾಂಧವರು ವೈಜ್ಞಾನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದರಿಂದ ಹೆಚ್ಚಿನ ಆದಾಯ ಗಳಿಸಬಹುದು.
   ಡಾ.ಎಂ.ವಿ. ಗೋವಿಂದರಾಜು, ತಾಲೂಕು ತಾಂತ್ರಿಕ ವ್ಯವಸ್ಥಾಪಕರು (ಆತ್ಮ ಯೋಜನೆ), ಹುಣಸೂರು

 ಅಂಶಿ ಪ್ರಸನ್ನಕುಮಾರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement