ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

'ಗಾಂಧಿ ಟೋಪಿ ಧರಿಸುವವರಿಂದ ಪ್ರಯೋಜನವಿಲ್ಲ'

Mainashree
Updated On : 13 Sept 2013, 11:17 am

ಕ.ಪ್ರ.ವಾರ್ತೆ  ಮೈಸೂರು  ಸೆ. 13
ಗಾಂಧೀಜಿ ಅವರ ತತ್ವಾದರ್ಶ ಪಾಲಿಸದೆ ಕೇವಲ ಖಾದಿ ಬಟ್ಟೆ ಹಾಗೂ ಟೋಪಿ ಧರಿಸುವವರಿಂದ ಯಾವುದೇ ಪ್ರಯೋಜನವಾಗದು. ಸುಬ್ಬಣ್ಣ ಅವರಂತಹ ವ್ಯಕ್ತಿಗಳನ್ನು ಆದರ್ಶವಾಗಿ ಸ್ವೀಕರಿಸಿದಾಗ ಮಾತ್ರ ಗಾಂಧೀಜಿ ಅವರ ಆಶಯ ಈಡೇರಲು ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ ಪ್ರಸಾದ್ ಹೇಳಿದರು.
ನಗರದ ವಿದ್ಯಾರಣ್ಯಪುರಂನ ಟಿ.ಎಸ್. ಸುಬ್ಬಣ್ಣ ಸಾರ್ವಜನಿಕ ವಿದ್ಯಾಸಂಸ್ಥೆ ಆವರಣದಲ್ಲಿ ಶುಕ್ರವಾಪ ಏರ್ಪಡಿಸಿದ್ದ ಟಿ.ಎಸ್. ಸುಬ್ಬಣ್ಣ ಅವರ 22ನೇ ವರ್ಷದ ಸಂಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚೆಗೆ ಗಾಂಧಿವಾದಿಗಳೆಂದು ಹೇಳಿಕೊಳ್ಳುವವರು ಖಾದಿ ಬಟ್ಟೆ ತೊಡಲಷ್ಟೆ ಸೀಮಿತರಾಗಿದ್ದಾರೆ. ಆದರೆ ಸುಬ್ಬಣ್ಣ ಅವರಂತಹ ಕೆಲ ವ್ಯಕ್ತಿಗಳು ಮಾತ್ರ ಇಂತಹ ವಿದ್ಯಾಸಂಸ್ಥೆ ಕಟ್ಟುವ ಮೂಲಕ ಗಾಂಧೀಜಿ ತತ್ವವನ್ನು ತಮ್ಮ ಜೀವನದಲ್ಲಿ ಪಾಲಿಸುತ್ತಾರೆ. ಇಂತಹ ವ್ಯಕ್ತಿಗಳನ್ನು ಮಾದರಿಯಾಗಿಟ್ಟುಕೊಂಡಾಗ ಮಾತ್ರ ಗಾಂಧೀಜಿ ಅವರ ಆಶಯ ಈಡೇರಲು ಸಾಧ್ಯ ಎಂದರು.
40 ವರ್ಷಗಳ ಹಿಂದೆ ದೇಶದಲ್ಲಿ ಅಸ್ಪೃಶ್ಯತೆ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಅಂತಹ ಸಮಯದಲ್ಲೂ ಸುಬ್ಬಣ್ಣ ಹಾಗೂ ತಗಡೂರು ರಾಮಚಂದ್ರರಾಯರು ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ನಡೆಸುವುದರ ಮೂಲಕ ಇತರರಿಗೆ ಮಾದರಿಯಾಗಿದ್ದರು ಎಂದು ಸ್ಮರಿಸಿದರು.
ಜನರಿಂದ ಆಯ್ಕೆಯಾದ ಶಾಸಕರು ಮತ್ತು ಸಂಸದರು ತಮ್ಮ ಅನುದಾನದಲ್ಲಿ ಇಂತಹ ಸಂಸ್ಥೆಗಳಿಗೆ ಹಣ ನೀಡುವ ಮೂಲಕ ಸಂಸ್ಥೆ ಬೆಳೆಸಬೇಕು.
ಸರ್ಕಾರ ಮಾಡುವ ಕಾಮಗಾರಿಗಳಿಗೆ ತಮ್ಮ ಅನುದಾನ ನೀಡಿದರೆ ಅದರಿಂದ ಸಾರ್ಥಕತೆ ದೊರೆಯದು, ಸಾರ್ವಜನಿಕರಿಗಾಗಿ ನೀಡುವ ಹಣ ಸದ್ಬಳಕೆಯಾಗಬೇಕು ಎಂದು  ಅವರು ಹೇಳಿದರು.
ಶಾಸಕ ಎಂ.ಕೆ. ಸೋಮಶೇಖರ್ ಮಾತನಾಡಿದರು. ಸಂಸ್ಥೆಯ ಕಾರ್ಯದರ್ಶಿ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಿ. ಬಸವೇಗೌಡ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಸ್ವಾತಂತ್ರ ಹೋರಾಟಗಾರರಾದ ಎಂ.ಆರ್.ರಾಮಶೇಷನ್, ಸಾಹಿತಿ ಪ್ರೊ.ಜಿ.ಎಚ್. ನಾಯಕ, ನಗರಪಾಲಿಕೆ ಸದಸ್ಯ ಎಂ. ಸುನಿಲ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement