ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ನಾಡಹಬ್ಬ ದಸರಾ ಆಚರಣೆಗೆ ಚಿಂತಕರ ಹಲವು ಸಲಹೆ

Mainashree
Updated On : 13 Sept 2013, 11:18 am

ಕ.ಪ್ರ.ವಾರ್ತೆ  ಮೈಸೂರು  ಸೆ. 13
ವಿಶ್ವವಿಖ್ಯಾತ ನಾಡಹಬ್ಬ ದಸರಾ ಸದ್ಯ ಸಾಂಪ್ರದಾಯಿಕ ಹಬ್ಬವಾಗಿ ಉಳಿದಿಲ್ಲ. ದಸರಾ ಹತ್ತಿರ ಬರುತ್ತಿದ್ದಂತೆ ಸಿದ್ಧತೆ ಮಾಡಿಕೊಳ್ಳುವ ಬದಲು ಮೂರು ತಿಂಗಳಿಂದಲೇ ಆರಂಭವಾದರೆ ಉತ್ತಮ, ಹೊರ ದೇಶದಿಂದ ಕರೆಸುವ ಕಲಾವಿದರಿಗೆ ರಾಜಾತಿಥ್ಯ, ಸ್ಥಳೀಯ ಕಲಾವಿದರ ಕಡೆಗಣನೆ ಸರಿಯಲ್ಲ, ಮೈಸೂರಿನಲ್ಲಿ ಗರಡಿ ಮನೆಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಇವುಗಳ ಅಭಿವೃದ್ಧಿಗೆ ಸರ್ಕಾರ ಗಮನ ಹರಿಸಬೇಕಿದೆ...
- ಹೀಗೆ ದಸರಾಗೆ ಸಂಬಂಧಿಸಿದ ಅನೇಕ ಅಭಿಪ್ರಾಯಗಳು ವಿವಿಧ ಕ್ಷೇತ್ರಗಳ ಗಣ್ಯರಿಂದ ವ್ಯಕ್ತವಾದವು. ಮೈಸೂರು ಜಿಲ್ಲಾ ಪತ್ರಕರ್ತರ ಸಂಘವು ಶುಕ್ರವಾರ ಏರ್ಪಡಿಸಿದ್ದ ದಸರಾ ಸೃಷ್ಟಿ- ದೂರ ದೃಷ್ಟಿ ಕುರಿತ ಸಂವಾದದಲ್ಲಿ ಕುಸ್ತಿ, ಪ್ರವಾಸೋದ್ಯಮ, ಅರಣ್ಯ ಇಲಾಖೆ, ಪತ್ರಿಕಾ ರಂಗ, ಕಲಾವಿದರು, ಇತಿಹಾಸ ವಿಭಾಗದ ಪ್ರತಿನಿಧಿಗಳು ತಮ್ಮ ಮಾತುಗಳಲ್ಲಿ ಜಿಲ್ಲಾಡಳಿತಕ್ಕೆ ಅನೇಕ ಸಲಹೆ ಸೂಚನೆ ನೀಡಿದರು.
ಹಿರಿಯ ಪತ್ರಕರ್ತ ಕೃಷ್ಣವಟ್ಟಂ ಮಾತನಾಡಿ, ರಾಜರು ಸಾಮ್ರಾಜ್ಯವನ್ನು ಆಳುವುದರ ಜತೆಗೆ ನಾಡಿನ ಸಂಸ್ಕೃತಿ, ಸಾಹಿತ್ಯ, ಪರಂಪರೆಯನ್ನು ಕಟ್ಟಿ ಬೆಳೆಸಿದರು. ಅದರಲ್ಲಿ ಪ್ರಮುಖವಾದ ದಸರಾವನ್ನು ಇಂದಿಗೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಡೆಸಿಕೊಂಡು ಬರಲಾಗುತ್ತಿದೆ. ಆದರೆ, ಸಂಪ್ರದಾಯ ಮರೆಯಾಗಿದೆ. ಕೆಲವು ಕಾರಣಗಳಿಂದ ನಿಂತು ಹೋಗಿದ್ದ ದಸರೆಗೆ 1980 ರಲ್ಲಿ ಗುಂಡೂರಾಯರ ಸರ್ಕಾರ ಆಚರಣೆಗೆ ಚಾಲನೆ ನೀಡಿತು. ಆನೆಯ ಮೇಲೆ 750 ಕೆಜಿ ತೂಕದ ಚಿನ್ನದ ಅಂಬಾರಿ ಹೊರಿಸಿ ಹಿಂಸಿಸುವುದಕ್ಕಿಂತ ತೂಕವನ್ನು ಕಡಿಮೆ ಮಾಡಲು ಪರ್ಯಾಯ ಮಾರ್ಗ ಹುಡುಕಬೇಕಿದೆ ಎಂದರು.
ಇತಿಹಾಸಜ್ಞ ಪ್ರೊ.ಪಿ.ವಿ. ನಂಜರಾಜ ಅರಸ್ ಮಾತನಾಡಿ, ದಸರಾ ಆಚರಣೆಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಲು ನಾವೆಲ್ಲ ಮುಂದಾಗಬೇಕು. ಅದಕ್ಕಾಗಿ ದಸರಾ ಪರಂಪರೆಯ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಬೆಳೆಸಿಕೊಳ್ಳಬೇಕು. ಅಧಿಕಾರಿಗಳು ಹಾಗೂ ರಾಜಕಾರಣಿಗಳು ಸಾಂಸ್ಕೃತಿಕ ಪೂಜೆಯ ಬದಲಾಗಿ ಲಕ್ಷ್ಮೀ (ಹಣ) ಪೂಜೆಗೆ ಮಾನ್ಯತೆ ನೀಡಿರುವುದು ವಿಪರ್ಯಾಸ. ಜಂಬೂ ಸವಾರಿಗೆ ಯಾರು ಪುಷ್ಪಾರ್ಚನೆ ಮಾಡಬೇಕು ಎಂಬುದೇ ಇವರಿಗೆ ಗೊತ್ತಿಲ್ಲ. ರಾಜ್ಯಾವಾಳುವ ಮುಖ್ಯಮಂತ್ರಿ, ನಗರದ ಪ್ರಥಮ ಪ್ರಜೆ ಮೇಯರ್, ಜಿಲ್ಲಾಧಿಕಾರಿ ಮಾತ್ರ ವೇದಿಕೆ ಏರಬೇಕು. ಇದು ಉಲ್ಲಂಘನೆಯಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.
ಹೊರಗಿನ ಕಲಾವಿದರಿಗೆ ರಾಜಾತಿಥ್ಯ: ಕಲಾವಿದರ ಪರ ಮಾತನಾಡಿದ ನಂದಿಧ್ವಜದ ಮಹದೇವಪ್ಪ ಉಡಿಗಾಲ, ದಸರಾ ಮಹೋತ್ಸವದಲ್ಲಿ ಕಾರ್ಯಕ್ರಮ ನಡೆಸಿಕೊಡಲು ಹೊರ ರಾಜ್ಯಗಳಿಂದ ಕರೆಸುವ ಕಲಾವಿದರಿಗೆ ರಾಜಾತಿಥ್ಯ ನೀಡಲಾಗುತ್ತದೆ. ಅದೇ ಜಂಬೂ ಸವಾರಿ ಮೆರವಣಿಗೆ ದಿನಪೂರ್ತಿ ಪ್ರತಿಭೆ ಪ್ರದರ್ಶಿಸುವ ಕಲಾವಿದರನ್ನು ನಿರ್ಲಕ್ಷಿಸಲಾಗುತ್ತದೆ. ಇದು ನಮಗೂ ನೋವು ತಂದಿದೆ. ನಮಗೆ ಹಣ ಬೇಡ. ಕೇವಲ ಗೌರವ ನೀಡಿದರೆ ಸಾಕು ಎಂದರು.
ಸಿದ್ದಾರ್ಥ ಹೋಟೆಲ್ ಮಾಲೀಕ ಗಿರಿ ಮಾತನಾಡಿ, ದಸರಾ ಎಂದರೆ ವಿಶ್ವವಿಖ್ಯಾತ ಎಂದು ನಾವು ಹೇಳುತ್ತೇವೆ. ಆದರೆ, ಹೊರ ದೇಶದವರಿಗೆ ಈ ಬಗ್ಗೆ ಮಾಹಿತಿ ಕೊರತೆ ಸಾಕಷ್ಟಿದೆ. ರಾಜ್ಯ ಸರ್ಕಾರ ದಸರಾಗೂ ಮುಂಚೆ ಈ ನಿಟ್ಟಿನಲ್ಲಿ ಕೆಲವು ಕಾರ್ಯಕ್ರಮ ರೂಪಿಸಬೇಕು ಎಂದು ಸಲಹೆ ನೀಡಿದರು. ಅರಣ್ಯ ಇಲಾಖೆ ನಿವೃತ್ತ ಕಾರ್ಯದರ್ಶಿ ಎ.ಸಿ. ಲಕ್ಷ್ಮಣ್ ಮಾತನಾಡಿ, ಆನೆಗೆ 750 ಕೆಜಿ ತೂಕದ ಅಂಬಾರಿ ಕಷ್ಟವೆನಿಸದು. ಆದರೆ, ಅದನ್ನು ಹೊರಲು ಬೇಕಾದ ದೈಹಿಕ ಶಕ್ತಿಯನ್ನು ನಾವು  ನೀಡಬೇಕು. ಪೌಷ್ಟಿಕ ಆಹಾರ ನೀಡಬೇಕು. ಅವುಗಳ ಹತ್ತಿ ಜನರು ಹೋಗಿ ಕೀಟಲೆ ಮಾಡದಂತೆ ತಡೆಗಟ್ಟಬೇಕು. ಆನೆಗಳು ರಮ್ಮು ಕುಡಿಯುತ್ತವೆ ಎಂದು ಬರೆಯಬಾರದು ಎಂದು ಮನವಿ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement