ನೈಸರ್ಗಿಕ ಕೃಷಿಯ ಕಿರುಧಾನ್ಯ ಮೇಳ ಶುರು
ಕ.ಪ್ರ.ವಾರ್ತೆ ಮೈಸೂರು ಸೆ. 13
ಮಾಲಿನ್ಯಮುಕ್ತ ನೈಸರ್ಗಿಕ ಆಹಾರೋತ್ಪನ್ನಗಳ ಮಾರಾಟ ಮೇಳವು ನಂಜರಾಜ ಬಹದ್ದೂರ್ ಛತ್ರದಲ್ಲಿ ಶುಕ್ರವಾರ ಆರಂಭವಾಯಿತು.
ಗ್ರಾಮೀಣ ನ್ಯಾಚುರಲ್ ಸಂಸ್ಥೆಯು ಆಯೋಜಿಸಿರುವ ಮೂರು ದಿನಗಳ ಸಹಜ ಕೃಷಿಯ ಕಿರುಧಾನ್ಯ ಮೇಳವನ್ನು ಅಂತಾರಾಷ್ಟ್ರೀಯ ಟೆನ್ನಿಸ್ ಕ್ರೀಡಾಪಟಛು ಪೂಜಾಶ್ರೀ ವೆಂಕಟೇಶ್ ಉದ್ಘಾಟಿಸಿದರು.
ಸಹಜ ಸಮೃದ್ಧಿ ಸಂಸ್ಥೆ ನಿರ್ದೇಶಕ ಕೃಷ್ಣಪ್ರಸಾದ್, ಆಯುರ್ವೇದ ಆಹಾರ ತಜ್ಞ ಡಾ.ಖಾದರ್, ನೈಸರ್ಗಿಕ ಕೃಷಿಕ ಶಿವಳ್ಳಿ ಬೋರೇಗೌಡ ಮುಖ್ಯ ಅತಿಥಿಗಳಾಗಿದ್ದರು. ಸಂಸ್ಥೆ ಮುಖ್ಯಸ್ಥ ಎನ್. ಪ್ರಸನ್ನ, ಸಂಚಾಲಕರಾದ ಬಿ. ರಾಜು, ಎಂ.ಎಚ್. ಶ್ರೀಧರಮೂರ್ತಿ ಇದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಸಹಜ ಸಮೃದ್ಧಿ ನಿರ್ದೇಶಕ ಕೃಷ್ಣಪ್ರಸಾದ್, ಭಾರತದಲ್ಲಿ ಬೇರೆಲ್ಲೂ ಕಾಣದಂತಹ ಕಿರುಧಾನ್ಯಗಳನ್ನು ಕರ್ನಾಟಕದಲ್ಲಿ ಬೆಳೆಯಲಾಗುತ್ತಿದೆ. ಹೃದಯಬೇನೆ, ಬೊಜ್ಜು, ಮಧುಮೇಹ ಮುಂತಾದ ರೋಗಗಳಿಗೆ ಹಲವು ಕಿರುಧಾನ್ಯಗಳು ಸಹಕಾರಿಯಾಗಿದ್ದು, ಈ ಬಗ್ಗೆ ಈವರೆಗೂ ಯಾವುದೇ ವಿವಿಯೂ ಸಂಶೋಧನೆ ನಡೆಸಿಲ್ಲ ಎಂದು ವಿಷಾದಿಸಿದರು.
ಪದಾರ್ಥ ಬೆಳೆಯಲು ಹೆಚ್ಚು ವೆಚ್ಚ: ಸರ್ಕಾರ 1ಗೆ ಅಕ್ಕಿ ನೀಡುತ್ತಿದ್ದು, ಅಂದ ಮಾತ್ರಕ್ಕೆ ಸೊಸೈಟಿ ಅಕ್ಕಿ ಜತೆಗೆ ಇತರೆ ಅಕ್ಕಿಯನ್ನು ಹೊಲಿಸುವುದು ಸರಿಯಲ್ಲ. ಸಹಜ ಕೃಷಿಯಲ್ಲಿ ಬೆಳೆಯುವ ಆಹಾರ ಧಾನ್ಯಗಳಲ್ಲಿ ತುಂಬಾ ಸತ್ವ ಇರುತ್ತದೆ. ಇದನ್ನು ಬೆಳೆಯಲು ಸಮಯ ಹಾಗೂ ವೆಚ್ಚ ಅಧಿಕವಾಗುವ ಹಿನ್ನೆಲೆಯಲ್ಲಿ ಪದಾರ್ಥಗಳ ಬೆಲೆಯಲ್ಲಿ ವ್ಯತ್ಯಾಸ ಕಾಣಬಹುದು ಎಂದರು. ಮೇಳದಲ್ಲಿ ನವಣಿ, ಸಾಮೆ, ಆರ್ಕಾ, ಸಜ್ಜೆ, ಕೊರಲು, ನವಣೆ, ಸಾಮ ರವೆ, ನವಣೆ ರವೆ, ಜೋಳದ ರವೆ, ಕೆಂಪಕ್ಕಿ, ಗಂಧಸಾಲೆ, ಸೋನಾ ಮಸೂರಿ, ರಾಜಮುಡಿ, ಬಾಣಂತಿ ಅಕ್ಕಿ, ಮೊಗದ ಸಿರಿ, ಸಣ್ಣವಾಳ್ಯ, ಮಧುಮೇಹ ಅಕ್ಕಿ, ಸುಮತಿ ಅಭಿಲಾಷ, ನವರ, ಬೆಳಗಾಂ ಬಾಸುಮತಿ, ಮೈಸೂರು ಸಣ್ಣ, ಅಕ್ಕಿ ನುಚ್ಚು, ರವೆ ಮತ್ತು ವಿವಿಧ ಹಿಟ್ಟುಗಳನ್ನು ಮಾರಾಟಕ್ಕಿಡಲಾಗಿದೆ. ಕುಸುಬೆ ಎಣ್ಣೆ, ಸೂರ್ಯಕಾಂತಿ ಎಣ್ಣೆ, ಸಾಸಿವೆ ಎಣ್ಣೆ, ಅಗಸೆ ಎಣ್ಣೆ, ಬೇವಿನ ಎಣ್ಣೆ, ಅಲಿವ್ ಎಣ್ಣೆ, ಶೇಂಗಾ ಎಣ್ಣೆ, ಕಾಡುಜೇನು ತುಪ್ಪ, ಡ್ರೈ ಫ್ರೂಟ್ಸ್, ನೈಸರ್ಗಿಕ ಹಣ್ಣಿನ ಜಾಮ್, ಮಸಾಲ ಪದಾರ್ಥಗಳು, ಸಂಡಿಗೆ ಹಪ್ಪಳ, ಉಪ್ಪಿನಕಾಯಿ, ಬೆಲ್ಲ, ಗ್ರೀನ್ ಟೀ, ವಿವಿಧ ಶರಬತ್ತುಗಳು ಹಾಗೂ ಸೌಂಧರ್ಯ ವರ್ಧಕಗಳು ಇಲ್ಲಿ ಲಭ್ಯವಿದೆ. ಬೆಳಗ್ಗೆ 10 ರಿಂದ ರಾತ್ರಿ 8 ರವರೆಗೆ ಮೇಳ ತೆರದಿರುತ್ತದೆ.
ನೈಸರ್ಗಿಕ ಆಹಾರ ಉತ್ಪನ್ನಗಳಲ್ಲಿ ಪೌಷ್ಟಿಕಾಂಶ ಹೆಚ್ಚಾಗಿರುತ್ತದೆ. ಕಳೆದ 5 ವರ್ಷಗಳಿಂದ ಇದನ್ನು ಉಪಯೋಗಿಸುತ್ತಿದ್ದೇನೆ. ಆರೋಗ್ಯಕ್ಕೆ ಪೂರಕವಾದ ಇಂತಹ ಪದಾರ್ಥಗಳನ್ನು ಕೇವಲ ವಯಸ್ಸಿನವರು ಮಾತ್ರ ಉಪಯೋಗಿಸಿದರೆ ಸಾಲದು. ಬೆಳೆಯುವ ಮಕ್ಕಳಿಗೆ ಕೊಡುವುದರಿಂದ ಅವರ ಆರೋಗ್ಯ ಬಲಿಷ್ಠವಾಗಲು ಸಹಾಯಕವಾಗಲಿದೆ.
ಡಾ. ವೀಣಾ, ಮಕ್ಕಳ ತಜ್ಞೆ
ಕಳೆದ ವರ್ಷ ಬೆಂಗಳೂರಿನ ಲಾಲ್ಬಾಗ್ನಲ್ಲಿ ಕಿರುಧಾನ್ಯ ಮೇಳವನ್ನು ಏರ್ಪಡಿಸಿದ್ದೆವು. ಅದಕ್ಕೆ ದೊರಕಿದ ಉತ್ತಮ ಪ್ರತಿಕ್ರಿಯೆಯಿಂದ ಮೈಸೂರಿನಲ್ಲಿ ಆಯೋಜಿಸಲಾಗಿದೆ. ಆಹಾರ ಪದ್ಧತಿ ಬದಲಾಗುತ್ತಿರುವ ಈ ಸಂದರ್ಭದಲ್ಲಿ ಕಿರುಧಾನ್ಯ ಉಪಯೋಗಿಸುವವರ ಸಂಖ್ಯೆ ಕ್ಷೀಣಿಸುತ್ತಿದ್ದು, ಇದರ ಮಹತ್ವವ ತಿಳಿಸುವುದು ಹಾಗೂ ಅದನ್ನು ಬೆಳೆಯುವ ರೈತರಿಗೆ ಉತ್ತೇಜನ ನೀಡುವ ಸಲುವಾಗಿ ಇಂತಹ ಮೇಳ ಆಯೋಜಿಸಲಾಗಿದೆ.
ಎನ್. ಪ್ರಸನ್ನ, ಮುಖ್ಯಸ್ಥ, ಗ್ರಾಮೀಣ ನ್ಯಾಚುರಲ್