ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಪಾಲಿಸಿ ಸರೆಂಡರ್ ಮಾಡಿದರೂ ಹಣ ನೀಡದ ಎಲ್ಲೈಸಿ

Mainashree
Updated On : 13 Sept 2013, 11:11 am

ಕ.ಪ್ರ.ವಾರ್ತೆ  ಮೈಸೂರು  ಸೆ. 13
ಯಾರೇ ಆಗಲಿ ಜೀವವಿಮಾ ನಿಗಮ ಪಾಲಿಸಿ ಮಾಡಿಸುವುದು, ಬ್ಯಾಂಕ್‌ಗಳಲ್ಲಿ ಠೇವಣಿ ಮಾಡುವುದು ಆಪತ್ ಕಾಲದಲ್ಲಿ ನೆರವಿಗೆ ಬರುತ್ತದೆ ಎಂದು. ಆದರೆ ವ್ಯಕ್ತಿಯೊಬ್ಬರು ಮಗಳ ಮದುವೆ ಖರ್ಚಿಗೆಂದು ಪಾಲಿಸಿಯನ್ನು ಸರೆಂಡರ್ ಮಾಡಿದರೂ ಭಾರತೀಯ ಜೀವವಿಮಾ ನಿಗಮ ಹಣ ನೀಡದೆ ಸತಾಯಿಸುತ್ತಿರುವ ಪ್ರಕರಣ ನಡೆದಿದೆ.
ಮೈಸೂರಿನ ಕೆ.ಆರ್. ಮೊಹಲ್ಲಾ ದೇವಾಂಬ ಅಗ್ರಹಾರ ನಿವಾಸಿ, ಸ್ವತಃ ಎಲ್ಲೈಸಿ ಏಜೆಂಟ್, ಸಂಖ್ಯಾಶಾಸ್ತ್ರಜ್ಞ, ಕಲಾವಿದ ಎನ್. ಲೋಕೇಶ್ ಎಂಬವರು 1988 ರಲ್ಲಿ 10,000 ಮೌಲ್ಯದ ಎಂಡೋಮೆಂಟ್ ಪಾಲಿಸಿಯನ್ನು ಖರೀದಿಸಿದರು. ವೇತನ ಪಾವತಿ ವಿಧಾನದಿಂದ 2012 ರವರೆಗೆ ಪ್ರೀಮಿಯಂ ಪಾವತಿಸಿದ್ದಾರೆ. ಈ ವರ್ಷದ ಅಂದರೆ 2013ರ ಡಿಸೆಂಬರ್‌ನಲ್ಲಿ ಪಾಲಿಸಿ ಮೆಚ್ಯೂರ್ ಆಗುವುದರಲ್ಲಿತ್ತು. ಆದರೆ ಜೂನ್ ತಿಂಗಳಲ್ಲಿ ಅವರ ಪುತ್ರಿಯ ವಿವಾಹವಿತ್ತು. ಇದಕ್ಕಾಗಿ ಖರ್ಚಿಗೆ ಹಣ ಬೇಕಾಯಿತು. ಆಗ ಅವರು ಪಾಲಿಸಿ ಸರೆಂಡರ್ ಮಾಡಿ, ಹಣವನ್ನು ಬೋನಸ್ ಸಮೇತ ವಾಪಸ್ (ಸುಮಾರು 21,000 ಆಗುತ್ತದೆ) ಮಾಡುವಂತೆ ಅರ್ಜಿ ಸಲ್ಲಿಸಿದರು.
ಆದರೆ ಅಧಿಕಾರಿಗಳು 1995 ರಲ್ಲಿ ಬೇರೊಬ್ಬರಿಗೆ ಸಾಲಕ್ಕೆ ಖಾತರಿ ನೀಡಿರುವುದಾಗಿ ತಿಳಿಸಿದರು. ಅದರಂತೆ ಲೋಕೇಶ್ ಅವರು ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಗೆ (ಕೆಎಸ್‌ಎಎಫ್‌ಸಿ) ಹೋಗಿ ಸಾಲಕ್ಕೆ ಖಾತರಿ ನೀಡಿರುವ ಬಗ್ಗೆ ಪರಿಶೀಲಿಸಿದರು. ಸಾಲ ತಿರುವಳಿಯಾಗಿದೆ ಎಂದು ಸಾಲ ತಿರುವಳಿ ಪತ್ರ, ರೀ ಅಸೈನ್‌ಮೆಂಟ್ ಪತ್ರ, ಇನ್‌ಡೆಮ್ಮಿಟಿ ಬಾಂಡ್, ಇತೆ ದಾಖಲೆಗಳನ್ನು ಎಲ್ಲೈಸಿ ಶಾಖೆ-4ಕ್ಕೆ ಸಲ್ಲಿಸಿದರು. ಆದರೆ ಅಲ್ಲಿನ ಅಧಿಕಾರಿಗಳು ಯಾವುದೋ ಹಿಂದಿನ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ತಕರಾರು ಮಾಡಿದರು. ಸಂಬಂಧಪಟ್ಟ ವಿಷಯ ಪರಿವೀಕ್ಷಕರು ಇದು ಕಡಿಮೆ ಮೊತ್ತ. ಆದ್ದರಿಂದ ಪಾವತಿಸಬಹುದು ಎಂದು ಸಲಹೆ ಮಾಡಿದರೂ ಆ ಅಧಿಕಾರಿ ಕೇಳಲಿಲ್ಲ.
ಕಲ್ಲುಬಂಡೆಯಂತೆ ವರ್ತಿಸಿದ ಅಧಿಕಾರಿಗಳು: ಆದರೆ ಬನ್ನಿಮಂಟಪದಲ್ಲಿರುವ ಎಲ್ಲೈಸಿ ವಿಭಾಗೀಯ ಕಚೇರಿಗೆ ಹೋದಾಗ ಅಲ್ಲಿನ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೌಜನ್ಯದಿಂದ ವರ್ತಿಸಿ, ಮಂಡ್ಯದಿಂದ ಸಂಬಂಧಪಟ್ಟ ದಾಖಲೆಗಳ ಪ್ರತಿಗಳನ್ನು ತರಿಸಿಕೊಟ್ಟರು. ಅದರ ಪ್ರತಿಯನ್ನು ಶಾಖೆ-4ರ ಆಡಳಿತಾಧಿಕಾರಿಗೂ ಕಳುಹಿಸಿಕೊಟ್ಟರು. ನಾನು ವಿಭಾಗೀಯ ಕಚೇರಿಗೆ ಹೋಗಿದ್ದೆ ತಪ್ಪು ಎಂದು ಭಾವಿಸಿ, ಆಡಳಿತಾಧಿಕಾರಿ ಜೋರು ಮಾಡಿದರು. ಮಗಳ ಮದುವೆಯ ಖರ್ಚಿಗೆ ತುರ್ತು ಹಣ ಬೇಕಾಗಿದೆ ಎಂದರೂ ಅವರು ಮನುಷ್ಯತ್ವ ಇಲ್ಲದ ಕಲ್ಲುಬಂಡೆಯಂತೆ ವರ್ತಿಸಿದರು. ಹಣ ಪಾವತಿಗೆ ವಿನಾಕಾರಣ ವಿಳಂಬ ಮಾಡುತ್ತಿದ್ದಾರೆ ಎಂಬುದು ಲೋಕೇಶ್ ಅವರ ಆರೋಪ. ಜನರು ಕಷ್ಟಸುಖಕ್ಕೆ ಆಗಲಿ ಎಂದೇ ಪಾಲಿಸಿ ಮಾಡಿಸುತ್ತಾರೆ. ಕಷ್ಟಕಾಲದಲ್ಲಿ ಪಾಲಿಸಿ ಸರೆಂಡರ್ ಮಾಡಿ, ಹಣ ಕೇಳುವುದು ತಪ್ಪೆ. ಇದು ಜೀವ ವಿಮಾ ನಿಗಮದ ಘೋಷ ವಾಕ್ಯಕ್ಕೆ ಧರ್ಮ ಹಾಗೂ ನ್ಯಾಯಸಮ್ಮತಲ್ಲ ಎಂದು ಅವರು ಹೇಳಿದ್ದಾರೆ.
2012ರ ಜುಲೈ 6 ರಿಂದ ಈ ಸಂಬಂಧ ಹೋರಾಟ ನಡೆಸುತ್ತಿದ್ದೇನೆ. 2013ರ ಸೆಪ್ಟೆಂಬರ್ ಬಂದರೂ ನನಗೆ ನ್ಯಾಯ ಸಿಕ್ಕಿಲ್ಲ. ಎಲ್ಲೈಸಿಯವರು ನನಗೆ ಸಲ್ಲಬೇಕಾದ ಪಾಲಿಸಿಯ ಹಣ ನೀಡಲಿ ಇಲ್ಲವೇ ಕೊಡಲು ಬರುವುದಿಲ್ಲ ಎಂದು ಪ್ರಕಟಿಸಲಿ. ಆಗ ಎಲ್ಲೈಸಿಯ ಸೇವಾ ಮನೋಭಾವ ಎಲ್ಲರಿಗೂ ಗೊತ್ತಾಗುತ್ತದೆ ಎಂದು ಅವರು ಹೇಳಿದ್ದಾರೆ.

 ಅಂಶಿ ಪ್ರಸನ್ನಕುಮಾರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement