ಸುದ್ದಿ ಸಂಕ್ಷೇಪ
ಶೌಚಾಲಯ ಅವ್ಯವಸ್ಥೆ ಸರಿಪಡಿಸಿ
ಮೈಸೂರು: ತಾಲೂಕಿನ ದಡದಹಳ್ಳಿ ಗ್ರಾಮದಲ್ಲಿ ಜಿಪಂ ಸಂಪೂರ್ಣ ಸ್ವಚ್ಛತಾ ಆಂದೋಲನ ಹಾಗೂ ಸಮುದಾಯ ಶೌಚಾಲಯ ಸಂಕೀರ್ಣ ಯೋಜನೆಯಡಿ ನಿರ್ಮಿಸಿರುವ ಸ್ತ್ರೀ ಶೌಚಾಲಯವು ಉಪಯೋವಿಲ್ಲದೆ ಪಾಳು ಬಿದ್ದಿದೆ ಎಂದು ಮಹಾರಾಜ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿ ಎಸ್. ನಿಂಗರಾಜು ಹೇಳಿದ್ದಾರೆ. ಈ ಶೌಚಾಲಯವನ್ನು ಶ್ರೀನಿವಾಸನ್ ಸರ್ವಿಸ್ ಟ್ರಸ್ಟ್ (ಟಿವಿಎಸ್) ಕಂಪನಿಯು 1.90 ಲಕ್ಷ ಹಾಗೂ ಜಿಪಂ 1.50 ಲಕ್ಷ ಧನಸಹಾಯ ನೀಡಿ ನಿರ್ಮಿಸಿತ್ತು. ಇದನ್ನು ನೋಡಿಕೊಳ್ಳುವರು ಮತ್ತು ಸ್ವಚ್ಛ ಮಾಡುವವರು ಇಲ್ಲದ ಕಾರಣ ಪಾಳು ಬಿದ್ದಂತೆ ಸುತ್ತಲು ಗಿಡಬಳ್ಳಿಗಳು ಬೆಳೆದು ನಿಂತಿದೆ. ಸಂಬಂಧಪಟ್ಟ ಜಿಪಂ ಮತ್ತು ಗ್ರಾಪಂ ಅಧ್ಯಕ್ಷರು ಹಾಗೂ ಅಧಿಕಾರಿಗಳು ಕ್ರಮ ವಹಿಸುವಂತೆ ಕೋರಿದ್ದಾರೆ.
ರಾಜ್ಯ ಮಟ್ಟಕ್ಕೆ ಆಯ್ಕೆ
ಹುಣಸೂರು: ಇಲ್ಲಿನ ಟ್ಯಾಲೆಂಟ್ ವಿದ್ಯಾಸಂಸ್ಥೆಯ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಪ್ರಾಂಜ್ಯ ನ್ಯಾಂಜನ ರಾಜ್ ನೇರ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ತಾಲೂಕು ಮಟ್ಟದ ಹಿರಿಯ ಪ್ರಾಥಮಿಕ ಶಾಲಾ ವಿಭಾಗದ ಕ್ರೀಡಾಕೂಟದಲ್ಲಿ ಗುಂಡು ಎಸೆತ ಹಾಗೂ ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ ಕೆ.ಪ್ರಜ್ವಲ್ ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪ್ರೌಢಶಾಲಾ ವಿಭಾಗದಲ್ಲಿ ಜಾವಲಿನ್ ಎಸೆತದಲ್ಲಿ ಅಜರುಲ್ಲಾ ಖಾನ್ (ದ್ವಿತೀಯ), 200 ಮೀ. ಓಟದ ಸ್ಪರ್ಧೆಯಲ್ಲಿ ನೂರೈನ್ (ದ್ವಿತೀಯ) ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆ ಯಾಗಿದ್ದಾರೆ. ಕಾಲೇಜು ವಿಭಾಗದಲ್ಲಿ ಗುಂಡು ಎಸೆತದಲ್ಲಿ ಮಹಮದ್ ಮನ್ಸೂರ್ (ಪ್ರಥಮ), 5 ಸಾವಿರ ಮೀ. ಓಟದ ಸ್ಪರ್ಧೆಯಲ್ಲಿ ಪವಿತ್ರ (ದ್ವಿತೀಯ) ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.