ಈ ಬಾರಿಯ ನವರಾತ್ರಿ ರಂಗೋತ್ಸವ
ಕ.ಪ್ರ.ವಾರ್ತೆ ಮೈಸೂರು ಸೆ. 14
ಒಂದಲ್ಲ ಒಂದು ಸುದ್ದಿಗೆ ಹೆಸರಾಗುತ್ತಿದ್ದ ರಂಗಾಯಣ ಮತ್ತೆ ಪುನಶ್ಚೇತನಗೊಂಡಿದೆ. ವರ್ಗಾವಣೆಗೊಂಡಿದ್ದ ಕಲಾವಿದರು ಒಟ್ಟುಗೂಡಿದ್ದಾರೆ. ಇದೀಗ ವಿಜಯದಶಮಿ ಪ್ರಯುಕ್ತ ನವರಾತ್ರಿ ರಂಗೋತ್ಸವ ಹಮ್ಮಿಕೊಳ್ಳಲು ಸಕಲ ಸಿದ್ಧತೆ ನಡೆಯುತ್ತಿದ್ದು, ಈ ಬಾರಿ ರಂಗೋತ್ಸವ ಕಳೆಗಟ್ಟುವುದರಲ್ಲಿ ಸಂಶಯವಿಲ್ಲ ಎಂದೇ ಬಣ್ಣಿಸಲಾಗಿದೆ.
ದಸರಾ ಮಹೋತ್ಸವವು ಅ.5ರಿಂದ 14ರವರೆಗೆ ನಡೆಯಲಿದ್ದು, ಇದೇ ವೇಳೆ ರಂಗಾಯಣದಲ್ಲೂ ನವರಾತ್ರಿ ರಂಗೋತ್ಸವ ಅ.5ರಿಂದ 13ರವರೆಗೆ ನಡೆಯಲಿದೆ. ಪ್ರತಿದಿನ ವಿಶೇಷ ನಾಟಕ ಪ್ರದರ್ಶನ ಹಮ್ಮಿಕೊಳ್ಳುವುದರ ಜತೆಗೆ ರಂಗಭೂಮಿಯಲ್ಲಿ ಅವಿರತ ಸೇವೆ ಸಲ್ಲಿಸಿರುವ, ಎಲೆಮರೆ ಕಾಯಿಯಂತಿರುವ ಸಾಧಕರನ್ನು ಗುರುತಿಸಿ ಸನ್ಮಾನಿಸುವ ವಾಡಿಕೆಗೆ ಚಾಲನೆ ದೊರೆಯಲಿದೆ.
ಕಲಾವಿದರಲ್ಲಿ ಉತ್ಸಾಹ: ರಂಗಾಯಣ ಕಲಾವಿದರ ಒಟ್ಟು ತಂಡವನ್ನು ನೋಡುವುದೇ ಚೆಂದ ಎಂಬ ಅಭಿಪ್ರಾಯವನ್ನು ರಂಗಾಸಕ್ತರು ವ್ಯಕ್ತಪಡಿಸಿದ್ದರು. ಅದರಂತೆ ಇದೀಗ ರಂಗಾಯಣ ಕಲಾವಿದರು ಒಂದುಗೂಡಿ ರಂಗೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಿದ್ದಾರೆ. ರಂಗಾಯಣ ಕಲಾವಿದರ ತಂಡವೇ 9 ನಾಟಕಗಳನ್ನು ಅಭಿನಯಿಸಲಿದೆ. ಈ ಹಿಂದೆ ಪ್ರದರ್ಶಿಸಿದ್ದ ಶಾಸ್ತ್ರೀಯ ನಾಟಕಗಳು ವೇದಿಕೆ ಏರಲಿವೆ ಎಂದು ನವರಾತ್ರಿ ರಂಗೋತ್ಸವದ ಸಂಚಾಲಕ ಮೈಮ್ ರಮೇಶ್ ಕನ್ನಡಪ್ರಭಕ್ಕೆ ತಿಳಿಸಿದರು.
ಗೊಂಬೆ ಪ್ರದರ್ಶನ: ದಸರಾ ಸಂದರ್ಭದಲ್ಲಿ ಮೈಸೂರಿನೆಲ್ಲೆಡೆ ಗೊಂಬೆ ಪ್ರದರ್ಶನ ಸರ್ವೆ ಸಾಮಾನ್ಯ. ಹಿಂದಿನಿಂದ ನಡೆಸಿಕೊಂಡು ಬರುತ್ತಿರುವ ಗೊಂಬೆ ಪ್ರದರ್ಶನ ಪರಂಪರೆಯನ್ನು ಪ್ರದರ್ಶಿಸಲು ರಂಗಾಯಣ ಕೂಡ ಮುಂದಾಗಿದೆ. ಈ ಬಾರಿ ಶ್ರೀರಂಗ ಸಭಾಂಗಣದಲ್ಲಿ ಗಾಯತ್ರಿ ಎಂಬವರು ಗೊಂಬೆ ಪ್ರದರ್ಶನ ಏರ್ಪಡಿಸುವರು. ಹಾಗೆ ಪದ್ಮನಾಭ ಎಂಬವರು ನೂರು ವರ್ಷಗಳಿಂದ ಬಳಸಿಕೊಂಡು ಬರಲಾಗುತ್ತಿರುವ ವಿವಿಧ ವಿನ್ಯಾಸದ ಲ್ಯಾಂಪ್ ಪ್ರದರ್ಶಿಸುವರು. ಕಲಾವಿದರ ಚಿತ್ರಕಲಾ ಪ್ರದರ್ಶನ ನಡೆಸಿಕೊಡುವರು.ಇತ್ತೀಚೆಗೆ ಬ್ರೆಜಿಲ್ ಮೂಲದ ನಿರ್ದೇಶಕಿಯಾದ ಎಲಿಸಾ ಟೆಲೊಡೆ ಅವರು ರಂಗಾಯಣ ಕಲಾವಿದರನ್ನು ಒಟ್ಟುಗೂಡಿಸಿ ಟ್ರೀ ಆಪ್ ಬಾಬೆಲ್ ನಾಟಕ ಆಡಿಸುವ ಇಚ್ಛೆ ವ್ಯಕ್ತಪಡಿಸಿದ್ದರು. ಅದಕ್ಕಾಗಿ ಕರ್ನಾಟಕ ಸರ್ಕಾರದೊಂದಿಗೆ ಮಾತುಕತೆ ನಡೆಸಿದ್ದರು. ಇದೀಗ ಅನುದಾನ ನೀಡುವ ವಿಚಾರದಲ್ಲಿ ಸರ್ಕಾರ ಇನ್ನು ಭರವಸೆ ನೀಡದ ಹಿನ್ನೆಲೆಯಲ್ಲಿ ಅದು ಅರ್ಧಕ್ಕೆ ನಿಂತಿದೆ. ಕಲಾವಿದರ ಹೋಂ ವರ್ಕ್ ಮಾತ್ರ ನಡೆಯುತ್ತಿದೆ. ರಂಗಾಯಣ ಕಲಾವಿದರ ಒಂದುಗೂಡುವಿಕೆಗೆ ಕಾರಣರಾದ ಎಲಿಸಾ ನಿರ್ದೇಶನದ ನಾಟಕ ಪ್ರದರ್ಶನಕ್ಕೆ ಸರ್ಕಾರ ಸಕರಾತ್ಮಕವಾಗಿ ಸ್ಪಂದಿಸಬೇಕಿದೆ ಎಂದು ರಂಗಾಸಕ್ತರು ಮನವಿ ಮಾಡಿದ್ದಾರೆ.
ಜೆ. ಮಹದೇವ