ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಕಾರ್ಮಿಕರಿಂದ ಪ್ರತಿಭಟನೆ

Mainashree
Updated On : 14 Sept 2013, 11:04 am

ಕ.ಪ್ರ.ವಾರ್ತೆ  ತಾಂಡವಪುರ  ಸೆ. 14
ಇಲ್ಲಿನ ಕೈಗಾರಿಕಾ ಪ್ರದೇಶದಲ್ಲಿರುವ ಗ್ರಾಮೆಕ್ಸ್ ಪೇಪರ್ ಮಿಲ್ ಕಂಪನಿಯ ಆಡಳಿತ ಮಂಡಳಿಯವರು ಏಕಾಏಕಿ ಕಂಪನಿಗೆ ಬೀಗಮುದ್ರೆ ಮಾಡಿರುವುದನ್ನು ಖಂಡಿಸಿ, ಕಾರ್ಮಿಕರು ಶನಿವಾರ ಬೆಳಿಗ್ಗೆ ಪ್ರತಿಭಟಿಸಿದರು.
ಕಂಪೆನಿಯಲ್ಲಿ ಕಾಯಂ ನೌಕರರಾಗಿ 105 ಮಂದಿ ಹಾಗೂ ಗುತ್ತಿಗೆ ಆಧಾರದ ಮೇಲೆ 400 ಮಂದಿ ಕೆಲಸ ನಿರ್ವಹಿಸುತ್ತಿದ್ದು, ಕಾರ್ಮಿಕರು ವೇತನ ಹೆಚ್ಚಳ ಮಾಡಬೇಕೆಂದು ಕಂಪನಿಯ ಆಡಳಿತ ಮಂಡಳಿ ಒತ್ತಾಯಿಸಿ, ಕಳೆದ ಜನವರಿಯಿಂದ ಕಂಪನಿಯ ಆಡಳಿತ ಮಂಡಳಿ ಮತ್ತು ಕಾರ್ಮಿಕರ ಮುಖಂಡರ ನಡುವೆ ಮಾತುಕತೆ ನಡೆದಿತ್ತು.
ಇದುವರೆಗೂ ಕಾರ್ಮಿಕರ ಬೇಡಿಕೆಗಳಿಗೆ ಆಡಳಿತ ಮಂಡಳಿ ಸ್ಪಂದಿಸದೆ ಇರುವುದರಿಂದ, ಸೆ.16ರಂದು ಮೈಸೂರಿನ ಕಾರ್ಮಿಕರ ಕಚೇರಿಯಲ್ಲಿ ಈ ವಿಚಾರವಾಗಿ ಸಭೆ ಕರೆಯಲಾಗಿತ್ತು. ಆದರೆ ಆಡಳಿತ ಮಂಡಳಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದವರನ್ನು ಹೊರಕ್ಕೆ ಕಳುಹಿಸಿ ಹಾಗೂ ಕಂಪನಿಯ ಕಾರ್ಮಿಕರಿಗೆ ಯಾವುದೆ ಮುನ್ಸೂಚನೆ ನೀಡದೆ, ಕಂಪನಿಗೆ ಬೀಗಮುದ್ರೆ ಮಾಡಿರುವುದರಿಂದ ಕಾರ್ಮಿಕರು ಬೀದಿ ಪಾಲಾಗಿದ್ದಾರೆ.
ಕಾರ್ಮಿಕರ ಮುಖಂಡ ಟಿ.ಜೆ.ಮಹದೇವು ಮಾತನಾಡಿ, ಈ ಕಂಪನಿಯ ಆಡಳಿತ ಮಂಡಳಿಯವರು ಸುತ್ತಮುತ್ತಲಿನ ಕಂಪನಿಯವರಿಗಿಂತ ಇಲ್ಲಿನ ಕಾರ್ಮಿಕರಿಗೆ ಕಡಿಮೆ ವೇತನ ನೀಡುತ್ತಿದ್ದು, ಬರುತ್ತಿರುವ ಲಾಭವನ್ನು ಆಧರಿಸಿ ಕಾರ್ಮಿಕರಿಗೆ ವೇತನ ಹೆಚ್ಚಿಸಬೇಕೆಂದು ಬೇಡಿಕೆ ಇಡಲಾಗಿತ್ತು. ಬೇಡಿಕೆ ಈಡೇರಿಸುವ ಮುನ್ನವೇ ಕಂಪನಿಯವರು ಬೀಗ ಜಡಿದು ಕಾರ್ಮಿಕರನ್ನು ಬೀದಿಪಾಲು ಮಾಡುವ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದ ಅವರು, ನಮ್ಮ ಬೇಡಿಕೆ ಈಡೇರುವವರೆಗೂ, ಬೀಗ ತೆಗೆದು ಕೆಲಸ ಮಾಡಲು ಅನುವು ಮಾಡಿಕೊಡುವವರೆಗೂ ಹೋರಾಟ ಮುಂದುವರೆಸುವುದಾಗಿ ಹೇಳಿದರು.
ಸಿಐಟಿಯು ಉಪಾಧ್ಯಕ್ಷ ಎನ್.ರೇಣುಕುಮಾರ್, ಪ್ರಧಾನ ಕಾರ್ಯದರ್ಶಿ ಎಂ.ಕೆ.ಶಶಿಕುಮಾರ್, ಸಂಘಟನಾ ಕಾರ್ಯದರ್ಶಿ ಗಂಗಾಧರ್, ಜಂಟಿ ಕಾರ್ಯದರ್ಶಿ ಬಸವರಾಜ ನಾಯಕ, ಎ.ವಿ.ಮಹೇಶ್, ಖಜಾಂಚಿ ಲಕ್ಷ್ಮೀಕಾಂತ್ ಹಾಗೂ ನೂರಾರು ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement