'ಜಾತ್ಯತೀತ ಮನೋಭಾವ ರೂಢಿಸಿಕೊಳ್ಳಿ'
ಕ.ಪ್ರ.ವಾರ್ತೆ ಕೆ.ಆರ್. ನಗರ ಸೆ. 14
ವಿದ್ಯಾರ್ಥಿಗಳು ಜಾತ್ಯತೀತ ಮನೋಭಾವನೆ ಹೊಂದಿ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಶಾಸಕ ಸಾ.ರಾ. ಮಹೇಶ್ ಕರೆ ನೀಡಿದರು.
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 1.5 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಮೇಲಂತಸ್ತಿನ ಹೆಚ್ಚುವರಿ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಶನಿವಾರ ಚಾಲನೆ ನೀಡಿ ಮಾತನಾಡಿ, ಪ್ರತಿಯೊಬ್ಬರೂ ಶಿಕ್ಷಿತರಾದರೆ ಜಾತಿ ಪದ್ಧತಿ, ಮೌಢ್ಯ ತೊಲಗುತ್ತದೆ ಎಂದರು.
ಕಾಲೇಜಿಗೆ ನ್ಯಾಕ್ ಮಾನ್ಯತೆ ದೊರೆತಿದ್ದು, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳ ಪರಿಶ್ರಮ ಇದಕ್ಕೆ ಕಾರಣ. ನಾನು ಸದಾ ಕಾಲೇಜಿನ ಅಭಿವೃದ್ಧಿಗೆ ಮತ್ತು ಮೂಲ ಸವಲತ್ತು ಪೂರೈಕೆಗೆ ಆದ್ಯತೆ ನೀಡುತ್ತೇನೆ. ಮುಂದಿನ ದಿನಗಳಲ್ಲಿ ಅಗತ್ಯಕ್ಕನುಗುಣವಾಗಿ ಕೊಠಡಿಗಳನ್ನು ನಿರ್ಮಾಣ ಮಾಡಲಾಗುತ್ತದೆ. ಜತೆಗೆ ವಿದ್ಯಾರ್ಥಿಗಳಿಗೆ ಅವಶ್ಯವಿರುವ ಎಲ್ಲ ಕೋರ್ಸುಗಳನ್ನು ಮಂಜೂರು ಮಾಡಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಕಾಲೇಜು ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಜಿಪಂ ಹಂಗಾಮಿ ಅಧ್ಯಕ್ಷ ಸಿ.ಜೆ. ದ್ವಾರಕೀಶ್, ತಾಪಂ ಅಧ್ಯಕ್ಷೆ ಕವಿತಾ ರವಿ, ಉಪಾಧ್ಯಕ್ಷೆ ಶಕುಂತಲಾ ರಮೇಶ್, ಸಿಡಿಸಿ ಕಾರ್ಯದರ್ಶಿ ಚಂದ್ರಶೇಖರ್, ಪ್ರಾಂಶುಪಾಲ ಕೋಂಡರಸಯ್ಯ, ಪುರಸಭಾ ಸದಸ್ಯರಾದ ಎಚ್.ಸಿ. ರಾಜು, ಶಿವಕುಮಾರ್, ಸಿಡಿಸಿ ಸದಸ್ಯರಾದ ಸುನೀತಾ ರಮೇಶ್, ಡಿ.ಸಿ.ಮಂಜು, ಹೊಸಹಳ್ಳಿ ವೆಂಕಟೇಶ್, ಉಪನ್ಯಾಸಕರಾದ ವೀರಭದ್ರಯ್ಯ, ಹುರಿಗೌಡ, ಬಸವರಾಜು, ಯೋಗೀಶ್, ಕೆ.ಎಲ್.ರಮೇಶ್, ಪಿ.ಪ್ರಶಾಂತ್ ಇದ್ದರು.