ಪಟ್ಟಣ ಅಭಿವೃದ್ಧಿ ಯೋಜನೆಗೆ ಸಂಸದ ಚಾಲನೆ
ಕ.ಪ್ರ.ವಾರ್ತೆ ಎಚ್.ಡಿ.ಕೋಟೆ ಸೆ. 14
ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಯೋಜನೆಯಡಿ 4.50 ಲಕ್ಷ ವೆಚ್ಚದ ಕಾಮಗಾರಿಗೆ ಸಂಸದ ಆರ್.ಧ್ರುವನಾರಾಯಣ್ ಶನಿವಾರ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗ ಗುದ್ದಲಿಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಅವರು, ಸರ್ಕಾರದಿಂದ ಪಪಂ ಹಾಗೂ ನಗರಸಭೆಗಳಿಗೆ ಅನುದಾನ ಹರಿದು ಬರುತ್ತಿದೆ. ಬಂದ ಹಣವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಬೆಂಗಳೂರು ನಗರದಲ್ಲಿ ಶೇ.60ರಷ್ಟು ತೆರಿಗೆ ವಸೂಲಾಗುತ್ತಿರುವುದರಿಂದ ಹೆಚ್ಚಿನ ಅಭಿವೃದ್ಧಿ ಕೈಗೊಳ್ಳಲು ಸರ್ಕಾರಕ್ಕೆ ಸಾಧ್ಯವಾಗುತ್ತಿದೆ. ಆದರೆ ಗ್ರಾಪಂಗಳಿಂದ ತೆರಿಗೆ ಸಂಗ್ರವಾಗುತ್ತಿಲ್ಲ. ಪಪಂನವರು ತೆರಿಗೆ ವಸೂಲಾತಿ ಹೆಚ್ಚಿಸಿಕೊಳ್ಳಬೇಕು ಎಂದು ಅವರು ಸೂಚಿಸಿದರು.
ತಾಲೂಕಿನ ಸಮಗ್ರ ಅಬಿವೃದ್ಧಿಗೆ ಪಕ್ಷಾತೀತವಾಗಿ ಸ್ಥಳೀಯ ಶಾಸಕರ ಜತೆ ಕೈಜೋಡಿಸಲಾಗುವುದು. ಪಟ್ಟಣದ ಹಲವು ಸಮಸ್ಯೆಗಳ ಬಗ್ಗೆ ಶಾಸಕರ ಜತೆ ಚರ್ಚಿಸಿ ಪಟ್ಟಿ ಸಿದ್ಧಪಡಿಸಿ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು. ಹೆಚ್ಚಿನ ಅನುದಾನ ತರಲಾಗುವುದು ಎಂದು ಭರವಸೆ ನೀಡಿದರು.ಶಾಸಕ ಎಸ್.ಚಿಕ್ಕಮಾದು ಮಾತನಾಡಿ, ರಾಮನಾಥಪುರ- ತೆರಕಣಾಂಬಿ ರಸ್ತೆಯ ಕಾಮಗಾರಿಯು ಪ್ರಕೃತಿ ವಿಕೋಪದಿಂದ ಕುಂಠಿತವಾಗಿದೆ. ಹೆಗ್ಗಡದೇವನಕೋಟೆ ಹಾಗೂ ಸರಗೂರು ಪಟ್ಟಣದಲ್ಲಿ ಯುಜಿಡಿ ಕೆಲಸಕ್ಕೆ ಸರ್ಕಾರದಿಂದ ಹಣ ಬಿಡುಗಡೆಯಾಗಿದ್ದು, ಸೂಕ್ತ ಸ್ಥಳ ದೊರಕಿದ ಕೂಡಲೇ ಕಾಮಗಾರಿ ಆರಂಭಿಸಲಾಗುವುದು ಎಂದರು.ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜು, ಜಿಪಂ ಸದಸ್ಯ ಎಚ್.ಸಿ. ಮಂಜುನಾಥ್, ತಾಲೂಕು ಜೆಡಿಎಸ್ ಅಧ್ಯಕ್ಷ ಸಿ.ವಿ. ನಾಗರಾಜು, ಬ್ಲಾಕ್ ಕಾಂಗ್ರಸ್ ಅಧ್ಯಕ್ಷ ತಮ್ಮಣ್ಣೇಗೌಡ, ಬಾಲಯ್ಯ ಇದ್ದರು.