ಸುವರ್ಣ ಗ್ರಾಮ ಯೋಜನೆ ಕಾಮಗಾರಿ ಕಳಪೆ: ಆರೋಪ
ಎಚ್.ಡಿ.ಕೋಟೆ: ತಾಲೂಕಿನ ಕ್ಯಾತನಹಳ್ಳಿ ಸುವರ್ಣ ಗ್ರಾಮ ಯೋಜನೆ ಸಂಪೂರ್ಣ ಕಳಪೆ ಕಾಮಗಾರಿಯಾಗಿದ್ದು, ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುವಂತೆ ತಾಲೂಕು ನಾಯಕರ ಯುವ ವೇದಿಕೆ ಆಗ್ರಹಿಸಿದೆ. ಸದರಿ ಕಾಮಗಾರಿ ಗುತ್ತಿಗೆಯನ್ನು ಭೂಸೇನ ನಿಗಮ ಪಡೆದಿದ್ದು, ಕಾಮಗಾರಿಯ ರಸ್ತೆ ಅಭಿವೃದ್ಧಿ ಅಂದಾಜು ಪಟ್ಟಿಯಲ್ಲಿ ಇರುವುದೇ ಬೇರೆ, ಗುತ್ತಿಗೆದಾರರು ಮಾಡುತ್ತಿರುವುದೇ ಬೇರೆಯಾಗಿದೆ. ಎಂಟು ತಿಂಗಳ ಹಿಂದೆ ಕಾಂಕ್ರಿಟ್ ರಸ್ತೆ ಮಾಡಿದ್ದು ಕಿತ್ತು ಹೋಗಿದೆ. ರಸ್ತೆಯನ್ನು ಸಮತಟ್ಟು ಮಾಡದೆ ಸಣ್ಣ ಜಲ್ಲಿ ಎರಚಿ ಇವರ ಇಷ್ಟ ಬಂದ ಹಾಗೆ ಕೆಲಸ ಮಾಡಿ ಮುಗಿಸಿದ್ದಾರೆ. ಕಾಮಗಾರಿ ಪರಿಶೀಲಿಸಲು ಲ್ಯಾಂಡ್ ಆರ್ಮಿ ಅಧಿಕಾರಿಗಳು ಇದುವರೆಗೂ ಭೇಟಿ ನೀಡಿಲ್ಲ. ಆದ್ದರಿಂದ ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿ ಸಂಬಂಧಪಟ್ಟ ಎಂಜಿನಿಯರ್ ಹಾಗೂ ಗುತ್ತಿಗೆದಾರರ ಮೇಲೆ ಕಾನೂನು ಕ್ರಮ ಕೈಗೊಂಡು ಅಧಿಕಾರಿಗಳನ್ನು ಅಮಾನತುಗೊಳಿಸಬೇಕು. ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ವೇದಿಕೆ ಪದಾಧಿಕಾರಿಗಳಾದ ಸಿ. ನಾಗರಾಜು, ಕೆ.ಪಿ. ಚೆಲುವರಾಜು, ಅಪ್ಪಾಜಿಗೌಡ, ಎಸ್. ಗೀತಾ ಬಸವರಾಜು, ಇತರರು ಒತ್ತಾಯಿಸಿದ್ದಾರೆ.