28ರಂದು ಕೆ.ಆರ್.ನಗರದಲ್ಲಿ ಗ್ರಾಮೀಣ ದಸರಾ ಆರಂಭ
ಕ.ಪ್ರ.ವಾರ್ತೆ ಕೆ.ಆರ್. ನಗರ ಸೆ. 15ಪಟ್ಟಣದಲ್ಲಿ ಗ್ರಾಮೀಣ ದಸರಾಕ್ಕೆ ಸೆ.28ರಂದು ಚಾಲನೆ ನೀಡಲಾಗುತ್ತದೆ. ಅಂದು ದಸರಾ ವೈಭವ ನೆನಪಿಸುವ ಗ್ರಾಮೀಣ ಸೊಗಡಿನ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದು, ಸಾರ್ವಜನಿಕರು ಭಾಗವಹಿಸುವಂತೆ ಶಾಸಕ ಸಾ.ರಾ.ಮಹೇಶ್ ಮನವಿ ಮಾಡಿದರು.ಇಲ್ಲಿನ ತಾಪಂ ಸಭಾಂಗಣದಲ್ಲಿ ಶನಿವಾರ ನಡೆದ ಗ್ರಾಮೀಣ ದಸರಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಗ್ರಾಮೀಣ ಕಲೆಗಳನ್ನು ಪ್ರದರ್ಶಿಸಿ ಪ್ರತಿಭೆಗಳಿಗೆ ಪ್ರೋತ್ಸಾಹಿಸುವ ಕೆಲಸ ದಸರಾ ಆಚರಣೆಯಲ್ಲಿ ಅಗತ್ಯವಾಗಿ ಆಗಬೇಕಿದ್ದು, ಅಧಿಕಾರಿಗಳು ಈ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಬಾರದು ಎಂದು ತಾಕೀತು ಮಾಡಿದರು.ಗ್ರಾಮೀಣ ದಸರಾ ಯಶಸ್ವಿಯಾಗಬೇಕಾದರೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯವಾಗಿದ್ದು, ಸಂಘ ಸಂಸ್ಥೆಗಳ ಮುಖಂಡರು, ಚುನಾಯಿತ ಜನಪ್ರತಿನಿಧಿಗಳು ಪರಸ್ಪರ ಸಹಕಾರ ಮನೋಭಾವದಿಂದ ಕೆಲಸ ಮಾಡಬೇಕು. ಪ್ರತಿ ಗ್ರಾಪಂನಿಂದ ಎರಡು ಕಲಾ ತಂಡಗಳನ್ನು ಕರೆ ತರುವ ಜವಾಬ್ದಾರಿಯನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ವಹಿಸಿಕೊಳ್ಳಬೇಕೆಂದು ಅವರು ಸೂಚಿಸಿದರು.ಸರ್ಕಾರದಿಂದ 4 ಲಕ್ಷ ಅನುದಾನ ನೀಡಿದ್ದು, ಇದರ ಜತೆಗೆ ಸ್ಥಳೀಯ ಸಂಪನ್ಮೂಲವನ್ನು ಬಳಕೆ ಮಾಡಿಕೊಂಡು ವಿಜೃಂಭಣೆಯಿಂದ ದಸರಾ ಆಚರಿಸಲು ಸಹಕಾರ ನೀಡುವಂತೆ ಕೋರಿದರು.ಜಿಪಂ ಹಂಗಾಮಿ ಅಧ್ಯಕ್ಷ ಸಿ.ಜೆ.ದ್ವಾರಕೀಶ್, ತಾಪಂ ಅಧ್ಯಕ್ಷೆ ಕವಿತಾ ರವಿ, ಉಪಾಧ್ಯಕ್ಷೆ ಶಕುಂತಲಾ ರಮೇಶ್, ಪುರಸಭಾ ಸದಸ್ಯ ಕೆ.ಎಲ್.ಜಗದೀಶ್, ತಹಸೀಲ್ದಾರ್ ಎಂ.ಕೆ.ಸವಿತಾ, ಇಒ ಬಸವರಾಜು, ಜೆಡಿಎಸ್ ಅಧ್ಯಕ್ಷ ಚಂದ್ರಶೇಖರ್, ತಾಪಂ ಮಾಜಿ ಅಧ್ಯಕ್ಷೆ ಹೇಮಾವತಿ, ಸದಸ್ಯರಾದ ನಾಗಣ್ಣ, ಸಾದಿಕ್ಖಾನ್, ವಿಜಯಲಕ್ಷ್ಮೀ ಸೇರಿದಂತೆ ಇತರರು ಇದ್ದರು.