ಐದು ಮಂದಿ ಡಕಾಯಿತರ ಬಂಧನ
ಕ.ಪ್ರ.ವಾರ್ತೆ ಮೈಸೂರು ಸೆ. 15
ಇಬ್ಬರು ವ್ಯಕ್ತಿಗಳನ್ನು ಅಡ್ಡಗಟ್ಟಿ ಬೆದರಿಸಿ ಬೆಲೆ ಬಾಳುವ ವಸ್ತುಗಳನ್ನು ದೋಚಿದ್ದ 5 ಮಂದಿ ಡಕಾಯಿತರನ್ನು ಜಯಪುರ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಗಿರಿಯಾಬೋವಿಪಾಳ್ಯ ನಿವಾಸಿಗಳಾದ ಬಸವರಾಜು ಎಂಬವರ ಪುತ್ರ ಮಹೇಶ (23), ಚಿನ್ನಸ್ವಾಮಿ ಎಂಬವರ ಪುತ್ರ ದಿವಾಕರ ಅ. ಬ್ಲೇಡ್ (23), ಮೋಹನ್‌ಸುಂದರ್ ಎಂಬವರ ಪುತ್ರ ಗಣೇಶ (24), ಲಿಂಗಾಬುದಿಪಾಳ್ಯದ ನಿವಾಸಿಗಳಾದ ರಾಮಸ್ವಾಮಿ ಎಂಬವರ ಪುತ್ರ ರಘು ಅ. ಕುಳ್ಳ (19) ಮತ್ತು ಲೇ. ತಿಮ್ಮಯ್ಯ (ಗುಡ್ಡಪ್ಪ) ಎಂಬವರ ಪುತ್ರ ಕುಮಾರ (26) ಬಂಧಿತ ಆರೋಪಿಗಳು.
10 ತಿಂಗಳ ಹಿಂದೆ ಮೈಸೂರಿನ ಪ್ರಸನ್ನ ಮತ್ತು ಭರತ್ ಎಂಬುವವರು ಆರ್.ಟಿ. ನಗರ ಬಡಾವಣೆಗೆ ಹೋಗಿದ್ದರು. ಆ ವೇಳೆ ಬಂಧಿತರಾದ 5 ಮಂದಿ ಆ ಇಬ್ಬರನ್ನು ಬೆದರಿಸಿ ಅವರ ಬಳಿಯಿದ್ದ 3 ಮೊಬೈಲ್, ಎಟಿಎಂ ಕಾರ್ಡ್, ಬ್ಲೂಟೂತ್, ಬೈನಾಕ್ಲರ್, ಸನ್‌ಗ್ಲಾಸ್, ಬ್ಯಾಟರಿ ಮತ್ತು 300 ಸೇರಿದಂತೆ ಒಟ್ಟು 54,800 ಮೌಲ್ಯದ ವಸ್ತುಗಳನ್ನು ದೋಚಿದ್ದರು. ಈ ಸಂಬಂಧ ಜಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಶನಿವಾರ ಆರೋಪಿಗಳನ್ನು ಬಂಧಿಸಿ ದೋಚಿದ್ದ ವಸ್ತುಗಳು ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಎರಡು ಬೈಕುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತರನ್ನು ಪೊಲೀಸರು ಭಾನುವಾರ ನ್ಯಾಯಾಧೀಶರ ಎದುರು ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಎಸ್ಪಿ ಅಭಿನವ್ ಖರೆ, ಹೆಚ್ಚುವರಿ ಎಸ್ಪಿ ಆರ್.ಬಿ. ಮೋಹನ್‌ರೆಡ್ಡಿ, ಡಿವೈಎಸ್ಪಿ ಟಿ. ಸಿದ್ದಪ್ಪ ಮಾರ್ಗದರ್ಶನದಲ್ಲಿ ಮೈಸೂರು ಗ್ರಾಮಾಂತರ ಸರ್ಕಲ್ ಇನ್ಸ್‌ಪೆಕ್ಟರ್ ಟಿ. ಆಶೋಕ್‌ಕುಮಾರ್, ಜಯಪುರ ಠಾಣೆ ಎಸ್‌ಐ ನಂಜಪ್ಪ ಮತ್ತು ಸಿಬ್ಬಂದಿ ಪ್ರಭಾಕರ್, ಗೌರಿಶಂಕರ್, ಮಂಜುನಾಥ್, ಸುನಿಲ್ ಅವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಸ್ಸಿನಲ್ಲಿ ಚಿನ್ನಾಭರಣ ಕಳವು
ಮೈಸೂರು: ನಗರ ಸಾರಿಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ 40 ಗ್ರಾಂ. ಚಿನ್ನದ ಸರ, ಮಕ್ಕಳ ಕಾಲು ಬಳೆ ಕಳವಾಗಿರುವ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ. ಕುವೆಂಪುನಗರ ನಿವಾಸಿ ಲಲಿತಾ (56) ಎಂಬವರೆ ಚಿನ್ನಾಭರಣ ಕಳೆದುಕೊಂಡವರು. ಇವರು ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲಿ ನೌಕರಿಯಲ್ಲಿದ್ದಾರೆ. ಇವರು ಕುವೆಂಪುನಗರ ಅಕ್ಷಯ ಬಂಡಾರದ ಬಳಿ ನಗರ ಸಾರಿಗೆ ಬಸ್ ಹತ್ತಿದ್ದು, ಆರ್‌ಟಿಒ ವೃತ್ತದ ಬಳಿ ಬಂದಾಗ ತಮ್ಮ ಕೈಚೀಲ ಪರಿಶೀಲಿಸಿದಾಗ ಚಿನ್ನಾಭರಣ ಕಳವಾಗಿರುವುದು ಗೊತ್ತಾಗಿದೆ. ಈ ಸಂಬಂಧ ಲಕ್ಷ್ಮಿಪುರಂ ಠಾಣೆ ಇನ್ಸ್‌ಪೆಕ್ಟರ್ ವಿ. ಸೂರ್ಯನಾರಾಯಣರಾವ್ ಮತ್ತು ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.