ದಸರಾದಲ್ಲಿ ಕುಡಿವ ನೀರಿಗೆ ಆದ್ಯತೆ
ಕ.ಪ್ರ.ವಾರ್ತೆ ಮೈಸೂರು ಸೆ. 15
ನಾಡಹಬ್ಬ ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ನಗರಪಾಲಿಕೆಯು ಸ್ವಚ್ಛತೆ ಮತ್ತು ಕುಡಿಯುವ ನೀರಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಇದಕ್ಕಾಗಿ ಪಾಲಿಕೆ ನೌಕರರಲ್ಲದೆ 280 ಮಂದಿ ಹೆಚ್ಚುವರಿ ಪೌರ ಕಾರ್ಮಿಕರ ತಾತ್ಕಾಲಿಕ ನೇಮಕಾತಿಗೆ ಟೆಂಡರ್ ಕರೆದಿದೆ.
ನಗರದ ಸ್ವಚ್ಛತೆಯನ್ನು ಮುಖ್ಯವಾಗಿಟ್ಟುಕೊಂಡು ಈ ತೀರ್ಮಾನ ಕೈಗೊಳ್ಳಲಾಗಿದೆ. ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ದೇಶ, ವಿದೇಶಗಳಿಂದ ಪ್ರವಾಸಿಗರು ಆಗಮಿಸುವುದರಿಂದ ಸ್ವಚ್ಛತೆ ಕಾಪಾಡಲು ಪಾಲಿಕೆ ಮುಂದಾಗಿದೆ. ಪಾಲಿಕೆಯಲ್ಲಿ ಈಗಾಗಲೇ 1 ಸಾವಿರಕ್ಕೂ ಹೆಚ್ಚು ಮಂದಿ ಪೌರ ಕಾರ್ಮಿಕರು ಇದ್ದಾರೆ. ಇದರ ಜೊತೆಗೆ ಹೆಚ್ಚುವರಿಯಾಗಿ 280 ಮಂದಿಯನ್ನು ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲು ಮುಂದಾಗಿದೆ.
ನಗರದ ಮಹಾರಾಜ ಕಾಲೇಜು ಮೈದಾನ, ಸ್ಕೌಟ್ಸ್ ಮತ್ತು ಗೈಡ್ಸ್ ಆವರಣ, ಗಂಗೋತ್ರಿ, ಕಲಾಮಂದಿರ, ರಂಗಾಯಣ, ಜಗನ್ಮೋಹನ ಅರಮನೆ ಮುಂತಾದ ಕಡೆಗಳಲ್ಲಿ ದಸರಾ ಅಂಗವಾಗಿ ನಡೆಯುವ ವಿವಿಧ ಕಾರ್ಯಕ್ರಮಗಳಿಗೆ ನಿಯೋಜಿಸುವ ಉದ್ದೇಶದಿಂದ ಟೆಂಡರ್ ಮೂಲಕ ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲಾಗುತ್ತಿದೆ. 12 ದಿನಗಳವರೆಗೆ ಈ 280 ಮಂದಿ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸುವರು.
ರಾತ್ರಿ ಪಾಳಿಯಲ್ಲಿಯೂ ಕೆಲಸ: ಹೆಚ್ಚಾಗಿ ಆಹಾರ ಮೇಳ, ರೈತ ದಸರಾ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಜಂಬೂಸವಾರಿ ಮೆರವಣಿಗೆ ಹಾದಿಯನ್ನು ಕೇಂದ್ರೀಕರಿಸಲಾಗಿದೆ. ಉಳಿದಂತೆ ವಸ್ತು ಪ್ರದರ್ಶನ ಪ್ರಾಧಿಕಾರ ಆವರಣದಲ್ಲಿ ಪ್ರಾಧಿಕಾರ ನೇಮಕ ಮಾಡಿಕೊಂಡ ಸ್ವಚ್ಛತಾ ಕಾರ್ಮಿಕರು ಇರುತ್ತಾರೆ. ಈ ಪೌರ ಕಾರ್ಮಿಕರನ್ನು ಮೂರು ಪಾಳಿಯಲ್ಲಿ ನೇಮಕ ಮಾಡಲಾಗುತ್ತದೆ. ಪ್ರತಿ ಪಾಳಿಗೆ 8 ಗಂಟೆ ಅವಧಿ ನಿಗದಿ ಇರುತ್ತದೆ. ಅಂದರೆ ಕೇವಲ ಬೆಳಗಿನ ವೇಳೆ ಮಾತ್ರವಲ್ಲದೆ ರಾತ್ರಿ ವೇಳೆಯೂ ಸಹ ಪೌರ ಕಾರ್ಮಿಕರು ಸ್ವಚ್ಛತಾ ಕಾರ್ಯದಲ್ಲಿ ತೊಡಗಬೇಕು ಎಂಬ ಉದ್ದೇಶದಿಂದ ಈ ವ್ಯವಸ್ಥೆ ಮಾಡಲಾಗಿದೆ. ಬಿದ್ದ ಕಸ ರಸ್ತೆಯಲ್ಲಿಯೆ ಹೆಚ್ಚು ಹೊತ್ತು ಇರಬಾರದು. ಆಯಾ ಪಾಳಿಯಲ್ಲಿರುವ ಪೌರ ಕಾರ್ಮಿಕರು ಸ್ವಚ್ಛಗೊಳಿಸುತ್ತಿರಬೇಕು.
ಅಂತೆಯೇ ಕುಡಿಯುವ ನೀರಿಗೂ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ದಸರಾ ಮಹೋತ್ಸವಕ್ಕೆ ಬರುವ ಪ್ರವಾಸಿಗರಿಗೆ ಶುದ್ಧ ಕುಡಿಯುವ ನೀರು ಪೂರೈಸಬೇಕು ಎಂಬ ಉದ್ದೇಶದಿಂದ ಪಾಲಿಕೆಯು ನಗರದ ಪ್ರಮುಖ ಸ್ಥಳಗಳಲ್ಲಿ ಕುಡಿಯುವ ನೀರಿನ ಕೇಂದ್ರಗಳನ್ನು ತೆರೆಯುತ್ತಿದೆ. ಜಂಬೂಸವಾರಿ ತೆರಳುವ ಮಾರ್ಗದ ಮೂರ್ನಾಲ್ಕು ಕಡೆಗಳಲ್ಲಿ ನೀರಿನ ಟ್ಯಾಂಕ್ಗಳನ್ನು ಇಡಲು ತೀರ್ಮಾನಿಸಲಾಗಿದೆ. ಅಲ್ಲದೆ ಆಹಾರ ಮೇಳೆ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವ ಕಡೆಗಳಲ್ಲಿ ಟ್ಯಾಂಕ್ ನಿರ್ಮಿಸಲು ಉದ್ದೇಶಿಸಲಾಗಿದೆ.
ಡಿ.ಎನ್. ಮಹೇಂದ್ರ