ಧರ್ಮಸ್ಥಳ ಯೋಜನೆ ಕರ್ನಾಟಕ ರಾಜ್ಯಕ್ಕೆ ಮಾದರಿ: ಚಂದ್ರಮೌಳೇಶ್ವರ ಶ್ರೀ ಶ್ಲಾಘನೆ
ಕ.ಪ್ರ.ವಾರ್ತೆ ಎಚ್.ಡಿ.ಕೋಟೆ ಸೆ. 15
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾರ್ಗದರ್ಶನದಲ್ಲಿ ಪ್ರಗತಿಬಂಧು ಸ್ವ- ಸಹಾಯ ಸಂಘಗಳ ಒಕ್ಕೂಟ ಸಂಯುಕ್ತ ಆಶ್ರಯದಲ್ಲಿ ನೂತನ ಪ್ರಗತಿಬಂಧು ಸ್ವ- ಸಹಾಯ ಸಂಘಗಳ ಒಕ್ಕೂಟ ಉದ್ಘಾಟನಾ ಸಮಾರಂಭ ತಾಲೂಕಿನ ಮಾದಾಪುರದಲ್ಲಿ ಭಾನುವಾರ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಮಾದಾಪುರ ಮಠದ ಶ್ರೀ ಚಂದ್ರಮೌಳೇಶ್ವರ ಸ್ವಾಮೀಜಿ ಮಾತನಾಡಿ, ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿ ಮಹಿಳಾ ಸಬಲೀಕರಣದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಇದೇ ರೀತಿ ಸಮಾನತೆ, ಶಿಸ್ತು, ಸಂಯಮದಿಂದ ನಡೆಸುವಂತೆ ಆಶೀರ್ವಚನ ನೀಡಿದರು.
ಮುಖ್ಯ ಅತಿಥಿಯಾಗಿದ್ದ ಸಂಸದ ಆರ್.ಧ್ರುವನಾರಾಯಣ್ ಮಾತನಾಡಿ, ಸ್ವ- ಸಹಾಯ ಸಂಘಟನೆ ಮೂಲಕವಾಗಿ ಮಹಿಳೆಯರು ಸ್ವಾವಲಂಬನೆ ಸಾಧಿಸಬೇಕೆಂಬುದು ಎಲ್ಲರ ಒತ್ತಾಸೆ. ವೀರೇಂದ್ರ ಹೆಗ್ಗಡೆಯವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕವಾಗಿ ಹಳ್ಳಿಗರ ಬದುಕನ್ನು ಹಸನುಗೊಳಿಸಲು ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.
ಶಾಸಕ ಎಸ್. ಚಿಕ್ಕಮಾದು ಮಾತನಾಡಿ, ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಕ್ಷೇತ್ರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮಾಡಿರುವ ಸಾಧನೆ ಶ್ಲಾಘನೀಯ. ತಾಲೂಕಿನಲ್ಲಿ ಬಾಲ್ಯವಿವಾಹದ ಬಗ್ಗೆ, ಶಿಕ್ಷಣದ ಬಗ್ಗೆ, ಸಂಘದ ಸದಸ್ಯರು ಗಮನ ಹರಿಸುವಂತೆ ಸಲಹೆ ನೀಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್, ಯೋಜನಾಧಿಕಾರಿ ಉಮಾರಬ್ಬ, ಮಾದಾಪುರ ಗ್ರಾಪಂ ಅಧ್ಯಕ್ಷೆ ನಿರ್ಮಲಾ, ಕುಮಾರಸ್ವಾಮಿ, ಆರ್. ರಂಗಯ್ಯ, ವಲಯ ಮೇಲ್ವಿಚಾರಕ ಅಣ್ಣಪ್ಪ, ಪ್ರದೀಪ್ ಇದ್ದರು. ಹೇಮಂತ್ಕುಮಾರ್ ನಿರೂಪಿಸಿದರು. ಬಿ.ಎನ್. ರೇಖಾ ವಂದಿಸಿದರು.