ಮೈಸೂರಲ್ಲಿ ಮೆಗಾ ಡೈರಿ: ಮಹದೇವಪ್ರಸಾದ್
ಕ.ಪ್ರ.ವಾರ್ತೆ ಗುಂಡ್ಲುಪೇಟೆ ಸೆ. 15
ಮೈಸೂರಿನಲ್ಲಿ ಮೆಗಾ ಡೈರಿ, ಜಿಲ್ಲಾ ಕೇಂದ್ರವಾದ ಚಾಮರಾಜನಗರದಲ್ಲಿ ಮೈಮುಲ್ನ ಪ್ರತ್ಯೇಕ ಹಾಲು ಒಕ್ಕೂಟ ಶೀಘ್ರದಲ್ಲಿ ಆರಂಭಿಸಲು ಸರ್ಕಾರ ಮುಂದಾಗಿದೆ ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಎಸ್.ಮಹದೇವಪ್ರಸಾದ್ ತಿಳಿಸಿದರು.
ಪಟ್ಟಣದ ಮಡಹಳ್ಳಿ ರಸ್ತೆಯ ವಿಜಯಪುರ ಬಡಾವಣೆಯಲ್ಲಿ 40 ಲಕ್ಷ ವೆಚ್ಚದಲ್ಲಿ ಮೈಮುಲ್ ವತಿಯಿಂದ ಗುಂಡ್ಲುಪೇಟೆಯ ಉಪ ಕಚೇರಿಯ ನೂತನ ಕಟ್ಟಡ ಹಾಗೂ ಬಲಚವಾಡಿ, ಬಾಚಹಳ್ಳಿ, ಅಗತಗೌಡನಹಳ್ಳಿ ಬಿಎಂಸಿ ಕೇಂದ್ರಗಳನ್ನು ಉದ್ಘಾಟಿಸಿ ಮಾತನಾಡಿ, ಮೈಸೂರು-ಚಾ.ನಗರ ಹಾಲು ಒಕ್ಕೂಟ ಬೇರ್ಪಡಿಸಲು ಸಮಿತಿ ರಚನೆಯಾಗಿದ್ದು, ವರದಿ ಬಂದ ನಂತರ ಜಿಲ್ಲಾ ಪ್ರತ್ಯೇಕ ಹಾಲು ಒಕ್ಕೂಟವಾಗಲಿದೆ. ಚಾಮರಾಜನಗರದ ಹೊರ ವಲಯದಲ್ಲಿ ಹಾಲು ಒಕ್ಕೂಟಕ್ಕೆ 20 ಎಕರೆ ಸ್ಥಳ ಗುರುತಿಸುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ ಎಂದರು.
ಮೈಸೂರಿನಲ್ಲಿ ಮೆಗಾ ಡೈರಿಗೆ 190 ಕೋಟಿ ಬೇಕಾಗಿದ್ದು ಸರ್ಕಾರ ಹಣವನ್ನು ಒದಗಿಸಲಿದೆ. ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಬೇಕು ಎಂಬ ಉತ್ಪಾದಕರು ಹಾಗೂ ಈ ಭಾಗದ ಜನಪ್ರತಿನಿಧಿಗಳ 15 ವರ್ಷಗಳ ಬೇಡಿಕೆಯನ್ನು ನಮ್ಮ ಸರ್ಕಾರ ಈಡೇರಿಸಿದ್ದು, ಪ್ರತ್ಯೇಕ ಹಾಲು ಒಕ್ಕೂಟಕ್ಕೆ ಆಡಳಿತ ವರ್ಗ ಒಪ್ಪಿಗೆ ನೀಡಿದ್ದು ಒಳ್ಳೆಯ ಬೆಳವಣಿಗೆ ಎಂದರು.
ಸಹಕಾರಿ ಕ್ಷೇತ್ರದ ಹಾಲು ಉತ್ಪಾದಕರ ಸಹಕಾರ ಸಂಘಗಳು ಲಾಭದಾಯಕವಾಗಿವೆ. ಹೈನುಗಾರಿಕೆಗೆ ರಾಜ್ಯ ಸರ್ಕಾರ ಹಾಲಿಗೆ ಪ್ರೋತ್ಸಾಹ ಧನವಾಗಿ ವಾರ್ಷಿಕ 80 ಕೋಟಿ ನೀಡುತ್ತಿದೆ. ಪ್ರೋತ್ಸಾಹ ಧನ ನೇರವಾಗಿ ಉತ್ಪಾದಕನಿಗೆ ತಲುಪಿಸುವ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದರು.
ರಾಜ್ಯ ಎಲ್ಲಾ ಸಹಕಾರ ಸಂಘಗಳಲ್ಲಿ ಆನ್ಲೈನ್ ಟ್ರೆಡಿಂಗ್ ವ್ಯವಸ್ಥೆ ತರುವ ಬಗ್ಗೆ ಸಹಕಾರ ಇಲಾಖೆ ಚಿಂತನೆ ನಡೆಸಿದ್ದು, ಈ ವ್ಯವಸ್ಥೆ ಬಂದರೆ ಸಹಕಾರ ಸಂಘಗಳಲ್ಲಿ ಭ್ರಷ್ಟಾಚಾರ ತಪ್ಪಲಿದೆ. ರಾಜ್ಯ ಎಲ್ಲ ಸಹಕಾರಿ ಬ್ಯಾಂಕ್ಗಳಲ್ಲಿ ರೈತರಿಗೆ ಎಲ್ಲಾ ಬಗೆಯ ಸಾಲ ನೀಡಬೇಕು ಎಂದು ಇಲಾಖೆಯ ಚಿಂತನೆ ನಡೆಸುತ್ತಿದೆ. ಖಾಸಗಿ ಬ್ಯಾಂಕ್ನಲ್ಲಿ ರೈತರ ಎಲ್ಲ ಸಾಲಗಳಿಗೆ ಸರ್ಕಾರ ನೀಡುವ ಯೋಜನೆಗಳು ಅನ್ವಯಯಾಗುವುದಿಲ್ಲ ಎಂದರು.
ಚಾ.ನಗರ ಜಿಪಂ ಅಧ್ಯಕ್ಷೆ ನಾಗಶ್ರೀಪ್ರತಾಪ್ ನೂತನ ಬಿಎಂಸಿ ಕೇಂದ್ರದ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಜಿಪಂ ಉಪಾಧ್ಯಕ್ಷ ಪಿ.ಮಹದೇವಪ್ಪ, ಸಭಾಧ್ಯಕ್ಷತೆ ವಹಿಸಿದ್ದ ಮೈಮುಲ್ ಅಧ್ಯಕ್ಷ ಎನ್.ಮಹದೇವಪ್ಪ ಮಾತನಾಡಿದರು.
ತಾಪಂ ಅಧ್ಯಕ್ಷೆ ಗಾಯತ್ರಿ, ಮಾಜಿ ಸಂಸದ ಎ.ಸಿದ್ದರಾಜು, ಮೈಮುಲ್ ಮಾಜಿ ಅಧ್ಯಕ್ಷ ಸಿ.ಓಂಪ್ರಕಾಶ್, ಎ.ಟಿ.ಸೋಮಶೇಖರ್, ಕೆ.ಉಮಾಶಂಕರ್, ಮೈಮುಲ್ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಸುರೇಶಬಾಬು, ಜಿಪಂ ಸದಸ್ಯ ಡಿ.ಸಿ. ನಾಗೇಂದ್ರ, ಮೈಮುಲ್ ನಿರ್ದೇಶಕ ಉದ್ದನೂರುಪ್ರಸಾದ್, ಅಂಬಳೆ ಶಿವಾನಂದಸ್ವಾಮಿ, ರಾಜೇಗೌಡ, ಈರೇಗೌಡ, ವಿಜಯಲಕ್ಷ್ಮೀ, ಗ್ರಾಪಂ ಅಧ್ಯಕ್ಷ ನಾಗಪ್ಪ, ಜಿಪಂ ಮಾಜಿ ಸದಸ್ಯ ಎಚ್.ಎಸ್.ನಂಜಪ್ಪ, ಕಬ್ಬಹಳ್ಳಿಮಹೇಶ್, ಒಕ್ಕಲಿಗರ ಸಂಘದ ಅಧ್ಯಕ್ಷ ಆಲತ್ತೂರು ಜಯರಾಂ, ತಾಪಂ ಸದಸ್ಯ ಕನ್ನೇಗಾಲಸ್ವಾಮಿ, ನಾಗರಾಜು, ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಕೆ.ಬೊಮ್ಮಯ್ಯ, ಎಪಿಎಂಸಿ ಅಧ್ಯಕ್ಷ ಚಂದ್ರಪ್ಪ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಪಿ.ಬಿ.ರಾಜಶೇಖರ್, ಮೈಮುಲ್ ಮಾರಾಟ ಅಧಿಕಾರಿ ಶ್ರೀಕಾಂತ್ ಸೇರಿದಂತೆ ಇತರರು ಇದ್ದರು.