ಶಾಂತಿ ಭಿತ್ತಿಪತ್ರ ಸ್ಪರ್ಧೆ: ಬಹುಮಾನ ವಿತರಣೆ
ಕ.ಪ್ರ.ವಾರ್ತೆ ಮೈಸೂರು ಸೆ. 15
ಶಾಂತಿ ಸಂದೇಶ ಸಾರುವ ಭಿತ್ತಿ ಪತ್ರಗಳ ಚಿತ್ರಕಲಾ ಸ್ಪರ್ಧೆ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ ಸಿದ್ಧಾರ್ಥನಗರದ ಪ್ರಾಕೃತಿಕ ಇತಿಹಾಸ ಸಂಗ್ರಹಾಲಯದಲ್ಲಿ ಭಾನುವಾರ ನಡೆಯಿತು.
ಇಂದಿರಾನಗರದ ಲಯನ್ಸ್ ಕ್ಲಬ್ ಆಫ್ ಮೈಸೂರು ಸಂಸ್ಥೆಯು ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಶಾಂತಿ ಭಿತ್ತಿಪತ್ರ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಾಕೃತಿಕ ಇತಿಹಾಸ ಸಂಗ್ರಹಾಲಯದ ವಿಜ್ಞಾನಿ ಓಂಕಾರ್ ನಾಯಕ್ ಬಹುಮಾನ ವಿತರಿಸಿದರು.
8 ರಿಂದ 15 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಈ ಸ್ಪರ್ಧೆಯು ಮೂರು ವಿಭಾಗದಲ್ಲಿ ನಡೆಯಿತು. ಪ್ರತಿ ವಿಭಾಗದಲ್ಲೂ ಪ್ರಥಮ, ದ್ವಿತೀಯ, ತೃತೀಯ ಹಾಗೂ ಇಬ್ಬರಿಗೆ ಸಮಾಧಾನಕರ ಬಹುಮಾನ ಸೇರಿದಂತೆ 15 ಮಂದಿ ವಿಜೇತರಿಗೆ ಗಣ್ಯರು ಬಹುಮಾನ ವಿತರಿಸಿದರು. ಅಲ್ಲದೆ ಭಾಗವಹಿಸಿದ್ದ ಎಲ್ಲಾ ಸ್ಪರ್ಧಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು.
ಈ ಸಂದರ್ಭದಲ್ಲಿ ಶಿವಮೊಗ್ಗದಲ್ಲಿನ ಹಿರಿಯ ಕಲಾ ಶಿಕ್ಷಕ ಸಿ.ಎಸ್. ಚಿಕ್ಕಮಠ್ ಹಾಗೂ ಮೈಸೂರು ನಿವೃತ್ತ ಎಂಜಿನಿಯರ್ ಭಗವಾನ್ ಅವರನ್ನು ಸನ್ಮಾನಿಸಲಾಯಿತು. ಲಯನ್ಸ್ ವಿಭಾಗೀಯ ಅಧ್ಯಕ್ಷ ಪಿ. ರಮೇಶ್ ಮುಖ್ಯ ಅತಿಥಿಯಾಗಿದ್ದರು. ಕ್ಲಬ್ ಅಧ್ಯಕ್ಷ ಆರ್. ಸತೀಶ್ ರಾಜು ಅಧ್ಯಕ್ಷತೆ ವಹಿಸಿದ್ದರು.
ಬೆಳಗ್ಗೆ ನಡೆದ ಕಾರ್ಯಕ್ರಮದಲ್ಲಿ ಲಯನ್ಸ್ ಮಾಜಿ ಜಿಲ್ಲಾ ಗೌವರ್ನರ್ ಎಂ.ಎನ್. ಜೈಪ್ರಕಾಶ್ ಸ್ಪರ್ಧೆ ಉದ್ಘಾಟಿಸಿದರು. ಕ್ಲಬ್ ಕಾರ್ಯದರ್ಶಿ ಕೆ.ಎಸ್. ಆನಂದಕುಮಾರ್, ಜಂಟಿ ಕಾರ್ಯದರ್ಶಿ ನಾಗಭೂಷಣ್, ಖಜಾಂಚಿ ಆನಂದ್ ಕುಮಾರ್ ಬೆಳ್ಳರ್ಪಾಡಿ, ಕಾರ್ಯಕ್ರಮದ ಸಂಚಾಲಕ ವಿ. ವೆಂಕಟೇಶ್ ಇದ್ದರು. ನಗರದ ವಿವಿಧ ಶಾಲೆಯ 500 ಕ್ಕೂ ಹೆಚ್ಚಿನ ಮಕ್ಕಳು ಭಾಗವಹಿಸಿದ್ದರು.