ಸುದ್ದಿ ಸಂಕ್ಷೇಪ
ಇಂದು ಅಭಿನಂದನೆ
ಮೈಸೂರು: ನಗರ ಜೆಡಿಎಸ್ ಪಕ್ಷದಿಂದ ಸೆ.16ರ ಸಂಜೆ 4ಕ್ಕೆ ಪಕ್ಷದ ಕಚೇರಿಯಲ್ಲಿ ಮೈಸೂರು ನಗರಪಾಲಿಕೆ ಮೇಯರ್ ಎನ್.ಎಂ. ರಾಜೇಶ್ವರಿ ಹಾಗೂ ಉಪಮೇಯರ್ ಶೈಲೇಂದ್ರ ಅವರಿಗೆ ಅಭಿನಂದನಾ ಸಮಾರಂಭ ಏರ್ಪಡಿಸಿದ್ದು, ನಗರಾಧ್ಯಕ್ಷ ರಾಜಣ್ಣ ಅಧ್ಯಕ್ಷತೆ ವಹಿಸುವರು. ಶಾಸಕರಾದ ಸಾ.ರಾ. ಮಹೇಶ್, ಜಿ.ಟಿ. ದೇವೇಗೌಡ, ಎಸ್. ಚಿಕ್ಕಮಾದು, ಸಂದೇಶ್ ನಾಗರಾಜ್ ಹಾಗೂ ಗಣ್ಯರು ಭಾಗವಹಿಸುವರು ಎಂದು ಚಾಮರಾಜ ಬ್ಲಾಕ್ ಅಧ್ಯಕ್ಷ ಆರ್.ಎಲ್. ಅನಂತನಾರಾಯಣ ತಿಳಿಸಿದ್ದಾರೆ.
ಮೃಗಾಲಯಕ್ಕೆ ನಾಳೆ ರಜೆ ಇಲ್ಲ
ಮೈಸೂರು: ತಿರು ಓಣಂ ಹಬ್ಬ ಇರುವುದರಿಂದ ವಿದ್ಯಾರ್ಥಿಗಳು, ಪ್ರವಾಸಿಗರು, ಜನಸಾಮಾನ್ಯರು ಹಾಗೂ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದರಿಂದ ವಾರದ ರಜೆಯ ದಿನವಾದ ಮಂಗಳವಾರವೂ (ಸೆ.17) ಶ್ರೀ ಚಾಮರಾಜೇಂದ್ರ ಮೃಗಾಲಯವನ್ನು ಮತ್ತು ಕಾರಂಜಿ ಕೆರೆಯ ಉದ್ಯಾನವನ್ನು ಸಾರ್ವಜನಿಕರ ವೀಕ್ಷಣೆಗೆ ತೆರೆದಿರಲಾಗುತ್ತದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ. ರವಿ ತಿಳಿಸಿದ್ದಾರೆ.
ಬಲರಾಮ ನಡಿಗೆ ಜೋರು
ಮೈಸೂರು: ದಸರೆಯಲ್ಲಿ ಪಾಲ್ಗೊಳ್ಳಲು ಕಾಡಿನಿಂದ ನಾಡಿಗೆ ಆಗಮಿಸಿರುವ ಆನೆಗಳು ಭಾನುವಾರ ತಾಲೀಮು ನಡೆಸಿದವು. ಬಲರಾಮ ಆನೆಗೆ 250 ಕೆ.ಜಿ. ಭಾರ ಹೊರಿಸಲಾಗಿತ್ತು. ಅರ್ಜುನ, ಗಜೇಂದ್ರ, ಅಭಿಮನ್ಯು, ಶ್ರೀರಾಮ, ವರಲಕ್ಷ್ಮಿ ಮತ್ತು ಸರಳ ಆನೆಗಳು ಬಲರಾಮನನ್ನು ಹಿಂಬಾಲಿಸಿದವು. ಎರಡನೇ ತಂಡದಲ್ಲಿ ಆಗಮಿಸಬೇಕಿದ್ದ ಶ್ರೀರಾಮ ಆನೆಯು ಈಗಾಗಲೇ ಮೈಸೂರು ಅರಮನೆ ಆವರಣ ಸೇರಿದ್ದು, ಮೊದಲ ತಂಡದ ಆನೆಗಳೊಂದಿಗೆ ಸೇರಿ ತಾಲೀಮು ಆರಂಭಿಸಿದೆ. ಅರಮನೆ ಆವರಣದಿಂದ ಬೆಳಗ್ಗೆ ನಡಿಗೆ ಆರಂಭಿಸಿದ ಆನೆಗಳು ಕೋಟೆ ಆಂಜನೇಯಸ್ವಾಮಿ ದೇವಸ್ಥಾನ, ಚಾಮರಾಜ ವೃತ್ತ, ಕೆ.ಆರ್. ವೃತ್ತ, ಸಯ್ಯಾಜಿರಾವ್ ರಸ್ತೆ ಮೂಲಕ ಹೈವೆ ವೃತ್ತಕ್ಕೆ ತಲುಪಿ ಅದೇ ಮಾರ್ಗವಾಗಿ ವಾಪಸ್ ಅರಮನೆ ತಲುಪಿದವು. ಸಂಜೆ ಇದೇ ಮಾರ್ಗವಾಗಿ ಆಯುರ್ವೇದ ವೃತ್ತದವರೆಗೆ ವಾಕಿಂಗ್ ಹೋಗಿ ವಾಪಸ್ ಬಂದವು ಎಂದು ಆನೆ ವೈದ್ಯ ಡಾ. ನಾಗರಾಜ್ ತಿಳಿಸಿದ್ದಾರೆ.
ನ್ಯೂನತೆ ಸರಿಪಡಿಕೆಗೆ ಮನವಿ
ಮೈಸೂರು: ದಸರಾ ಉಪ ಸಮಿತಿ ಪದಾಧಿಕಾರಿಗಳ ಆಯ್ಕೆಯಲ್ಲಿ ಆಗಿರುವ ನ್ಯೂನತೆ ಸರಿಪಡಿಸುವಂತೆ ಜಿಲ್ಲಾ ಕಾಂಗ್ರೆಸ್ ಮುಖಂಡರಲ್ಲಿ ಮನವಿ ಮಾಡಿರುವುದಾಗಿ ಕೆಪಿಎಸ್ಸಿ ಪ.ಜಾತಿ ಘಟಕದ ಅಧ್ಯಕ್ಷ ಎನ್. ಮಂಜುನಾಥ್ ಹೇಳಿದರು. ದಸರಾ ಉಪ ಸಮಿತಿ ಪದಾಧಿಕಾರಿಗಳ ಪಟ್ಟಿಯಲ್ಲಿ ಹಲವರಿಗೆ ಎರಡೆರಡು ಸಮಿತಿಯಲ್ಲಿ ಸ್ಥಾನ ನೀಡಲಾಗಿದೆ ಎಂಬ ವರದಿಯನ್ನು 'ಕನ್ನಡಪ್ರಭ'ದಲ್ಲಿ ಓದಿದೆ ಎಂದು ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ದಸರಾ ಉಪ ಸಮಿತಿಯಲ್ಲಿ ಮೂಲ ಕಾಂಗ್ರೆಸಿಗರಿಗೆ ಅನ್ಯಾಯವಾಗಿದೆ ಎಂಬ ವಿಷಯ ಕೇಳಿದೆ. ಮುಂದೆ ಈ ರೀತಿಯ ತೊಂದರೆ ಆಗದಂತೆ ಮತ್ತು ಆಗಿರುವ ನ್ಯೂನತೆಯನ್ನು ಸರಿಪಡಿಸುವಂತೆ ಕಾಂಗ್ರೆಸ್ ಅಧ್ಯಕ್ಷರಲ್ಲಿ ಮನವಿ ಮಾಡಲಾಗಿದೆ ಎಂದರು.
ದಂಪತಿ ಆತ್ಮಹತ್ಯೆಗೆ ಯತ್ನ
ಮೈಸೂರು: ಸಾಲಬಾಧೆಯಿಂದ ಮನನೊಂದ ದಂಪತಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ. ಗುಂಡೂರಾವ್ನಗರ ನಿವಾಸಿಗಳಾದ ಮಹೇಶ್ (38) ಮತ್ತು ಪೂರ್ಣಿಮಾ (30) ಆತ್ಮಹತ್ಯೆಗೆ ಯತ್ನಿಸಿದವರು. ವಿಷ ಸೇವಿಸಿ ಅಸ್ವಸ್ಥಗೊಂಡಿದ್ದ ಈ ದಂಪತಿಯನ್ನು ಮೊದಲು ಕೆ.ಆರ್. ಆಸ್ಪತ್ರೆಗೆ ದಾಖಲಿಸಿ ಬಳಿಕ ಖಾಸಗಿ ಆಸ್ಪತ್ರೆಗೆ ವರ್ಗಾಯಿಸಲಾಗಿದೆ ಎಂದು ತಿಳಿದು ಬಂದಿದೆ.
ನಾಳೆ ಬೆಂಗಳೂರಲ್ಲಿ ವಿಶ್ವಕರ್ಮ ಜಯಂತಿ
ಮೈಸೂರು: ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದಿಂದ 5ನೇ ರಾಜ್ಯಮಟ್ಟದ ವಿಶ್ವಕರ್ಮ ಜಯಂತಿಯನ್ನು ಸೆ. 17 ರಂದು ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದೆ. ಅಂದು ಬೆಳಗ್ಗೆ 11ಕ್ಕೆ ನಡೆಯುವ ಸಮಾವೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ಸಮಾಜದ ಸ್ವಾಮಿಗಳು ಸಾನ್ನಿಧ್ಯ ವಹಿಸುವರು. ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಅಧ್ಯಕ್ಷತೆ ವಹಿಸಲಿದ್ದು, ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ ವಿಶ್ವಕರ್ಮನಿಗೆ ಪ್ರಥಮ ಪೂಜೆ ಸಲ್ಲಿಸುವರು. ಸಂಸದ ಸದಸ್ಯ ರಾಜ್ ಬಬ್ಬರ್ ವಿಶ್ವಕರ್ಮ, ಮಹಾಸಭಾದ ರಾಜ್ಯಾಧ್ಯಕ್ಷ ಕೆ.ಪಿ. ನಂಜುಂಡಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸುವರು.