ಹುಡ್ಕೋ ಆಶಾಮಂದಿರ ನಿವಾಸಿಗಳ ತೀರದ ಸಮಸ್ಯೆ
ಕ.ಪ್ರ.ವಾರ್ತೆ ಮೈಸೂರು ಸೆ. 15
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಬೋಗಾದಿ 1ನೇ ಹಂತದಲ್ಲಿ ಹುಡ್ಕೋ ಆಶಾಮಂದಿರ ಸಾಮೂಹಿಕ ವಸತಿ ಯೋಜನೆಯಡಿ ನಿರ್ಮಿಸಿರುವ ಮನೆಗಳು ಆಗಲೂ ಈಗಲೂ ಕುಸಿಯುವಂತಿದ್ದು, ಇಲ್ಲಿನ ನಿವಾಸಿಗಳು ಆತಂಕದಲ್ಲೇ ಜೀವನ ನಡೆಸುವಂತಾಗಿದೆ.
1987-88 ರಲ್ಲಿ ಹುಡ್ಕೋ ಆಶಾಮಂದಿರ ವಸತಿ ಯೋಜನೆಯಡಿ ಬೋಗಾದಿ 1ನೇ ಹಂತದ ಶಾರದಾದೇವಿನಗರ 12ನೇ ತಿರುವಿನಲ್ಲಿ ನೆಲ ಅಂತಸ್ತಿನಲ್ಲಿ ಕಡಿಮೆ ಆದಾಯ ವರ್ಗದವರಿಗೆ 19 ಮನೆಗಳನ್ನು ನಿರ್ಮಿಸಲಾಗಿದೆ. ಮನೆಗಳನ್ನು ಅಪೂರ್ಣವಾಗಿ ನಿರ್ಮಿಸಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಫಲಾನುಭವಿಗಳಿಗೆ ವಿತರಿಸಲಾಗಿದೆ.
ಇಂತಹ ಅಚಾತುರ್ಯದಿಂದ ಅಪೂರ್ಣ ಕಟ್ಟಡ ಪಡೆದ ಫಲಾನುಭವಿಗಳು ಸಾಲ ಮಾಡಿ ಅಪೂರ್ಣಗೊಂಡಿದ್ದ ಮನೆಯನ್ನು ದುರಸ್ತಿ ಮಾಡಿಸಿಕೊಂಡರು. ಅಲ್ಲದೇ ಅರ್ಧಕ್ಕೆ ಕಟ್ಟಿದ ಮನೆಗಳ ಗೋಡೆಗಳು ಕುಸಿದ ಪರಿಣಾಮ ಕೆಲವರು ವಾಸವಿರುವ ಮನೆಗಳು ಒಂಟಿಯಾಗಿಯೇ ಉಳಿದಿವೆ. ಆರ್ಸಿಸಿ ಮಾಡಿಸಿದ್ದರೂ ಮಳೆಗಾಲದಲ್ಲೂ ನೀರು ಸೋರುವುದು ತಪ್ಪಿಲ್ಲ. ಮನೆಗಳು ರಸ್ತೆ ಮಟ್ಟಕ್ಕಿಂತ ಕೆಳಗಿದ್ದು, ಮಳೆ ಬಂದಾಗ ನೀರು ಮನೆಯೊಳಗೆ ನುಗ್ಗುತ್ತದೆ. ಈ ಸಂಬಂಧ ಎಂಡಿಎಗೆ ತಿಳಿಸಲು ಅಲೆಯುವುದೇ ದಿನದ ಪಡಿಪಾಟಲಾಗಿಬಿಟ್ಟಿದೆ. ಆದ್ದರಿಂದ ಸಂಬಂಧಪಟ್ಟವರು ಗಮನ ಹರಿಸುವಂತೆ ಅಲ್ಲಿನ ನಿವಾಸಿಗಳು ಮನವಿ ಮಾಡಿದ್ದಾರೆ.