ಒಕ್ಕಲಿಗ ಸಂಘಟನೆಗಳಿಂದ ವಧು- ವರರ ಸಮಾವೇಶ
ಕ.ಪ್ರ.ವಾರ್ತೆ ಮೈಸೂರು ಸೆ. 16
ಮೈಸೂರು ಜಿಲ್ಲಾ ಒಕ್ಕಲಿಗ ಸಂಘಟನೆಗಳ ಒಕ್ಕೂಟವು ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಸಹಕಾರದೊಂದಿಗೆ ಒಕ್ಕಲಿಗ ವಧು- ವರರ ಸಮಾವೇಶ ಆಯೋಜಿಸಿತ್ತು.
ಸಮಾವೇಶ ಉದ್ಘಾಟಿಸಿದ ಹಿರಿಯ ಕೆಎಎಸ್ ಅಧಿಕಾರಿ ಬಿ.ಜಿ. ಇಂದಿರಮ್ಮ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸೂಕ್ತ ವಧುಗಳಿಗೆ ವರನನ್ನು ಹುಡುಕುವುದು ಕಷ್ಟದ ಕೆಲಸವಾಗಿದೆ. ಬಂಧು ಮಿತ್ರರರು ಬೇರೆ ಬೇರೆ ಪ್ರದೇಶಗಳಲ್ಲಿ ವಾಸಿಸುತ್ತಿರುವುದರಿಂದ ಈ ಸಮಸ್ಯೆ ಉಂಟಾಗಿದೆ. ಆದರೆ, ಇಂತಹ ವೇದಿಕೆಗಳು ವಧು- ವರರ ಸಮಾವೇಶ ನಡೆಸುತ್ತಿರುವುದು ಪೋಷಕರಿಗೆ ಸಹಾಯವಾಗಲಿದೆ ಎಂದರು.
ಮರುಳೇಶ್ವರ ಟ್ರಸ್ಟಿನ ಕಾರ್ಯದರ್ಶಿ ಪ್ರೊ.ಕೆ.ಆರ್. ರಂಗಯ್ಯ ಮಾತನಾಡಿ, ನೇಗಿಲಯೋಗಿ ಸಂಸ್ಥೆ ಅನೇಕ ಉಪಯುಕ್ತ ಜನಪರ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಇದು ಒಂದು ಉತ್ತಮ ಬೆಳವಣಿಗೆ. ವಧು- ವರರ ಹುಡುಕಾಟದಲ್ಲಿ ಮಧ್ಯವರ್ತಿಗಳಿಂದಲೂ ಸಮಸ್ಯೆಯಾಗುತ್ತಿತ್ತು. ಮದುವೆ ಒಂದು ರೀತಿಯಲ್ಲಿ ವ್ಯಾಪಾರ ಎಂದು ಯಾರೂ ಭಾವಿಸಬಾರದು. ವಧು- ವರರನ್ನು ಗುರುತಿಸುವ ಕಾರ್ಯ ಸಮಾಜಸೇವಾ ಕಾರ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಮರುಳೇಶ್ವರ ಟ್ರಸ್ಟ್ನ ಅಧ್ಯಕ್ಷ ಡಾ. ಮಹದೇವಯ್ಯ, ತಿಮ್ಮಯ್ಯ, ವಧು- ವರರ ವೇದಿಕೆ ಸಂಚಾಲಕ ಕೃಷ್ಣಪ್ಪ, ಪದ್ಮನಾಭ, ಬಿ. ರಾಮಚಂದ್ರ, ಆನಂದರಾಮ್, ವೈ.ಕೆ. ನಾಗರಾಜ್, ಎಂ.ಎಸ್. ಪ್ರಕಾಶ್, ಉಷಾ ಇದ್ದರು. ಸಮಾವೇಶದಲ್ಲಿ 80ಕ್ಕೂ ಹೆಚ್ಚು ವಧು- ವರರು ಭಾಗವಹಿಸಿದ್ದರು.