ಗೃಹ ನಿರ್ಮಾಣ ಸಂಘಕ್ಕೆ 4.42 ಲಕ್ಷ ಲಾಭ
ಕ.ಪ್ರ.ವಾರ್ತೆ ಕೆ.ಆರ್. ನಗರ ಸೆ. 16
ಇಲ್ಲಿನ ಗೃಹ ನಿರ್ಮಾಣ ಸಹಕಾರ ಸಂಘವು ಪ್ರಸಕ್ತ ಸಾಲಿನಲ್ಲಿ 4.42 ಲಕ್ಷ ಲಾಭ ಗಳಿಸಿದ್ದು, ಎಲ್ಲ ಷೇರುದಾರ ಸದಸ್ಯರಿಗೆ ಶೇ.12ರಷ್ಟು ಲಾಭಾಂಶ ವಿತರಿಸಲು ನಿರ್ಧರಿಸಲಾಗಿದೆ ಎಂದು ಸಂಘದ ಅಧ್ಯಕ್ಷ ವೈ.ಆರ್. ಪ್ರಕಾಶ್ ಹೇಳಿದರು.
ಬಸವೇಶ್ವರ ಬಡಾವಣೆಯ ಶಿವಾನುಭವ ಕಲ್ಯಾಣ ಮಂಟಪದಲ್ಲಿ ನಡೆದ ಗೃಹ ನಿರ್ಮಾಣ ಸಹಕಾರ ಸಂಘದ 2012-13ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘದ ವತಿಯಿಂದ ವಿತರಿಸಲು ಉದ್ದೇಶಿಸಿರುವ ನಿವೇಶನಕ್ಕೆ ಅರ್ಜಿ ಸಲ್ಲಿಸಿರುವ ಸದಸ್ಯರಿಗೆ ಶೀಘ್ರದಲ್ಲಿ ನಿವೇಶನ ಹಂಚಲು ಕ್ರಮ ಕೈಗೊಳ್ಳುವುದರ ಜತೆಗೆ ಸಂಘದ ಕಾರ್ಯವ್ಯಾಪ್ತಿ ಪಟ್ಟಣದಿಂದ ಹೋಬಳಿಯ ವ್ಯಾಪ್ತಿಗೆ ವಿಸ್ತರಣೆ ಮಾಡಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಸಂಘಕ್ಕೆ ಕೃಷ್ಣರಾಜ ಗೃಹ ನಿರ್ಮಾಣ ಸಹಕಾರ ಸಂಘ ಎಂದು ಹೆಸರಿಡಲು ಸರ್ವ ಸದಸ್ಯರೂ ಒಪ್ಪಿಗೆ ಸೂಚಿಸಿದ್ದು, ಇಂದಿನಿಂದ ಸಂಘದ ಹೆಸರನ್ನು ಮರು ನಾಮಕರಣ ಮಾಡಲಾಗುವುದು ಎಂದ ಅವರು, ಸಂವಿಧಾನದ ನಿಯಮಾವಳಿಯ ಪ್ರಕಾರ ಒಬ್ಬರಿಗೆ ಒಂದೆ ಷೇರು ಎಂಬ ನಿಯಮದಡಿ ಕುಟುಂಬದ ಒಬ್ಬರಿಗೆ ಮಾತ್ರ ಷೇರು ನೀಡಲಾಗುತ್ತಿದೆ. ಷೇರು ಹಣ ಪಾವತಿ ಮಾಡಿ ಸಂಘದ ಬಂಡವಾಳ ಹೆಚ್ಚಳಕ್ಕೆ ಸಹಕಾರ ನೀಡುವಂತೆ ಮನವಿ ಮಾಡಿದರು.
ನಿವೇಶನ ವಿತರಣೆ: ಈಗಾಗಲೇ ಸಂಘದ ವತಿಯಿಂದ ಹಲವು ಸದಸ್ಯರಿಗೆ ನಿವೇಶನ ವಿತರಿಸಲಾಗಿದ್ದು, ಮುಂದಿನ ದಿನಗಳಲ್ಲಿ ಉಳಿದ ಸದಸ್ಯರಿಗೆ ವಿತರಣೆ ಮಾಡಲಾಗುವುದು. ಈವರೆಗೆ ಸಂಘದ ಕಾರ್ಯ ಚಟುವಟಿಕೆಗಳು ಪುರಸಭೆಯ ವ್ಯಾಪ್ತಿಗೆ ಮಾತ್ರ ಒಳಪಟ್ಟಿದ್ದು, ಮುಂದೆ ತಾಲೂಕಿನ ಹೆಬ್ಬಾಳು ಹೋಬಳಿಯಲ್ಲಿ ತನ್ನ ಕಾರ್ಯ ವ್ಯಾಪ್ತಿಯನ್ನು ವಿಸ್ತರಿಸಿಕೊಂಡು ಕೆಲಸ ನಿರ್ವಹಿಸಲಿದೆ ಎಂದು ವಿವರಿಸಿದರು. ಸಂಘಕ್ಕೆ ಸಮಗ್ರ ಉಪನಿಂದನೆ ಅಳವಡಿಸಿಕೊಳ್ಳಲು ತೀರ್ಮಾನಿಸಿದೆ ಎಂದು ಮಾಹಿತಿ ನೀಡಿದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಡಿ. ರೇಣುಕಾಪ್ರಸನ್ನ 2013-14ನೇ ಸಾಲಿನ ಆಯವ್ಯಯ ಮುಂಗಡ ಪತ್ರ ಮಂಡಿಸಿ ಸರ್ವಾನುಮತದ ಅಂಗೀಕಾರ ಪಡೆದರು. ಇದೇ ವೇಳೆ 2012-13ನೇ ಸಾಲಿನ ವಾರ್ಷಿಕ ವರದಿಯನ್ನು ಓದಿ ದಾಖಲು ಮಾಡಲಾಯಿತು. ಉಪಾಧ್ಯಕ್ಷ ಕೆ.ವಿ. ಮೋಹನ್ರಾವ್, ನಿರ್ದೇಶಕರಾದ ಕೆ.ಸಿ. ನಾಗರಾಜ್, ಕೆ.ಎಸ್. ನಾಗರಾಜು, ಎನ್.ಎಂ. ಪ್ರಕಾಶ್, ಕೆ.ಎಸ್. ಚಿಕ್ಕವೀರಪ್ಪ, ಜೆ.ಮಹದೇವ, ಪುಷ್ಪಪ್ರಕಾಶ್, ಕೃಷ್ಣಯ್ಯ ಹಾಗೂ ಸಂಘದ ಸದಸ್ಯರು ಇದ್ದರು.