ಗ್ರಾಮೀಣ ದಸರಾಗೆ ಸಕಲ ಸಿದ್ಧತೆಗೆ ಸೂಚನೆ
ಕ.ಪ್ರ.ವಾರ್ತೆ ಮೈಸೂರು ಸೆ. 16
ತಾಲೂಕು ಗ್ರಾಮೀಣ ದಸರಾ ಆಚರಣೆಗೆ ತಾಲೂಕು ಆಡಳಿತ ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಅಧಿಕಾರಿಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳಿಗೆ ಸೂಚಿಸಿದರು.
ಮೈಸೂರು ತಾಪಂ ಸಭಾಂಗಣದಲ್ಲಿ ಸೋಮವಾರ ನಡೆದ ಗ್ರಾಮೀಣ ದಸರಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ನಾಡಹಬ್ಬ ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಗ್ರಾಮೀಣ ದಸರಾ ಆಚರಿಸಲಾಗುತ್ತಿದ್ದು, ಈ ಬಾರಿ ತಾಲೂಕಿನ ಉದ್ಭೂರಿನಲ್ಲಿ ಗ್ರಾಮೀಣ ದಸರಾ ಆಚರಿಸಲು ತೀರ್ಮಾನಿಸಿದೆ. ಇದಕ್ಕೆ ಸಂಬಂಧಿಸಿದಂತೆ ತಾಲೂಕು ಆಡಳಿತ ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಹೇಳಿದರು. ಗ್ರಾಮೀಣ ದಸರಾದಲ್ಲಿ ಎಲ್ಲಾ ಇಲಾಖೆಯ ವಸ್ತುಪ್ರದರ್ಶನ ಏರ್ಪಡಿಸಬೇಕು. ಪ್ರಮುಖವಾಗಿ ರೈತರಿಗೆ ಉಪಯೋಗವಾಗುವ ಮಾಹಿತಿ ಪ್ರದರ್ಶಿಸಬೇಕು. ಜಾನಪದ ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದರು. ತಾಲೂಕಿನ ಎಲ್ಲಾ ಜಾನಪದ ಕಲಾತಂಡಗಳನ್ನೂ ಆಹ್ವಾನಿಸಲಾಗುತ್ತಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ತೀರ್ಪುಗಾರರು ಆಗಮಿಸಿ ಆಯ್ಕೆ ಮಾಡಿದ ತಂಡವನ್ನು ಮೈಸೂರು ದಸರಾ ವೇಳೆ ಯಾವುದಾದರೂ ಒಂದು ವೇದಿಕೆಯಲ್ಲಿ ಕಲಾ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗುವುದು ಎಂದು ತಹಸೀಲ್ದಾರ್ ನವೀನ್ ಜೋಸೆಫ್ ಹೇಳಿದರು.
ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, ಪುರುಷರಿಗೆ ಗುಂಡು ಎತ್ತುವ ಸ್ಪರ್ಧೆ, ಕೆಸರು ಗದ್ದೆ ಓಟದ ಸ್ಪರ್ಧೆ ಆಯೋಜಿಸಲಾಗುತ್ತಿದೆ. ಅಲ್ಲದೆ ಗ್ರಾಮೀಣ ದಸರಾ ಮೆರವಣಿಗೆಲ್ಲಿ ಸ್ತಬ್ಧಚಿತ್ರ ನಿರ್ಮಿಸಲಾಗುವುದು. ಅರಣ್ಯ ಇಲಾಖೆಯಿಂದ ಅನುಮತಿ ದೊರೆತು, ಸಾಧ್ಯವಾದರೆ ಆನೆಯೊಂದನ್ನು ಬಳಸಿಕೊಂಡು ಮೆರವಣಿಗೆ ಮಾಡುವುದಾಗಿ ತಿಳಿಸಿದರು. ಗ್ರಾಮೀಣ ದಸರಾ ಉಪ ಸಮಿತಿ ಕಾರ್ಯಾಧ್ಯಕ್ಷ ತಿಪ್ಪೇಶ್, ಅಧ್ಯಕ್ಷ ಕೋಟೆಹುಂಡಿ ಮಹದೇವ್, ತಾಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಇದ್ದರು.