ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಚಾ.ನಗರದಿಂದ ಧ್ರುವನಾರಾಯಣ ಮತ್ತೆ ಸ್ಪರ್ಧೆ

Mainashree
Updated On : 16 Sept 2013, 10:28 am

ಕ.ಪ್ರ.ವಾರ್ತೆ  ಮೈಸೂರು  ಸೆ. 16
ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಹಾಲಿ ಸಂಸದ ಆರ್. ಧ್ರುವನಾರಾಯಣ ಅವರು ಮುಂಬರುವ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸಬೇಕು ಎಂದು ಪಕ್ಷದ ಮುಖಂಡರು ಒಮ್ಮತದಿಂದ ತೀರ್ಮಾನಿಸಿದರು.
ಮೈಸೂರಿನನಲ್ಲಿ ಸೋಮವಾರ ನಡೆದ ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳ ಪದಾಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಎಚ್.ಡಿ. ಕೋಟೆ, ನಂಜನಗೂಡು, ವರುಣ, ಟಿ. ನರಸೀಪುರ ವಿಧಾನಸಭಾ ಕ್ಷೇತ್ರಗಳ ಪದಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು. ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ತಿಂಗಳಿಗೊಮ್ಮೆ ಸಭೆ ನಡೆಸಿ ಕಾರ್ಯಕರ್ತರ ಸಮಸ್ಯೆ ಪರಿಹರಿಸಬೇಕು. ಶಾಸಕರ ಕಾರ್ಯವೈಖರಿ ಬಗ್ಗೆ ನಿಗಾವಹಿಸಬೇಕು ಎಂದು ಕೆಲವು ಮುಖಂಡರು ಸಲಹೆ ನೀಡಿದರು.
ಧ್ರುವ ಹೆಸರು ಶಿಫಾರಸು: ಸಹಕಾರ ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಎಸ್. ಮಹದೇವಪ್ರಸಾದ್ ಮಾತನಾಡಿ, ಸಂಸದ ಆರ್.ಧ್ರುವನಾರಾಯಣ್ ಅವರು ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂಬುದು ಎಲ್ಲರ ಅಭಿಪ್ರಾಯವಾಗಿದೆ. ಹೀಗಾಗಿ ಚಾಮರಾಜನಗರ ಕ್ಷೇತ್ರದಿಂದ ಪಕ್ಷದ ವರಿಷ್ಠರಿಗೆ ಧ್ರುವನಾರಾಯಣ್ ಅವರ ಹೆಸರನ್ನು ಮಾತ್ರ ಕಳುಹಿಸಲಾಗುತ್ತಿದೆ ಎಂದು ಹೇಳಿದರು.
ಪಕ್ಷಕ್ಕೆ ಸೇರ್ಪಡೆಯಾಗುವ ಹೊಸಬರಿಗೆ 2-3 ವರ್ಷ ಯಾವುದೇ ಹುದ್ದೆ ನೀಡುವುದಿಲ್ಲ. ಅವರ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತರಾಗಿ ದುಡಿಯಬೇಕು. ನಂತರವಷ್ಟೇ ಹುದ್ದೆ ನೀಡಲಾಗುವುದು. ಪಕ್ಷದ ಸದಸ್ಯತ್ವ ನೋಂದಣಿ ಅಕ್ಟೋಬರ್ ಅಂತ್ಯದವರೆಗೆ ನಡೆಯಲಿದೆ. ಪಕ್ಷ ವಿರೋಧಿ ಚಟುವಟಿಕೆ ಮಾಡುತ್ತಿರುವವರ ಬಗ್ಗೆ ಕೆಪಿಸಿಸಿಗೆ ದೂರು ನೀಡಲಾಗುವುದು ಎಂದರು. ನಿಗಮ ಮಂಡಳಿ ಹುದ್ದೆಗಳಿಗೆ ನೇಮಕದಲ್ಲಿ ಮಹಿಳೆಯರಿಗೆ ಹೆಚ್ಚಿನ ಸ್ಥಾನ ನೀಡಬೇಕು. ಚುನಾವಣೆಗೆ ಸ್ಪರ್ಧಿಸಲು ಅವಕಾಶ ಸಿಗದವರಿಗೆ ನಿಗಮ ಮಂಡಳಿಗಳಲ್ಲಿ ಅವಕಾಶ ಸಿಗಬೇಕಿದೆ ಎಂದು ತಿಳಿಸಿದರು.
ಮಾಜಿ ಸಚಿವೆ ಹಾಗೂ ಕೆಪಿಸಿಸಿ ಉಪಾಧ್ಯಕ್ಷೆ ರಾಣಿ ಸತೀಶ್, ವೀಕ್ಷಕರಾದ ವಿನಯ್ ಕಾರ್ತಿಕ್, ಸುಮ ವಸಂತ, ಕಾರ್ಯದರ್ಶಿ ಚಂದ್ರಕಲಾ ಪ್ರಸನ್ನ, ಮಾಜಿ ಸಂಸದ ಎ. ಸಿದ್ದರಾಜು, ಶಾಸಕರಾದ ಎಸ್. ಜಯಣ್ಣ,  ಆರ್. ನರೇಂದ್ರ, ಆರ್. ಧರ್ಮಸೇನ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement