ಬ್ಯಾಂಕ್‌ಗಳಲ್ಲಿ ಠೇವಣಿ ಮಾಡಲು ಸಲಹೆ
ಕ.ಪ್ರ.ವಾರ್ತೆ ರಾವಂದೂರು ಸೆ. 16
ಗ್ರಾಮೀಣರ ಬದುಕು ಅಭಿವೃದ್ಧಿ ಹೊಂದಬೇಕಾದರೆ ಅವರ ಆದಾಯವನ್ನು ಬ್ಯಾಂಕ್‌ಗಳಲ್ಲಿ ಠೇವಣಿ ಇಟ್ಟು, ಅದರಿಂದ ಬರುವ ಆದಾಯದಲ್ಲಿ ಜೀವನ ನಿರ್ವಹಣೆ ಮಾಡುವಂತಾಗಬೇಕು ಎಂದು ರಾವಂದೂರಿನ ಮುರುಘಾಮಠದ ಮೋಕ್ಷಪತಿ ಸ್ವಾಮೀಜಿ ಹೇಳಿದರು.
ರಾವಂದೂರಿನಲ್ಲಿ ಸೋಮವಾರ ಕಾವೇರಿ ಗ್ರಾಮೀಣ ಬ್ಯಾಂಕಿನ 354ನೇ ಶಾಖೆ ಉದ್ಘಾಟಿಸಿ ಮಾತನಾಡಿದ ಅವರು, ಬ್ಯಾಂಕಿಗೆ ಬರುವ ಗ್ರಾಹಕರನ್ನು ಸತಾಯಿಸದೆ, ಅವರಿಗೆ ಸ್ಪಂದಿಸಿದರೆ ಬ್ಯಾಂಕಿನೆಡೆಗೆ ಹೆಚ್ಚಿನ ಗ್ರಾಹಕರು ಹೆಚ್ಚಿಗೆ ಆಕರ್ಷಿಸುತ್ತಾರೆ. ಬ್ಯಾಂಕಿನ ವ್ಯವಹಾರವು ಉತ್ತಮಗೊಳ್ಳುತ್ತದೆ. ಈ ದಿಸೆಯಲ್ಲಿ ಬ್ಯಾಂಕು ಕಾರ್ಯೋನ್ಮುಖ ವಾಗಬೇಕೆಂದು ಕರೆ ನೀಡಿದರು.
ಕಾವೇರಿ ಗ್ರಾಮೀಣ ಬ್ಯಾಂಕಿನ ಅಧ್ಯಕ್ಷ ಸೋಮಶೇಖರಶಾಸ್ತ್ರಿ ಮಾತನಾಡಿ, ಪ್ರತಿಯೊಂದು ಕುಟುಂಬವು ಬ್ಯಾಂಕ್‌ಗಳಲ್ಲಿ ಖಾತೆ ತೆರೆಯುವ ಅನಿವಾರ್ಯ ಪರಿಸ್ಥಿತಿ ಇಂದು ಬಂದಿದ್ದು, ಸರ್ಕಾರದ ಸವಲತ್ತುಗಳನ್ನು ಪಡೆಯಲು ಕೂಡಾ ಬ್ಯಾಂಕಿನ ಖಾತೆ ಅತ್ಯಗತ್ಯವಾಗಿದೆ ಎಂದು ತಿಳಿಸಿದರು.
ಕಾವೇರಿ ಗ್ರಾಮೀಣ ಬ್ಯಾಂಕಿನ ಪ್ರಾದೇಶಿಕ ಕಚೇರಿಯ ವಲಯ ವ್ಯವಸ್ಥಾಪಕ ಜಿ. ಷಣ್ಮುಖಸ್ವಾಮಿ ಮಾತನಾಡಿ, ಪ್ರಸ್ತುತ ವರ್ಷ ಕಾವೇರಿ ಗ್ರಾಮೀಣ ಬ್ಯಾಂಕ್ 7 ಸಾವಿರ ಕೋಟಿಗೂ ಹೆಚ್ಚು ವ್ಯವಹಾರ ನಡೆಸಿದ್ದು, ಬ್ಯಾಂಕಿನಲ್ಲಿ ರೈತರು ಅತಿ ಸಣ್ಣ ರೈತರು, ಮಹಿಳಾ ಸಂಘಗಳು, ವೃತ್ತಿ ಕೌಶಲ್ಯ, ತೋಟಗಾರಿಗೆ ಸೇರಿದಂತೆ ಇನ್ನಿತರೆ ಯೋಜನೆಗಳಿಗೆ ಸಾಲ ಸೌಲಭ್ಯ ದೊರೆಯಲಿದ್ದು, ಗ್ರಾಮೀಣ ಜನರು ಇದರ ಪ್ರಯೋಜನ ಪಡೆಯುವಂತೆ ಮನವಿ ಮಾಡಿದರು.
ಗ್ರಾಪಂ ಅಧ್ಯಕ್ಷ ಸ್ವಾಮೀಗೌಡ, ವಾಣಿಜ್ಯೋದ್ಯಮಿಗಳಾದ ಆರ್.ವಿ. ಶಿವಮೂರ್ತಿ, ಕೆ.ಆರ್. ಜಗದೀಶ್, ಆರ್.ಎಸ್. ಸುರೇಶ್, ಪಿಡಿಒ ಬಸವರಾಜು, ಹಿರಿಯ ವೈದ್ಯ ಡಾ. ರಂಗಸ್ವಾಮಿ, ಬ್ಯಾಂಕಿನ ವ್ಯವಸ್ಥಾಪಕ ಜಿ. ಸುದೀಂದ್ರ ಇತರೆ ಅಧಿಕಾರಿಗಳಾದ ಬಿ.ಕೆ. ರಮೇಶ್, ನಾಗೇಂದ್ರಸ್ವಾಮಿ ಭಾಗವಹಿಸಿದ್ದರು.