ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮೂರೇ ತಿಂಗಳಲ್ಲಿ ಕಾಂಗ್ರೆಸ್ ಬೇಸರ

Mainashree
Updated On : 16 Sept 2013, 10:32 am

ಕ.ಪ್ರ.ವಾರ್ತೆ  ಮೈಸೂರು  ಸೆ. 16
ಕೇವಲ ಮೂರು ತಿಂಗಳಲ್ಲೆ ತಾಲೂಕಿನ ಜನತೆ ಕಾಂಗ್ರೆಸ್ ಧೋರಣೆಗಳ ಬಗ್ಗೆ ಬೇಸತ್ತು, ಜೆಡಿಎಸ್ ಬೆಂಬಲಿಗರನ್ನು ಪಿಎಲ್‌ಡಿ ಬ್ಯಾಂಕ್ ಚುನಾವಣೆಯಲ್ಲಿ ಗೆಲ್ಲಿಸುವ ಮೂಲಕ ಜೆಡಿಎಸ್ ಪಕ್ಷ ಮೇಲುಗೈ ಸಾಧಿಸಿರುವುದೇ ಇದಕ್ಕೆ ಸಾಕ್ಷಿಯಾಗಿದೆ ಎಂದು ಶಾಸಕ ಜಿ.ಟಿ. ದೇವೇಗೌಡ ಹೇಳಿದರು.
ಇಲ್ಲಿನ ಕೃಷಿ ಪ್ರಾಥಮಿಕ ಅಭಿವೃದ್ಧಿ ಸಹಕಾರ ಬ್ಯಾಂಕ್ ಚುನಾವಣೆಯಲ್ಲಿ ಸ್ವತಃ ಶಾಸಕ ಎಚ್.ಪಿ. ಮಂಜುನಾಥ್ ಅವರೇ ಉಸ್ತುವಾರಿ ವಹಿಸಿ ಹಣದ ಹೊಳೆ ಹರಿಸಿದರೂ 12 ಸ್ಥಾನದಲ್ಲಿ ಕೇವಲ ಎರಡು ಸ್ಥಾನಗಳನ್ನು ಗೆದ್ದು, ಒಂದು ಸ್ಥಾನ ಲಾಟರಿಯಿಂದ ಬಂದು ಮೂರು ಸ್ಥಾನಗಳಿಗೆ ತೃಪ್ತಿ ಪಟ್ಟುಕೊಳ್ಳುವಂತಾಗಿದೆ. ಜೆಡಿಎಸ್ 9 ಸ್ಥಾನಗಳಲ್ಲಿ ಗೆಲವು ಸಾಧಿಸಿ, ಮತದಾರರು ಕಾಂಗ್ರೆಸ್ ಅನ್ನು ತಿರಸ್ಕರಿಸಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಣದ ಆಮಿಷವೊಡ್ಡಿ ಗೆಲುವು ಸಾಧಿಸಿದ್ದ ಶಾಸಕರು, ಅಭಿವೃದ್ಧಿ ಬಗ್ಗೆ ಚಿಂತಿಸದೆ, ಹಿಂದಿನ ಸರ್ಕಾರದಲ್ಲಿ ತಾವು ತಂದಿದ್ದ ಅನುದಾನಕ್ಕೆ ನೀರಾವರಿ, ಶಾಲೆ, ಆಸ್ಪತ್ರೆಗಳಿಗೆ ಗುದ್ದಲಿ ಪೂಜೆ ನಡೆಸುತ್ತಿರುವ ಅವರು, ಸೌಜನ್ಯಕ್ಕಾದರೂ ತಮ್ಮ ಹೆಸರು ಹೇಳದಿರುವುದ್ದಕ್ಕೆ ವಿಷಾದ ವ್ಯಕ್ತಪಡಿಸಿದರು.
ತಾಲೂಕಿನ ಪ್ರೌಢಶಾಲೆಗೆ ತಲಾ 20 ಲಕ್ಷ ಅನುದಾನ ಬಿಡುಗಡೆಯಾಗಿದ್ದರೂ, ಕಾಮಗಾರಿ ಈವರೆಗೂ ಪ್ರಾರಂಭಿಸಿಲ್ಲ. ಮನುಗನಹಳ್ಳಿ ಗ್ರಾಮದ ಪ್ರೌಢಶಾಲೆ ಇದಕ್ಕೆ ಜ್ವಲಂತ ಸಾಕ್ಷಿ, ಶಾಸಕರು ಸುಳ್ಳು ಹೇಳುವುದನ್ನು ಬಿಡುವಂತೆ ಕಿವಿಮಾತು ಹೇಳಿದ ಅವರು, ತಾಲೂಕಿನ ಅಭಿವೃದ್ಧಿಗೆ ಎಲ್ಲರನ್ನೂ ಕರೆದೊಯ್ಯುವಂತೆ ಒತ್ತಾಯಿಸಿದರು.
ಮನೆ ಮಂಜೂರಾಗಿದ್ದರೂ ತಾಲೂಕಿನಲ್ಲಿ ವಸತಿ ಸಮಸ್ಯೆ ಬಗೆಹರಿಸಿಲ್ಲ. ಆಶ್ರಯ ಸಮಿತಿ ರಚಿಸದೆ, ಇಲ್ಲಿನ ಜನತೆ ನೆಮ್ಮದಿಯ ಜೀವನ ನಡೆಸಲು ಮನೆಗಳಿಲ್ಲದೆ ಅತಂತ್ರರಾಗಿದ್ದಾರೆ. ಸರ್ಕಾರ ಕೂಡಲೆ ಸಮಿತಿಗಳನ್ನು ರಚಿಸಿ ಭೂ ಮಾಲೀಕತ್ವದ ಸಾಗುವಳಿ ಪತ್ರ ನೀಡಬೇಕು. ಆಶ್ರಯ ನಿವೇಶನ ವಿತರಿಸಬೇಕು. ಸಮರ್ಪಕವಾಗಿ ಪಡಿತರ ಕಾರ್ಡು ವಿತರಿಸುವಂತೆ ಆಗ್ರಹಿಸಿದರು.
ಜಿಪಂ ಅಧಿಕಾರ ಜೆಡಿಎಸ್‌ಗೆ ಖಚಿತ: ಮುಖ್ಯಮಂತ್ರಿ ತವರಿನಲ್ಲೆ ಬಿಜೆಪಿ ಮತ್ತು ಜೆಡಿಎಸ್ ಒಡಂಬಡಿಕೆ ಮಾಡಿಕೊಂಡಿದ್ದು, ಜಿಪಂ ವರಿಷ್ಠ ಗಾದಿ ಈ ಬಾರಿ ಜೆಡಿಎಸ್ ಹಿಡಿಯಲಿದೆ. ಜೆಡಿಎಸ್‌ನಿಂದ ಅಧ್ಯಕ್ಷ ಗಾದಿಗೆ ನಳಿನಾಕ್ಷಿ ಮತ್ತು ಉಪಾಧ್ಯಕ್ಷ ಗಾದಿಗೆ ಗೀತಾ ಬಸವಣ್ಣ ಅವರನ್ನು ಸೂಚಿಸಿದೆ. ಕಾಂಗ್ರೆಸ್ ಸಹ ಬಿಜೆಪಿ ಸದಸ್ಯರನ್ನು ಸೆಳೆಯಲು ತೆರೆಮರೆಯ ಪ್ರಯತ್ನ ನಡೆಸುತ್ತಿದೆ. ಇದರಿಂದ ಜೆಡಿಎಸ್ ಕಾದುನೋಡುವ ತಂತ್ರ ಅನುಸರಿಸುತ್ತಿದ್ದೇವೆ.
ಇನ್ನೂ ಚುನಾವಣಾ ಪ್ರಕ್ರಿಯೆ ಪ್ರಾರಂಭವಾಗಿಲ್ಲ. ಬೆಂಗಳೂರು ಗ್ರಾಮಾಂತರ, ಮಂಡ್ಯ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಮಾತ್ರಕ್ಕೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುತ್ತೇನೆಂಬುದು ದಡ್ಡತನ. ಈಗಾಗಲೇ ಬಿಜೆಪಿ ಮತ್ತು ಜೆಡಿಎಸ್ ವರಿಷ್ಠರು ಮಾತುಕತೆಯಲ್ಲಿದ್ದಾರೆ, ಜೆಡಿಎಸ್ ಮುಳುಗುವ ಹಡಗಲ್ಲ. ಮುಂಬರುವ ಚುನಾವಣೆಯಲ್ಲಿ ದಡ ಸೇರುವ ಕೆಲಸವನ್ನು ವರಿಷ್ಠರು ಮಾಡಲಿದ್ದಾರೆ. ದೇಶವನ್ನಾಳಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಅಂತಿಮವಾಗಿ ನಿರ್ಧರಿಸಲಿದ್ದಾರೆ ಎಂದು ಹೇಳಿದರು. ತಾಲೂಕು ಜೆಡಿಎಸ್ ಪ್ರಭಾರ ಅಧ್ಯಕ್ಷ ಸಿದ್ದಲಿಂಗೇಗೌಡ, ಮುಖಂಡ ಕಿರಂಗೂರು ಬಸವರಾಜು, ತಾಪಂ ಸದಸ್ಯ ವೆಂಕಟೇಶ್, ಮೈಮುಲ್ ನಿರ್ದೇಶಕ ಕೆಂಪನಹಳ್ಳಿ ಕುಮಾರ್, ತಾಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ರತ್ನಪುರಿ ಪ್ರಭು, ಪುರಸಭಾ ಸದಸ್ಯ ಎಚ್.ಪಿ. ಸತೀಶಕುಮಾರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement