ವರ್ಗಾವಣೆ ಮಾಡಿಸಿಕೊಡಲು ಸಂಸದರಿಗೆ ದುಂಬಾಲು
ಕ.ಪ್ರ.ವಾರ್ತೆ ಮೈಸೂರು ಸೆ. 16
ರಾಜ್ಯ ಸರ್ಕಾರವೇನೋ ಸರ್ಕಾರಿ ಅಧಿಕಾರಿಗಳ ವರ್ಗಾವಣೆಗೆ ಬ್ರೇಕ್ ನೀಡಿದೆ. ಇದರ ಹವಾ ಬಹುತೇಕ ಜನರಿಗೆ ತಟ್ಟಿದೆ. ಆದ್ದರಿಂದ ಕೆಲವು ಸರ್ಕಾರಿ ಅಧಿಕಾರಿಗಳು ಸರ್ಕಾರಕ್ಕೆ ನೇರವಾಗಿ ಅರ್ಜಿ ಸಲ್ಲಿಸದೆ ಸಂಸದರ ಮೂಲಕ ವರ್ಗಾವಣೆ ಮಾಡಿಸಿಕೊಡುವಂತೆ ದುಂಬಾಲು ಬಿದ್ದ ಪ್ರಸಂಗ ಸೋಮವಾರ ಸಂಸದರ ಕಚೇರಿಯಲ್ಲಿ ನಡೆಯಿತು.
ಅನಾರೋಗ್ಯದಿಂದ ಕೆಲವು ದಿನ ಕಾಲ ವಿಶ್ರಾಂತಿ ಪಡೆದಿದ್ದ ಮೈಸೂರು ಲೋಕಸಭಾ ಸದಸ್ಯ ಎಚ್. ವಿಶ್ವನಾಥ್ ಸೋಮವಾರ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲು ಕಾರ್ಯಕ್ರಮ ಏರ್ಪಡಿಸಿದ್ದರು. ಬೆಳಗ್ಗೆ 11ಕ್ಕೆ ನಿಗದಿಯಾಗಿದ್ದ ಕಾರ್ಯಕ್ರಮಕ್ಕೆ ಸಂಸದರೇ ತಡವಾಗಿ ಆಗಮಿಸಿದರು.
ಬೆಳಗ್ಗೆಯಿಂದ ಅರ್ಜಿ ಹಿಡಿದು ಕಾದು ಕುಳಿತಿದ್ದ ಜನರು ತಮ್ಮ ಅಹವಾಲು ಸಲ್ಲಿಸಿದರು. ಸರ್ಕಾರ ವರ್ಗಾವಣೆ ಪ್ರಕ್ರಿಯೆ ನಿಲ್ಲಿಸಿದೆ. ಆದ್ದರಿಂದ ತಾವು ಶಿಫಾರಸು ಮಾಡಿಸಿ ತಮಗೆ ವರ್ಗಾವಣೆ ಮಾಡಿಸಿಕೊಡುವಂತೆ ಮನವಿ ಸಲ್ಲಿಸಿದರು.
ಮತ್ತೆ ಕೆಲವರು ತಮಗೆ ಕಳೆದು ಎರಡು ಮೂರು ತಿಂಗಳಿಂದ ಮಾಸಾಶನವೇ ಬರುತ್ತಿಲ್ಲ ಎಂದು ದೂರಿದರೆ, ಮತ್ತೆ ಕೆಲವರು ತಮಗೆ ವೈದ್ಯಕೀಯ ಚಿಕಿತ್ಸೆ ಕೊಡಿಸಲು ಅನುವು ಮಾಡಿಕೊಡುವಂತೆ ಸಹಾಯ ಕೋರಿದರು. ಸಂಸದರಿಂದ ಕೆಲಸ ಮಾಡಿಸಿಕೊಳ್ಳಲು ಬೆಳಗಾವಿಯಿಂದ ಜನರು ಆಗಮಿಸಿದ್ದು ವಿಶೇಷವಾಗಿತ್ತು.
ಅಂಗವಿಕಲೆ ಸುನೀತಾ ಮನವಿ: ಕೃಷ್ಣಮೂರ್ತಿಪುರಂನ ಶಾರದಾ ವಿಲಾಸ ಬಿ.ಇಡಿ ಕಾಲೇಜಿನಲ್ಲಿ ಗುತ್ತಿಗೆ ಆಧಾರದಲ್ಲಿ ಟೈಪಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿರುವ ಅಂಗವಿಕಲೆ ಸುನೀತಾ ಅವರು ತಮಗೆ ನೌಕರಿ ಕೊಡಿಸುವಂತೆ ಮನವಿ ಸಲ್ಲಿಸಿದರು.
ಬಿ.ಕಾಂ. ಪದವಿ ಮುಗಿಸಿರುವ ಸುನೀತಾ ಕೆ.ಜಿ. ಕೊಪ್ಪಲಿನ ಚಿಕ್ಕೇಗೌಡರ ಪುತ್ರಿ. ಚಿಕ್ಕೇಗೌಡರಿಗೆ ನಾಲ್ಕು ಮಂದಿ ಹೆಣ್ಣು ಮಕ್ಕಳು. ಅವರಲ್ಲಿ ಸುನೀತಾ ಎರಡನೇಯವರು. ಚಿಕ್ಕಂದಿನಲ್ಲೆ ಪೊಲಿಯೋಗೆ ತುತ್ತಾದ ಸುನೀತಾ ನಂತರ ಶ್ರಮಪಟ್ಟು ಪದವಿ ಪೂರೈಸಿದರು. ಆದರೆ ಉದ್ಯೋಗವಿಲ್ಲದೆ ಅನಿವಾರ್ಯವಾಗಿ ಟೈಪಿಸ್ಟ್ ಕೆಲಸ ಮಾಡುತ್ತಿದ್ದಾರೆ.