ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಇಂದು ಜಿಪಂ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ

Mainashree
Updated On : 17 Sept 2013, 10:57 am

ಕ.ಪ್ರ.ವಾರ್ತೆ  ಮೈಸೂರು  ಸೆ. 17
ಮೈಸೂರು ಜಿಲ್ಲಾ ಪಂಚಾಯಿತಿಯ ಎರಡನೇ ಅವಧಿಗೆ ಅಧ್ಯಕ್ಷ- ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ಸೆ.18ರಂದು ನಡೆಯಲಿದ್ದು, ಬಿಜೆಪಿ-ಜೆಡಿಎಸ್ ಹೊಂದಾಣಿಕೆ ಮುಂದುವರೆವ ಸಾಧ್ಯತೆ ಇದೆ. ಆದರೆ 'ಕೈ' ಚಳಕದಿಂದ ಮೈತ್ರಿಕೂಟದ ಅಧಿಕಾರಕ್ಕೆ ಸಂಕಷ್ಟ ಎದುರಾಗಿದೆ.
ಜಿಪಂ ಸಭಾಂಗಣದಲ್ಲಿ ಮಧ್ಯಾಹ್ನ 3ಕ್ಕೆ ಚುನಾವಣೆ ನಡೆಯಲಿದ್ದು, ಅಧ್ಯಕ್ಷ ಸ್ಥಾನ ಸಾಮಾನ್ಯಕ್ಕೂ, ಉಪಾಧ್ಯಕ್ಷ ಸ್ಥಾನ ಬಿಸಿಎ ಮಹಿಳೆಗೂ ಮೀಸಲಾಗಿದೆ. ಪ್ರಾದೇಶಿಕ ಆಯುಕ್ತೆ ಎಂ.ವಿ. ಜಯಂತಿ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುವರು. ಕಳೆದ ಬಾರಿಯಂತೆ ಈ ಬಾರಿಯೂ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮುಂದುವರಿದಿದೆ. ಆದರೆ ಬಿಜೆಪಿ ಸದಸ್ಯರಾದ ಕೆಂಪಣ್ಣ ಮತ್ತು ಮಂಜುಳಾ ಪುಟ್ಟಸ್ವಾಮಿ ಅವರ ನಿಲುವಿನ ಮೇಲೆ ಚುನಾವಣೆಯ ಫಲಿತಾಂಶ ನಿಂತಿದೆ. ಅವರು ಈಗ ಕಾಂಗ್ರೆಸ್ ಬೆಂಬಲಿಸುವ ಸಾಧ್ಯತೆ ಇದೆ.
ಜೆಡಿಎಸ್ ಕಸರತ್ತು: ನಗರ ಪಾಲಿಕೆಯಲ್ಲಿ ಆದ ಹೊಂದಾಣಿಕೆಯಂತೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಎರಡೂ ಸ್ಥಾನವನ್ನೂ ಜೆಡಿಎಸ್ ತನ್ನ ತೆಕ್ಕೆಗೆ ಹಾಕಿಕೊಳ್ಳಲು ಯತ್ನಿಸುತ್ತಿದೆ. ಅಧ್ಯಕ್ಷ ಸ್ಥಾನಕ್ಕೆ ಹೆಬ್ಬಾಳು ಕ್ಷೇತ್ರದ ನಳಿನಾಕ್ಷಿ ವೆಂಕಟೇಶ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಹಂಪಾಪುರ ಕ್ಷೇತ್ರದ ರಾಜಲಕ್ಷ್ಮಿ ನಾಗೇಂದ್ರಸ್ವಾಮಿ ಅವರನ್ನು ಕಣಕ್ಕಿಳಿಸುತ್ತಿದೆ. ಆದರೆ ಬೀರಿಹುಂಡಿಯ ಗೀತಾ ಬಸವಣ್ಣ ಕೂಡ ಉಪಾಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಸ್ಥಾಯಿ ಸಮಿತಿಯನ್ನು ಬಿಜೆಪಿಗೆ ಬಿಟ್ಟುಕೊಡುವ ಸಾಧ್ಯತೆ ಇದೆ. ಈ ಮಧ್ಯೆ ಕಾಂಗ್ರೆಸ್ ಸಹ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಿದೆ. ಅಧ್ಯಕ್ಷ ಸ್ಥಾನಕ್ಕೆ ಹಿನಕಲ್ ಕ್ಷೇತ್ರದ ಕೂರ್ಗಳ್ಳಿ ಎಂ. ಮಹದೇವ್ ಹದಿನಾರು ಕ್ಷೇತ್ರದ ರೇವಮ್ಮ ಮಾಲೇಗೌಡ ಅವರನ್ನು ಉಪಾಧ್ಯಕ್ಷ ಸ್ಥಾನಕ್ಕೆ ಕಣಕ್ಕಿಳಿಸಲು ತೀರ್ಮಾನಿಸಲಾಗಿದೆ.
ಒಟ್ಟು 46 ಜಿಪಂ ಕ್ಷೇತ್ರದಲ್ಲಿ 21 ಕಾಂಗ್ರೆಸ್, 16 ಜೆಡಿಎಸ್, 8 ಬಿಜೆಪಿ ಮತ್ತು 1 ಪಕ್ಷೇತರ ಸದಸ್ಯರು ಇದ್ದಾರೆ. ಕಾಂಗ್ರೆಸ್ ಅಧಿಕಾರದಿಂದ ದೂರ ಇಡುವ ಉದ್ದೇಶದಿಂದ ಜೆಡಿಎಸ್ ಬಿಜೆಪಿಯೊಂದಿಗೆ ಕೈ ಜೋಡಿಸಿತ್ತು.
ವಿಪ್ ಉಲ್ಲಂಘನೆ?: ಎರಡನೇ ಅವಧಿಯಲ್ಲಿ ಕಾ.ಪು. ಸಿದ್ದವೀರಪ್ಪ ಮತ್ತು ಎಂ.ಕೆ. ಸುಚಿತ್ರಾ 10 ತಿಂಗಳ ಅವಧಿಯ ಅಧಿಕಾರ ಪೂರೈಸಿದ್ದರೂ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡದ ಹಿನ್ನೆಲೆಯಲ್ಲಿ ಬಿಜೆಪಿಯ ಡಾ. ಶಿವರಾಂ, ಕೆಂಪಣ್ಣ, ಮಂಜುಳಾ ಪುಟ್ಟಸ್ವಾಮಿ ಮತ್ತು ಪಕ್ಷೇತರ ಸದಸ್ಯ ಎಲ್. ಮಾದಪ್ಪ ಅವರು ಕಾಂಗ್ರೆಸ್ ಜೊತೆ ಕೈಜೋಡಿಸಿ ಅವಿಶ್ವಾಸ ಗೊತ್ತುವಳಿ ಮಂಡಿಸಿ ಅಧಿಕಾರದಿಂದ ಕೆಳಗಿಳಿಸಲು ಮುಂದಾದರು. ಆಗ ಅವರಿಬ್ಬರೂ ರಾಜಿನಾಮೆ ನೀಡಿದರು. ಈಗ ಡಾ. ಶಿವರಾಂ ಬಿಜೆಪಿ- ಜೆಡಿಎಸ್ ಮೈತ್ರಿಕೂಟಕ್ಕೆ ಮರಳಿದ್ದಾರೆ. ಆದರೆ ಉಳಿದಿಬ್ಬರು ಪಕ್ಷದ ವಿಪ್ ಉಲ್ಲಂಘಿಸಿ, ಕಾಂಗ್ರೆಸ್ ಪರ ಮತ ಚಲಾಯಿಸುವ ಸಾಧ್ಯತೆ ಇದೆ.
ನಗರ ಪಾಲಿಕೆಯಲ್ಲಿನ ಹೊಂದಾಣಿಕೆಯಂತೆಯೆ ಜಿಪಂ ಚುನಾವಣೆಯಲ್ಲಿಯೂ ಬಿಜೆಪಿ- ಜೆಡಿಎಸ್ ಮೈತ್ರಿ ಮುಂದುವರಿಯಲಿದೆ. ಈಗಾಗಲೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಗಳ ಹೆಸರು ಅಂತಿಮವಾಗಿದ್ದು, ಬಿಜೆಪಿ ಮುಖಂಡರೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ, ಶಾಸಕ ಚಿಕ್ಕಮಾದು ಹೇಳಿದರು.
ಕಾಂಗ್ರೆಸ್‌ನ 21 ಸದಸ್ಯರು: ನಮಗೆ ಜಿ.ಪಂ.ನಲ್ಲಿ ಬಹುಮತ ಇದೆ. 21 ಮಂದಿ ಕಾಂಗ್ರೆಸ್ ಸದಸ್ಯರೇ ಇರುವುದರಿಂದ ನಮ್ಮ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುತ್ತಿದ್ದೇವೆ. ಅಲ್ಲದೆ ನಾವು ಈ ಹಿಂದಿನ ಅವಧಿಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡಿಸಿರಲಿಲ್ಲ. ಅವರ ಪಕ್ಷದವರೇ ಮಂಡಿಸಿದ್ದರು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಆರ್. ಧರ್ಮಸೇನ ತಿಳಿಸಿದರು.
ಕಾಂಗ್ರೆಸ್‌ನ 21 ಸದಸ್ಯರೊಂದಿಗೆ ಪಕ್ಷೇತರ ಎಲ್. ಮಾದಪ್ಪ, ಬಿಜೆಪಿಯ ಮಂಜುಳಾ ಪುಟ್ಟಸ್ವಾಮಿ, ಕೆಂಪಣ್ಣ ಅವರು ಬೆಂಬಲಿಸಿದರೆ ಆ ಪಕ್ಷಕ್ಕೆ ಅಧಿಕಾರ ಖಚಿತ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್‌ನ ಇಬ್ಬರು ಸದಸ್ಯರನ್ನು ಗೈರುಹಾಜರು ಮಾಡಿಸಲು ಜೆಡಿಎಸ್- ಬಿಜೆಪಿ ಮೈತ್ರಿಕೂಟ ಯತ್ನಿಸುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದು, ಜಿಲ್ಲೆಯವರೇ ಆದ ಸಿದ್ದರಾಮಯ್ಯ ಅವರು ಸಿಎಂ ಆಗಿರುವುದರಿಂದ ಈ ಸಾಧ್ಯತೆ ಕಡಿಮೆ. ಏನಾದರೂ ಪವಾಡ ನಡೆದರೆ ಮಾತ್ರ ಮೈತ್ರಿಕೂಟ ಅಧಿಕಾರ ಉಳಿಸಿಕೊಳ್ಳಬಹುದು. ಇಲ್ಲದಿದ್ದಲ್ಲಿ ಕಾಂಗ್ರೆಸ್ ಜಿಪಂ ಅಧಿಕಾರದ ಗದ್ದುಗೆಗೆ ಏರಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement