ಟೆಂಟ್ ಶಾಲೆ ಮಕ್ಕಳಿಗೆ ಸಮವಸ್ತ್ರ
ಮೈಸೂರು: ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಆನೆಗಳೊಂದಿಗೆ ಆಗಮಿಸಿರುವ ಮಾವುತರು ಮತ್ತು ಕಾವಾಡಿಗಳ ಮಕ್ಕಳಿಗಾಗಿ ಮೈಸೂರು ಅರಮನೆ ಆವರಣದಲ್ಲಿ ಟೆಂಟ್ ಶಾಲೆ ಆರಂಭಿಸಲಾಗಿದೆ. ಈ ಟೆಂಟ್ ಶಾಲೆಗೆ ಕೃಷ್ಣರಾಜ ಕ್ಷೇತ್ರದ ಶಾಸಕ ಎಂ.ಕೆ. ಸೋಮಶೇಖರ್ ಅವರು ಮಂಗಳವಾರ ಬೆಳಗ್ಗೆ ಅಧಿಕೃತ ಚಾಲನೆ ನೀಡಿದರು. ಮಕ್ಕಳಿಗೆ ಒಂದು ಜೊತೆ ಸಮವಸ್ತ್ರ, ನೋಟ್ ಪುಸ್ತಕ, ಪೆನ್, ಅಗತ್ಯ ಪಠ್ಯಪುಸ್ತಕ ಹಾಗೂ ಸಿಹಿ ವಿತರಿಸಿ ಶುಭ ಕೋರಿದರು.
ಮೊದಲ ತಂಡದ ಆನೆಗಳ ಮಾವುತರು ಮತ್ತು ಕಾವಾಡಿಗಳ 26 ಮಕ್ಕಳಿಗೆ ಈ ಟೆಂಟ್ ಶಾಲೆಯಲ್ಲಿ ನೂರ್ ಫಾತಿಮಾ, ಗುರುಸ್ವಾಮಿ ಸೇರಿದಂತೆ ಮೂವರು ಶಿಕ್ಷಕರು ಪಾಠ ಮಾಡುತ್ತಿದ್ದಾರೆ. ಬಿಇಒ ರಘುನಂದನ್, ಡಿಆರ್ಸಿ ಪುಷ್ಪಾ, ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್. ಸುಬ್ರಹ್ಮಣ್ಯ, ಆನೆ ವೈದ್ಯ ಡಾ. ನಾಗರಜ್ ಇದ್ದರು.
ಆನೆಗಳಿಗೆ ಭಾರ ಹೊರಿಸಲು ಮಳೆ ಅಡ್ಡಿ
ಮೈಸೂರು: ದಸರಾ ಆನೆಗಳಿಗೆ ಭಾರ ಹೊರಿಸಿ ತಾಲೀಮು ನಡೆಸಲು ಮಂಗಳವಾರ ಮಳೆ ಅಡ್ಡಿಯಾಯಿತು. ಯಾವ ಆನೆಗಳಿಗೂ ಭಾರ ಹೊರಿಸದೆ ತಾಲೀಮು ನಡೆಸಲಾಯಿತು. ಅರ್ಜುನ, ಬಲರಾಮ, ಅಭಿಮನ್ಯು, ಗಜೇಂದ್ರ, ಶ್ರೀರಾಮ, ವರಲಕ್ಷ್ಮಿ ಮತ್ತು ಸರಳ ಆನೆಗಳು ಅರಮನೆಯಿಂದ ಹೊರಟು ಕೋಟೆ ಆಂಜನೇಯಸ್ವಾಮಿ ದೇವಸ್ಥಾನ, ಚಾಮರಾಜ ವೃತ್ತ, ಕೆ.ಆರ್. ವೃತ್ತ, ನ್ಯೂ ಸಯ್ಯಾಜಿರಾವ್ ರಸ್ತೆ ಮೂಲಕ ಹೈವೇ ವೃತ್ತಕ್ಕೆ ತಲುಪಿ ಅದೇ ಮಾರ್ಗವಾಗಿ ಅರಮನೆಗೆ ವಾಪಸ್ ಬಂದವರು. ಸಂಜೆ ಸಹ ಆಯುರ್ವೇದ ಆಸ್ಪತ್ರೆ ವೃತ್ತದವರೆಗೆ ಹೋಗಿ ವಾಪಸ್ ಆಗಿವೆ ಎಂದು ಡಾ. ನಾಗರಾಜ್ ತಿಳಿಸಿದ್ದಾರೆ.