'ಲಜ್ಜೆ, ತಾಳ್ಮೆ, ಸಹನೆ ಇದ್ದರೆ ಮಹಿಳೆ ಸುರಕ್ಷಿತ'
ಕ.ಪ್ರ.ವಾರ್ತೆ ಮೈಸೂರು ಸೆ. 17
ಲಜ್ಜೆ, ತಾಳ್ಮೆ, ಸಹನೆ ಮತ್ತು ಸಂಯಮ ಇದ್ದಾಗ ಮಹಿಳೆ ಸುರಕ್ಷಿತವಾಗಿಯೇ ಇರುತ್ತಾಳೆ ಎಂದು ವಾಸ್ತುಶಿಲ್ಪಿ ಪಾರ್ವತಿ ರಾಮಕೃಷ್ಣ ಹೇಳಿದರು.
ನಗರದ ಮಾನವೀಯ ಮಹಿಳಾ ಸೇವಾ ಟ್ರಸ್ಟ್ ಮತ್ತು ಮಹಾರಾಣಿ ಮಹಿಳಾ ಕಲಾ, ವಾಣಿಜ್ಯ ಕಾಲೇಜಿನ ರಾಜ್ಯಶಾಸ್ತ್ರ ಮತ್ತು ಸಾರ್ವಜನಿಕ ಆಡಳಿತ ವಿಭಾಗ ಮಂಗಳವಾರ ಏರ್ಪಡಿಸಿದ್ದ ಮಹಿಳೆ ನೀನೆಷ್ಟು ಸುರಕ್ಷಿತ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹೆಣ್ಣಿಗೆ ಲಜ್ಜೆ, ತಾಳ್ಮೆ, ಸಹನೆ ಮತ್ತು ಸಂಯಮ ಇರಬೇಕು. ಮಹಿಳೆಯ ಅಸ್ತಿತ್ವ ಮತ್ತು ರಕ್ಷಣೆ ಅವಳ ಕೈಯಲ್ಲಿದೆ. ತಾನು ಧರಿಸುವ ಬಟ್ಟೆ ಮತ್ತು ಒಡವೆ ಮುಖ್ಯ ಎಂಬುದನ್ನು ಬಿಡಬೇಕು. ತನ್ನ ಮಕ್ಕಳಿಗೆ ಸಂಸ್ಕಾರ ನೀಡಿ ಬೆಳೆಸಿದರೆ ಎಲ್ಲಾ ಪುರುಷರೂ ಮಹಿಳೆಯರನ್ನು ಪೂಜ್ಯ ಭಾವನೆಯಿಂದಲೇ ನೋಡುತ್ತಾರೆ. ಅಂತಹ ಭಾವನೆಯನ್ನು ಮಕ್ಕಳಲ್ಲಿ ಬಿತ್ತಬೇಕು ಎಂದರು.
ನಾವು ನಮ್ಮನ್ನು ಎಂದಿಗೂ ಅಸಾಯಕರು ಎಂದುಕೊಳ್ಳಬೇಕಿಲ್ಲ. ನನಗೇನು ಮಹಿಳೆ ಅಸುರಕ್ಷಿತೆ ಎನಿಸುತ್ತಿಲ್ಲ. ತನ್ನನ್ನು ತಾನು ರಕ್ಷಿಸಿಕೊಳ್ಳುವ ಸಾಮರ್ಥ್ಯ ಮಹಿಳೆಗಿದೆ. ಅದಕ್ಕಾಗಿ ಪ್ರತಿ ಮಹಿಳೆಗೂ ಒಬ್ಬ ಪೊಲೀಸು ಅಥವಾ ಅಣ್ಣನೋ, ತಮ್ಮನೋ ಇರಬೇಕಿಲ್ಲ ಎಂದು ಅವರು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಮೇಯರ್ ಎನ್.ಎಂ. ರಾಜೇಶ್ವರಿ ಅವರು, ದೌರ್ಜನ್ಯ ಮುಕ್ತ ರಾಷ್ಟ್ರ ನಿರ್ಮಾಣ ಆಗಬೇಕು ಎಂದು ಆಶಯ ವ್ಯಕ್ತಪಡಿಸಿದರು.
ನಗರ ಪಾಲಿಕೆ ಸದಸ್ಯೆ ಹಾಗೂ ಟ್ರಸ್ಟ್ನ ಸಂಸ್ಥಾಪಕ ಅಧ್ಯಕ್ಷೆ ಮಂಜುಳಾ ಮಾನಸ ಪ್ರಾಸ್ತಾವಿಕ ಭಾಷಣ ಮಾಡಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಎಂ. ಪುರುಷೋತ್ತಮ್ ಮಾತನಾಡಿ, ಕಾಲೇಜಿಗೆ ಹೊಸ ಕಟ್ಟಡ, ಕಸದ ಡಬ್ಬಗಳು ಮತ್ತು ಬೀದಿನಾಯಿ ಹಾವಳಿ ನಿಯಂತ್ರಿಸಲು ಮೇಯರ್ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಎಂ. ಸುಂದರ್ ಇದ್ದರು.