'ಸಹಕಾರ' ಕುರುಕ್ಷೇತ್ರವಾಗಿ ಮಾರ್ಪಟ್ಟಿದೆ: ದೇವನೂರ
ಕ.ಪ್ರ.ವಾರ್ತೆ ಮೈಸೂರು ಸೆ. 17
ಬಡವರ ಏಳಿಗೆಗಾಗಿ ಶ್ರಮಿಸಬೇಕಾದ ಸಹಕಾರ ಕ್ಷೇತ್ರವು 'ಕುರುಕ್ಷೇತ್ರ'ವಾಗಿ ಮಾರ್ಪಟ್ಟಿದೆ ಎಂದು ಸಾಹಿತಿ ದೇವನೂರ ಮಹಾದೇವ ಹೇಳಿದರು.
ನಗರದ ಮಹಾತ್ಮ ಗಾಂಧಿ ರಸ್ತೆ ತರಕಾರಿ ಮಾರುಕಟ್ಟೆ ಮೈದಾನದಲ್ಲಿ ಮಂಗಳವಾರ ಮಧ್ಯಾಹ್ನ ನಡೆದ ಸಿದ್ಧಾರ್ಥ ತರಕಾರಿ ಬೆಳೆಯುವ ರೈತರು ಹಾಗೂ ಮಾರಾಟಗಾರರ ವಿವಿಧೋದ್ದೇಶ ಸಂಘದ 2012- 13ನೇ ಸಾಲಿನ ಸರ್ವ ಸದಸ್ಯರ 2ನೇ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು.
ಜನ ಟ್ರಸ್ಟ್ಗಳ ಮೇಲಿನ ನಂಬಿಕೆ ಸಹ ಕಳೆದುಕೊಂಡಿದ್ದಾರೆ. ಸಹಕಾರ ಸಂಘಗಳು ಮತ್ತು ಟ್ರಸ್ಟ್ ಎರಡೂ ಕ್ಷೇತ್ರಗಳು ನೆಲಕಚ್ಚಿವೆ. ರಾಜಕಾರಣಿಗಳು ಮತ್ತು ಅಧಿಕಾರಿಗಳು ರಸ್ತೆ ಬದಿ ವ್ಯಾಪಾರಿಗಳ ಬದುಕು ಸುಧಾರಿಸುವ ಮುಂದಾಗಬೇಕು ಎಂದು ಅವರು ಸಲಹೆ ನೀಡಿದರು.
ರೈತರು ತರಕಾರಿ ಬೆಳೆದು ಸಣ್ಣ ಸಂಘ ಕಟ್ಟಿಕೊಂಡು ಹಣ ಹೂಡಿ ಲಾಭ ಮಾಡಿಕೊಂಡಿದ್ದಾರೆ. ತರಕಾರಿ ವ್ಯಾಪಾರ ಮತ್ತು ಮಕ್ಕಳ ಶಿಕ್ಷಣಕ್ಕೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಸಂಘದ ಸದಸ್ಯರಿಗೆ ಸಾಲ ನೀಡಲಾಗುತ್ತಿದೆ. ತಮ್ಮ ರಟ್ಟೆ ಬಲದಿಂದ ಬದುಕು ಕಟ್ಟಿಕೊಂಡಿರುವ ತರಕಾರಿ ಬೆಳೆಯುವ ರೈತರು ಜಾತಿ ಸಂಕೋಲೆಯಿಂದ ಹೊರ ಬಂದಿದ್ದಾರೆ. ಇವರಂತೆಯೇ ದುಡಿಯುವ ವರ್ಗ ಜಾತಿ ಸರಪಳಿ ಕಳಚಿಕೊಂಡು, ಶಾಪ ವಿಮೋಚನೆಯಾದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಅವರು ತಿಳಿಸಿದರು.
38 ಲಕ್ಷ ಸಾಲ ಸೌಲಭ್ಯ: ಸಿದ್ದಾರ್ಥ ತರಕಾರಿ ಬೆಳೆಯುವ ರೈತರು ಹಾಗೂ ಮಾರಾಟಗಾರರ ವಿವಿಧೋದ್ದೇಶ ಸಂಘದ ಅಧ್ಯಕ್ಷ ಬೆಟ್ಟಯ್ಯಕೋಟೆ ಮಾತನಾಡಿ, ಹೆಚ್ಚಿನ ಬಡ್ಡಿಗೆ ಹಣ ತರುವುದನ್ನು ತಪ್ಪಿಸಲು ಈ ಸಂಘವನ್ನು ಸ್ಥಾಪಿಸಲಾಗಿದೆ. ಸಂಘದ ಸದಸ್ಯರಿಂದ 1110 ರು. ಷೇರು ಹಣವನ್ನು ಸಂಗ್ರಹಿಸಲಾಗಿದೆ. 4 ಲಕ್ಷ ರು. ಷೇರಿನೊಂದಿಗೆ ಆರಂಭವಾದ ಸಂಘವು ಅತಿ ಕಡಿಮೆ ಅವಧಿಯಲ್ಲಿ 38 ಲಕ್ಷ ರು. ಸಾಲ ಸೌಲಭ್ಯ ನೀಡಿದೆ ಎಂದರು.
ಸರ್ಕಾರಿ ಆಸ್ತಿಯಾದ ತರಕಾರಿ ಮಾರುಕಟ್ಟೆ ಜಾಗವು ವಿವಾದಕ್ಕೀಡಾಗಿ ಸುಪ್ರೀಂಕೋರ್ಟ್ನಲ್ಲಿ ವ್ಯಾಜ್ಯ ನಡೆಯುತ್ತಿದೆ. ರಾಜ್ಯ ಸರ್ಕಾರ ಸಮರ್ಥ ವಾದ ಮಂಡಿಸಿ, ಅಗತ್ಯ ದಾಖಲಾತಿಗಳನ್ನು ಒದಗಿಸುವ ಮೂಲಕ ಜಾಗ ತನ್ನದಾಗಿಸಿಕೊಳ್ಳಬೇಕು. ನಮ್ಮ ಸಂಘಕ್ಕೆ ಮೈಸೂರು ಜನ ಬೆನ್ನೆಲುಬಾಗಿ ನಿಲ್ಲಬೇಕು ಎಂದು ಅವರು ಕೋರಿದರು.
ಶಾಸಕ ಎಂ.ಕೆ. ಸೋಮಶೇಖರ್, ಪತ್ರಿಕೋದ್ಯಮಿ ರಾಜಶೇಖರ್ ಕೋಟಿ, ನಿವೃತ್ತ ಮೇಜರ್ ಜನರಲ್ ಒಂಬತ್ಕೆರೆ, ನಗರಪಾಲಿಕೆ ಅಧೀಕ್ಷಕ ಎಂಜಿನಿಯರ್ ಕೃಷ್ಣ, ಹಿರಿಯ ಲೆಕ್ಕ ಪರಿಶೋಧಕ ಮಂಜಯ್ಯ, ಸಂಘದ ಉಪಾಧ್ಯಕ್ಷ ಆಲಗೂಡು ಶಿವಕುಮಾರ್, ನಿರ್ದೇಶಕ ರತ್ನಪುರಿ ಪುಟ್ಟಸ್ವಾಮಿ ಇದ್ದರು.