ಸುದ್ದಿ ಸಂಕ್ಷೇಪ
ಅರಸೇಗೌಡರಿಗೆ ಕಾಯಕ ರತ್ನ ಪ್ರಶಸ್ತಿ
ಹುಣಸೂರು: ಪಿರಿಯಾಪಟ್ಟಣ ಪಟ್ಟಣದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಸೆ.29ರಂದು ನಡೆಯುವ ದಾರಿದೀಪ ವಾರಪತ್ರಿಕೆಯ 30ನೇ ವಾರ್ಷಿಕೋತ್ಸವ ಸಮಾರಂಭ ನಡೆಯಲಿದೆ. ಅಂದು ಬೆಳಗ್ಗೆ 10.30ಕ್ಕೆ ರಂಗಭೂಮಿ ಕಲಾವಿದ ಹಾಗೂ ಚಲನಚಿತ್ರ ನಟ ಹುಣಸೂರು ಕುಮಾರ್ ಅರಸೇಗೌಡರಿಗೆ ಕಾಯಕ ರತ್ನ ಪ್ರಶಸ್ತಿ ಮತ್ತು ವಿವಿಧ ಕ್ಷೇತ್ರದಲ್ಲಿ ಸಲ್ಲಿಸಿದ ಸಾಧಕರಿಗೆ ಹಿರಿಯ ನಟ ದ್ವಾರಕೀಶ್ ಪ್ರಶಸ್ತಿ ಪ್ರದಾನ ಮಾಡುವರು.
ನಾಳೆ ಶಿಕ್ಷಕರ ದಿನಾಚರಣೆ
ಹುಣಸೂರು: ಡಿ. ದೇವರಾಜ ಅರಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೆ.19ರ ಬೆಳಗ್ಗೆ 10.30ಕ್ಕೆ ಕಾಲೇಜಿನ ಸ್ನೇಹ ಮಂಟಪ ಸಭಾಂಗಣದಲ್ಲಿ ನಡೆಯುವ ಶಿಕ್ಷಕರ ದಿನಾಚರಣೆಯನ್ನು ಶಾಸಕ ಎಚ್.ಪಿ. ಮಂಜುನಾಥ್ ಉದ್ಘಾಟಿಸುವರು. ಪ್ರಾಂಶುಪಾಲ ಪ್ರೊ. ಎಚ್.ಸಿ. ಲೋಹಿತಾಶ್ವ ವಿರಚಿತ ಆಡಳಿತಾತ್ಮಕ ಸಿದ್ಧಾಂತ ಎಂಬ ಪುಸ್ತಕ ಬಿಡುಗಡೆ ಮಾಡುವರು. ಜಾನಪದ ವಿದ್ವಾಂಸ ಪಿ.ಕೆ. ರಾಜಶೇಖರ್ ಮಾತನಾಡುವರು.
ಬಾಲ್ ಬ್ಯಾಡ್ಮಿಂಟ್; ವಿಭಾಗ ಮಟ್ಟಕ್ಕೆ
ಎಚ್.ಡಿ. ಕೋಟೆ: ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಮೈಸೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯದಲ್ಲಿ ತಾಲೂಕು ಅಂತರಸಂತೆ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜು ಪ್ರೌಢಶಾಲೆಯ ಬಾಲಕರು ಪ್ರಥಮ ಸ್ಥಾನ ಪಡೆದು, ವಿಭಾಗ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಈ ಮಕ್ಕಳನ್ನು ಶಾಲೆಯ ಶಿಕ್ಷಕ ವೃಂದ, ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರು ಅಭಿನಂದಿಸಿದ್ದಾರೆ.
ಮೂಡಲಕೊಪ್ಪಲು ಶಾಲೆಗೆ ನಿಯೋಗ
ಹುಣಸೂರು: ತಾಲೂಕಿನ ಹಳೇಬೀಡು ಕ್ಲಸ್ಟರ್ ಮೂಡಲಕೊಪ್ಪಲು ಶಾಲೆಗೆ ರಾಜಸ್ತಾನ್ ರಾಜ್ಯದ ಗಣ್ಯರ ನಿಯೋಗ ಭೇಟಿ ನೀಡಿತ್ತು. ಶಾಲೆಯ ಪರಿಸರ, ನೈರ್ಮಲ್ಯ, ಶೌಚಾಲಯ ವ್ಯವಸ್ಥೆ, ಮಧ್ಯಾಹ್ನದ ಬಿಸಿಯೂಟ, ಕ್ಷೀರಭಾಗ್ಯ ಯೋಜನೆಯ ಹಾಗೂ ಶೈಕ್ಷಣಿಕ ಗುಣಮಟ್ಟದ ಬಗ್ಗೆ ಮಾಹಿತಿ ಪಡೆದರು. ರಾಜ್ಯ ಪ್ರಶಸ್ತಿ ಪುರಸ್ಕೃತ, ಶಿಕ್ಷಕ ಎಂ.ಎಸ್. ಸಿದ್ಧಲಿಂಗಮೂರ್ತಿ ನಿಯೋಗಕ್ಕೆ ಸಂಪೂರ್ಣ ಮಾಹಿತಿ ನೀಡಿದರು. ಡಿಎಸ್ಆರ್ಟಿ ನಿರ್ದೇಶಕ ಮನೋಜ್ಕುಮಾರ್, ಬಾಲು ಇದ್ದರು.
'ಯಶಸ್ವಿನಿ' ನೋಂದಣಿ
ಪಿರಿಯಾಪಟ್ಟಣ: ತಾಲೂಕಿನ ಕಂಪಲಾಪುರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಷೇರುದಾರರು ಹಾಗೂ ಅವರ ಕುಟುಂಬಸ್ಥರಿಗೆ ಯಶಸ್ವಿನಿ ಆರೋಗ್ಯ ವಿಮೆ ಯೇಜನೆಗೆ ನೊಂದಣಿ ಪ್ರಾರಂಭವಾಗಿದ್ದು, ಸೆ.30 ಕಡೆಯ ದಿನವಾಗಿದೆ ಎಂದು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿ.ಎಸ್. ರಾಮಚಂದ್ರು ಹೇಳಿದ್ದಾರೆ. ಯೋಜನೆಗೆ ಒಳಪಡುವವರು ಸಂಘದ ಷೇರುದಾರರಾಗಿ ಕನಿಷ್ಠ 6 ತಿಂಗಳು ಕಳೆದಿರಬೇಕು. ಪ್ರತಿ ಸದಸ್ಯರಿಗೆ 210 ನೋಂದಣಿ ಶುಲ್ಕವಿದ್ದು, ಸರ್ಕಾರದ ವತಿಯಿಂದ 50 ರು. ಗಳ ಪ್ರೋತ್ಸಾಹ ಧನವಿರುತ್ತದೆ. ಸದಸ್ಯರು ಕೇವಲ 160 ರೂಗಳನ್ನು ಪಾವತಿಸಬೇಕಿದೆ. ಎಸ್ಸಿ, ಎಸ್ಟಿ, ವರ್ಗದವರಿಗೆ 10 ರು.ಗಳನ್ನು ಪಾವತಿಸಬೇಕಾಗಿದ್ದು, ಸಹಕಾರಿ ಬಂಧುಗಳು ಇದನ್ನು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದ್ದಾರೆ...
ಪೈಕಾ ಕ್ರೀಡೆ ಮುಂದಕ್ಕೆ, 24ಕ್ಕೆ ಜಿಲ್ಲಾ ಕ್ರೀಡೆಗೆ ಆಯ್ಕೆ
ಮೈಸೂರು: ದಸರಾ ಮಹೋತ್ಸವ ಅಂಗವಾಗಿ ಸೆ.20ರಂದು ನಡೆಸಲು ಉದ್ದೇಶಿಸಿದ್ದ ಪೈಕಾ ಗ್ರಾಮೀಣ ಕ್ರೀಡಾಕೂಟವನ್ನು ಮುಂದೂಡಲಾಗಿದೆ. ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ ಸ್ಪರ್ಧೆ ಹಾಗೂ ಆಯ್ಕೆ ಪ್ರಕ್ರಿಯೆ ಸೆ.24ರಂದು ನಡೆಯಲಿದೆ. ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದ ಗುಂಪು ಸ್ಪರ್ಧೆಗಳನ್ನು ಮೈಸೂರು ವಿವಿ ಸ್ಪೋರ್ಟ್ಸ್ ಪೆವಿಲಿಯನ್ನಲ್ಲಿ ಹಾಗೂ ಅಥ್ಲೆಟಿಕ್ಸ್ ಸ್ಪರ್ಧೆಗಳನ್ನು ಸಂತ ಫಿಲೋಮಿನಾ ಕಾಲೇಜು ಕ್ರೀಡಾಂಗಣದಲ್ಲಿ ಸಂಘಟಿಸಲಾಗುತ್ತಿದೆ. ಸೆ.24ರ ಬೆಳಗ್ಗೆ 9ಕ್ಕೆ ಮೈಸೂರು ವಿವಿ ಸ್ಪೋರ್ಟ್ಸ್ ಪೆವಿಲಿಯನ್ ಮೈದಾನದಲ್ಲಿ ಮತ್ತು ಅಥ್ಲೇಟಿಕ್ಸ್ನಲ್ಲಿ ಭಾಗವಹಿಸುವವರು ಅಂದು ಬೆಳಗ್ಗೆ 9ಕ್ಕೆ ಸೇಂಟ್ ಫಿಲೋಮಿನಾ ಕಾಲೇಜು ಮೈದಾನದಲ್ಲಿ ಹಾಜರಿರಬೇಕು. ಖುದ್ದಾಗಿ ಅಥವಾ ದೂ. 2564179 ಸಂಪರ್ಕಿಸಬಹುದು.
ವಿಷ್ಣು ಅಭಿಮಾನಿಗಳಿಂದ ರಕ್ತದಾನ ಶಿಬಿರ
ಎಚ್.ಡಿ. ಕೋಟೆ: ಸಾಹಸಸಿಂಹ ವಿಷ್ಣುವರ್ಧನ್ ಹುಟ್ಟುಹಬ್ಬದ ಅಂಗವಾಗಿ ಮಂಗಳವಾರ ವಿಷ್ಣುವರ್ಧನ್ ಅಭಿಮಾನಿಗಳ ಸಂಘ ಹಾಗೂ ರೋಟರಿ ಸಂಸ್ಥೆಯವರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ಹಮ್ಮಿಕೊಂಡಿದ್ದರು. ಶಿಬಿರದಲ್ಲಿ ವಿಷ್ಣುವರ್ರ್ಧನ್ ಅಭಿಮಾನಿಗಳು, ಸಾರ್ವಜನಿಕರು ಸೇರಿದಂತೆ ಒಟ್ಟು 37 ಮಂದಿ ರಕ್ತದಾನವನ್ನು ಮಾಡಿದರು. ಹುಟ್ಟುಹಬ್ಬದ ಅಂಗವಾಗಿ ಸೆ.18ರ ಬೆಳಗ್ಗೆ 11ಕ್ಕೆ ವಿಷ್ಣುವರ್ಧನ್ ಭಾವಚಿತ್ರದ ಮೆರವಣಿಗೆ, ಬಾಪೂಜಿ ವೃತ್ತದಲ್ಲಿ ಅನ್ನದಾನ ಹಾಗೂ ಸಂಜೆ 5ಕ್ಕೆ ರಸಮಂಜರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಸಮಿವುಲ್ಲಾ ತಿಳಿಸಿದ್ದಾರೆ. ರಕ್ತದಾನ ಶಿಬಿರದಲ್ಲಿ ರೋಟರಿ ಅಧ್ಯಕ್ಷ ಚಂದ್ರಶೇಖರ್, ಕಾರ್ಯದರ್ಶಿ ಕೃಷ್ಣ, ಸತೀಶ್ ಆರಾದ್ಯ, ಪಪಂ ಸದಸ್ಯರಾದ ವಿವೇಕ್, ರಾಜಣ್ಣ, ಅನ್ಸರ್, ಸಂಘದ ಪ್ರಕಾಶ್, ಶೇಖರ್, ನವೀನ್, ರಮೇಶ್, ರಾಮ, ರವಿ ಭಾಗವಹಿಸಿದ್ದರು.
ಇಂದು ವೈದ್ಯಕೀಯ ತಪಾಸಣೆ ಶಿಬಿರ
ಹುಣಸೂರು: ಪಟ್ಟಣದ ಶಿಕ್ಷಕರ ಭವನದಲ್ಲಿ ಸೆ.18ರ ಬೆಳಗ್ಗೆ 10ಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ರಾಜಶೇಖರ್ ನೇತೃತ್ವದಲ್ಲಿ ವಿಶೇಷ ನ್ಯೂನತೆ ಹೊಂದಿರುವ ತಾಲೂಕಿನ ಸರ್ಕಾರಿ, ಅನುದಾನಿತ, ಖಾಸಗಿ ಪ್ರೌಢಶಾಲೆಗಳ 9ನೇ ತರಗತಿ ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದು ಅಧಿಕಾರಿ ರಾಮಚಂದ್ರ ತಿಳಿಸಿದ್ದಾರೆ.
ಕಿತ್ತೂರಿನಲ್ಲಿ ಕಾಡುತ್ತಿದೆ ವಿದ್ಯುತ್ ಸಮಸ್ಯೆ
ಕಿತ್ತೂರು: ಪಿರಿಯಾಪಟ್ಟಣ ಬೆಟ್ಟದಪುರ ಹೋಬಳಿಯ ಕಿತ್ತೂರು ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಗೆ ಕಳೆದ ಮೂರು ತಿಂಗಳಿನಿಂದಲೂ ವಿದ್ಯುತ್ ಸಮಸ್ಯೆ ಹೆಚ್ಚಾಗಿದ್ದು, ಜನತೆ ಮತ್ತು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯುಂಟಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಕಿತ್ತೂರಿನಲ್ಲಿ ಸುಮಾರು 6 ರೈಸ್ಮಿಲ್, 3 ಸಾ ಮಿಲ್ಗಳನ್ನು ಹೊಂದಿದ್ದು ಈ ಭಾಗದ ಪ್ರಮುಖ ವ್ಯಾಪಾರ ಕೇಂದ್ರವಾಗಿದ್ದರೂ ಕೂಡಾ ನಿಯಮಿತವಾದ ವಿದ್ಯುತ್ ಸರಬರಾಜು ಮಾಡದೇ ವಿದ್ಯುತ್ಗಾಗಿ ರೈತರು ಪರದಾಡುವಂತಾಗಿದೆ.
ಗುಡಿಕೈಗಾರಿಕೆಗಳಾದ ರೈಸ್ಮಿಲ್, ಹಲ್ಲರ್ ಮಿಲ್, ಸಾಮಿಲ್ಗಳು ಸೇರಿದಂತೆ ವಿದ್ಯುತ್ ಇಲ್ಲದೇ ಹಾಳಾಗುತ್ತಿವೆ. ಅಲ್ಲದೇ ಜನರೇಟರ್ಗಳಿಂದ ಪಂಪ್ಸೆಟ್ಗಳನ್ನು ನಿರ್ವಹಿಸುವ ಸನ್ನಿವೇಶ ಎದುರಾಗಿದೆ.