ಕಲ್ಲು ಗಣಿಗಾರಿಕೆ ನಿಲ್ಲಿಸುವಂತೆ ಶಾಸಕ ವೆಂಕಟೇಶ್ ಸೂಚನೆ
ಬೈಲುಕುಪ್ಪೆ: ಪಿರಿಯಾಪಟ್ಟಣ ತಾಲೂಕಿನಾದ್ಯಂತ ಅಕ್ರಮವಾಗಿ ನಡೆಯುತ್ತಿರುವ ಕಲ್ಲುಕೋರೆ ಗಣಿಗಾರಿಕೆಯನ್ನು ಕೂಡಲೇ ಸ್ಥಗಿತಗೊಳಿಸಲು ಶಾಸಕ ಕೆ.ವೆಂಕಟೇಶ್ ಅವರು ತಹಸೀಲ್ದಾರ್ಗೆ ಸೂಚಿಸಿದರು.
ಚನ್ನಕಲ್ ಕಾವಲು ಗ್ರಾಪಂ ಆವರಣದಲ್ಲಿ ಏರ್ಪಡಿಸಿದ್ದ ಜನತಾ ದರ್ಶನ ಕಾಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಕ್ರಮವಾಗಿ ಗಣಿಗಾರಿಕೆ ನಡೆಯುತ್ತಿದೆ. ಆಳೆತ್ತರದ ಬೆಟ್ಟಗಳೆಲ್ಲ ನೆಲಸಮವಾಗುತ್ತಿವೆ. ಇದನ್ನು ಕಂಡು ಕಾಣದಂತೆ ಅಧಿಕಾರಿಗಳು ಕೈಕಟ್ಟಿ ಕುಳಿತಿದ್ದಾರೆ ಎಂದು ಹೇಳಿ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಶೀಘ್ರದಲ್ಲೆ ತಾಲೂಕಿನ ರಸ್ತೆಗಳನ್ನೆಲ್ಲ ದುರಸ್ತಿ ಪಡಿಸಲಾಗುವುದು. ಎಲ್ಲ ಗ್ರಾಮಗಳಿಗೆ ಭೇಟಿ ನೀಡಿ ಜನರ ಸಮಸ್ಯೆ ಅರಿತು ಹಂತ ಹಂತವಾಗಿ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು. ಅತಿ ಶೀಘ್ರದಲ್ಲೆ ತಾಲೂಕನ್ನು ನಿರಂತರ ಜ್ಯೋತಿ ಯೋಜನೆಗೆ ಒಳಪಡಿಸಲಾಗುವುದು. ಆಗ ವಿದ್ಯುತ್ ಸಮಸ್ಯೆ ಬಗೆ ಹರಿಯುವುದಾಗಿ ತಿಳಿಸಿದರು.
ಭೂಮಿ ನಡುಗುತ್ತಿದೆ: ತಾಪಂ ಮಾಜಿ ಸದಸ್ಯ ಶೇಖರ್ ಮಾತನಾಡಿ, ಚನ್ನಕಲ್ ಸುತ್ತಮುತ್ತ ಕಲ್ಲುಕೋರೆ ಗಣಿಗಾರಿಕೆ ಹೆಚ್ಚಾಗಿದ್ದು, ಕಲ್ಲುಗಳನ್ನು ಒಡೆಯಲು ಭಾರಿ ಗಾತ್ರದ ಬಾಂಬ್ಗಳನ್ನು ಸಿಡಿಸುವುದರಿಂದ ಭೂಮಿ ನಡುಗುತ್ತಿದೆ. ಇದರಿಂದ ಸುತ್ತಮುತ್ತಲಿನ ಮನೆಗಳ ಗೋಡೆಗಳು ಬಿರುಕು ಬಿಡುತ್ತಿವೆ. ವಾಸಿಸಲು ಹೆದರಿಕೆಯಾಗುತ್ತಿದೆ. ಅಲ್ಲದೆ ಈ ರಸ್ತೆಯಲ್ಲಿ ಅಕ್ರಮವಾಗಿ ಮರಳು, ಕಲ್ಲುಗಳನ್ನು ಹಗಲು ರಾತ್ರಿ ಈ ರಸ್ತೆಯಲ್ಲೆ ಸಾಗಿಸುವುದರಿಂದ ನಿದ್ದೆ ಬರುತ್ತಿಲ್ಲ. ರಸ್ತೆಗಳೆಲ್ಲ ಹಾಳಾಗಿವೆ ಎಂದು ದೂರಿದರು.
ಜಿಪಂ ಸದಸ್ಯೆ ಕಾವೇರಿ ಶೇಖರ್, ಕೊಪ್ಪ ಗ್ರಾಪಂ ಅಧ್ಯಕ್ಷೆ ಗಂಗಾಂಬಿಕೆ, ಚನ್ನಕಲ್ ಗ್ರಾಪಂ ಅಧ್ಯಕ್ಷ ಬಿ.ಕೆ. ಅರವಿಂದರಾಜೇ ಅರಸ್, ಉಪಾಧ್ಯಕ್ಷೆ ಲಕ್ಷ್ಮಮ್ಮ, ಸದಸ್ಯರಾದ ಖಲೀಮುನ್ನಿಸಾ, ಮೀನಾಕ್ಷಮ್ಮ, ನಾಗಮ್ಮ, ಗಣೇಶ್, ಸಿಂಡಿಕೇಟ್ ಸಹಕಾರ ಬ್ಯಾಂಕ್ ಅಧ್ಯಕ್ಷ ಕಲ್ಯಾಣಪ್ಪ, ಕೆ.ಬಿ. ಚನ್ನಯ್ಯ,ಅಕ್ಕಮ್ಮ, ತಹಸೀಲ್ದಾರ್ ಎಂ.ಕೆ. ಸವಿತಾ ಹಾಜರಿದ್ದರು.