'ಗ್ರಾಮೀಣ ಜನರು ಆರ್ಥಿಕ ಸ್ವಾವಲಂಬಿಗಳಾಗಿ'
ಕ.ಪ್ರ.ವಾರ್ತೆ , ರಾವಂದೂರು , ಸೆ. 27
ಗ್ರಾಮೀಣ ಜನರು ಆರ್ಥಿಕ ಸ್ವಾವಲಂಬನೆ ಪಡೆಯಬೇಕಿದೆ ಎಂದು ಗ್ರಾಪಂ ಮಾಜಿ ಅಧ್ಯಕ್ಷ ನಟೇಶ್ ಹೇಳಿದರು.
ಪಿರಿಯಾಪಟ್ಟಣ ತಾಲೂಕಿನ ಕಣಗಾಲು ಗ್ರಾಮದಲ್ಲಿ ಜೆಎಸ್ಎಸ್ ಜನಶಿಕ್ಷಣ ಸಂಸ್ಥೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ನಡೆದ ಹೊಲಿಗೆ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಅರ್ಹತಾ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಜನರು ಗುಡಿ ಕೈಗಾರಿಕೆಗಳ ಮೂಲಕ ಹೆಚ್ಚಿನ ಆದಾಯ ಪಡೆಯಲು ಸಾಧ್ಯವಾಗಿದ್ದು, ವ್ಯವಸಾಯದ ಜೊತೆಗೆ ಹೈನುಗಾರಿಕೆ, ವೃತ್ತಿ ಕೌಶಲ್ಯಗಳನ್ನು ಕಲಿತುಕೊಂಡು, ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದು ತಿಳಿಸಿದರು. ಜೆಎಸ್ಎಸ್ ಜನಶಿಕ್ಷಣ ಸಂಸ್ಥೆ ಕಾರ್ಯಕ್ರಮಾಧಿಕಾರಿ ಎ.ಪಿ. ರಮೇಶ್ ಮಾತನಾಡಿ, ಜನಶಿಕ್ಷಣ ಸಂಸ್ಥೆಯು ನಗರಕ್ಕೆ ಸೀಮಿತವಾಗಿರದೆ, ಸುಮಾರು 15 ವರ್ಷಗಳಿಂದ ಗ್ರಾಮೀಣ ಮಹಿಳೆ ಮತ್ತು ಪುರುಷರಿಗೆ ವೃತ್ತಿ ಕೌಶಲ್ಯಗಳನ್ನು ನೀಡುತ್ತಿದೆ. ಗ್ರಾಮೀಣ ಜನರ ಸಾಂಸಾರಿಕ ಅಭಿವೃದ್ಧಿಗೆ ಅದ್ಯತೆ ನೀಡಿದೆ ಎಂದು ಹೇಳಿದರು. ಗ್ರಾಪಂ ಸದಸ್ಯರಾದ ವಾಸು, ರಾಜಶೇಖರ್, ಶಾಂತಮ್ಮ, ಅಂಗನವಾಡಿ ಕಾರ್ಯಕರ್ತೆ ನೇತ್ರಾವತಿ, ಮಂಜುಳಾ ಅರಸ್, ಸೌಮ್ಯ ಇದ್ದರು.