ಮನಸೆಳೆದ ತಾಲೂಕು ಗ್ರಾಮೀಣ ದಸರಾ
ಕ.ಪ್ರ.ವಾರ್ತೆ , ಮೈಸೂರು , ಸೆ. 27
ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ತಾಲೂಕು ಗ್ರಾಮೀಣ ದಸರಾ ಮಹೋತ್ಸವ ಉದ್ಭೂರು ಗ್ರಾಮದಲ್ಲಿ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು.
ಗ್ರಾಮೀಣ ದಸರಾ ಉಪಸಮಿತಿಯು ಉದ್ಭೂರು ಮುಖ್ಯರಸ್ತೆಯಲ್ಲಿ ಏರ್ಪಡಿಸಿದ್ದ ಮೆರವಣಿಗೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸ ಪ್ರಸಾದ್ ಉದ್ಘಾಟಿಸಿದರು.
ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ, ಜಿಪಂ ಅಧ್ಯಕ್ಷ ಎಂ. ಮಹದೇವು, ಉಪಾಧ್ಯಕ್ಷೆ ಭ್ರಮರಾಂಭ ಮಲ್ಲಿಕಾರ್ಜುನಸ್ವಾಮಿ, ತಾಪಂ ಅಧ್ಯಕ್ಷ ವಿಜಯಲಕ್ಷ್ಮೀ ಶ್ರೀಕಂಠ, ಉಪಾಧ್ಯಕ್ಷ ಎಂ.ಎಸ್. ಮಹದೇವ್, ಸದಸ್ಯೆ ಜಯಮ್ಮ, ಎಪಿಎಂಸಿ ಅಧ್ಯಕ್ಷ ಹೊನ್ನಗಿರಿಗೌಡ, ಉಪಾಧ್ಯಕ್ಷ ರಘು ಹೊಸಹುಂಡಿ, ಸದಸ್ಯ ಹನುಮಂತ ನಾಯಕ ಮುಖ್ಯ ಅತಿಥಿಯಾಗಿದ್ದರು.
ಉಪಸಮಿತಿ ಅಧ್ಯಕ್ಷ ಸಿ.ಮಹದೇವ ಕೋಟೆಹುಂಡಿ, ಉಪಾಧ್ಯಕ್ಷ ಟಿ.ಎಸ್. ಸತ್ಯಾನಂದ ಉಪವಿಶೇಷಾಧಿಕಾರಿ ಹಾಗೂ ಜಿಪಂ ಸಿಇಒ ಪಿ.ಎ. ಗೋಪಾಲ್, ತಹಸೀಲ್ದಾರ್ ನವೀನ್ ಜೋಸೆಫ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಎನ್.ಆರ್. ವಿಜಯ್ ಇದ್ದರು.
ಜನಪದ ತಂಡಗಳು: ನಂತರ ಅಲ್ಲಿಂದ ಚಾಮುಂಡೇಶ್ವರಿ ವಿಗ್ರಹ ಹೊತ್ತು ಆನೆ ಸಾಗಿತು. ಮೆರವಣಿಗೆಯಲ್ಲಿ, ಗಣಪತಿ ವಿಶ್ವರೂಪ, ವಾಲ್ಮೀಕಿ, ರಾವಣ, ಮಹಿಷಾಸುರ ಮರ್ದಿನಿ ಹಾಗೂ ಬ್ರಹ್ಮ, ವಿಷ್ಣು, ಮಹೇಶ್ವರ ಹಾಗೂ ನಾರದ ಮುಂತಾದ ವೇಷಧಾರಿಗಳು, ನಂದಿಧ್ವಜ, ಕಂಸಾಳೆ, ವೀರಗಾಸೆ, ಗಾರಡಿ ಗೊಂಬೆ, ತಮಟೆ, ನಗಾರಿ ಮುಂತಾದ ಜಾನಪದ ತಂಡಗಳು ಸಾಗಿದವು.
ಕಿರಾಳು ಮಹೇಶ್ ತಂಡದ ವೀರಗಾಸೆ, ದೂರ ಗ್ರಾಮದ ದುರ್ಗಾಂಭ ನಾದಸ್ವರ ತಂಡದ ವಾದ್ಯಮೇಳ, ಪಟ್ಟಲದಮ್ಮ ತಮಟೆ ನಗಾರಿ ಮೇಳ, ಚಿಕ್ಕಮರಿಯಪ್ಪ ತಂಡದ ಕಂಸಾಳೆ ಹಾಗೂ ಕನಕ ಸಮರ ಕಲಾ ತಂಡದ ಸಾಹಸ ಆಟಗಳು ರಂಜಿಸಿದವು. ಕೂರ್ಗಳ್ಳಿ ಜೈಭೀಮ್ ಹಾಗೂ ಬೆಳವಾಡಿ ಆದಿದ್ರಾವಿಡ ತಂಡದವರ ನಗಾರಿ ವಾದ್ಯಗಳು ಮೊಳಗಿದವು. ಉದ್ಭೂರು, ತಳೂರು. ಟಿ.ಕಾಟೂರು ಹಾಗೂ ಡಿ. ಕಾಟೂರು ಅಂಗನವಾಡಿ ಶಿಕ್ಷಕಿಯರು ಮಹಾರಾಜ ಮಹಾರಾಣಿ, ಕಿತ್ತೂರು ಚೆನ್ನಮ್ಮ ಹಾಗೂ ಚಾಮುಂಡೇಶ್ವರಿ ವೇಷ ಧರಿಸಿ ಗಮನ ಸೆಳೆದರು. ಬ್ಯಾಂಡ್ ಸೆಟ್, ಮಂಗಳವಾದ್ಯ ಹಾಗೂ ಕಳಸ ಹೊತ್ತ ಮಹಿಳೆಯರು ಮೆರವಣಿಗೆಯಲ್ಲಿ ತೆರಳಿದರು. ಆನೆ, ಅಶ್ವದಳ ಹಾಗೂ ಎತ್ತಿನಗಾಡಿ ಸೇರಿದಂತೆ ವಿವಿಧ ಕಲಾಪ್ರಕಾರದ ಈ ಆಕರ್ಷಕ ಮೆರವಣಿಗೆಯು ಮಿನಿ ದಸರಾದಂತೆ ಮನಮೋಹಕವಾಗಿತ್ತು.
ಸುಮಾರು 1 ಕಿ.ಮೀ ದೂರದಿಂದ ಸಾಗಿಬಂದ ಈ ಮೆರವಣಿಗೆ ವೀಕ್ಷಿಸಲು ಮಾರ್ಗಮಧ್ಯೆದಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ನೆರೆದಿದ್ದರು. ಮಹಡಿಯ ಮೇಲೆ ನಿಂತು ನೋಡುವವರ ಸಂಖ್ಯೆ ಅಪಾರವಾಗಿತ್ತು. ಇಡೀ ಊರಿನ ಬೀದಿಗಳು ತಳೀರು ತೋರಣ ಹಾಗೂ ರಂಗೋಲಿಯಿಂದ ಅಲಂಕೃತಗೊಂಡು ಹಬ್ಬದ ಸಂಭ್ರಮ ಕಂಡುಬಂತು.
ಮಹಾರಾಜರ ಕಾಲದಲ್ಲಿ ದಸರಾ ನೋಡಿದ್ದೇನೆ. ನನಗೀಗ 70 ವರ್ಷ. 30 ವರ್ಷಗಳ ಕಾಲ ಅರಮನೆಯ ಪಿರಂಗಿ ಗಾಡಿ ಹೊಡೆಯುವ ಕೆಲಸ ಮಾಡಿದ್ದೇನೆ. ಆಗ ದಿನಕ್ಕೆ 12 ಅಣೆ ಕೂಲಿ ಕೊಡುತ್ತಿದ್ದರು. ಅರಮನೆ ಉಡುಪು ಧರಿಸಿ ಜಂಬೂ ಸವಾರಿಯಲ್ಲಿ ತೆರಳುತ್ತಿದ್ದೆ. ಆ ಕೆಲಸ ಬಿಟ್ಟಾಗ 800 ಇನಾಮು ಕೊಟ್ಟಿದ್ದನ್ನು ಬಿಟ್ಟರೆ ಮತ್ತೇನು ಪ್ರಯೋಜನವಾಗಿಲ್ಲ.
-ಕೋಡಿ ಲಿಂಗಯ್ಯ
ನನಗೀಗ 80 ವರ್ಷ. ಜೀವನದಲ್ಲಿ ಒಮ್ಮೆಯೂ ಮೈಸೂರು ದಸರಾ ನೋಡಿಲ್ಲ. ಇಂತಹ ಮೆರವಣಿಗೆ ನೋಡಿ ತುಂಬ ಸಂತೋಷವಾಯಿತು. ನಮ್ಮ ಊರಿನಲ್ಲಿ ಇಂತಹ ಉತ್ಸವ ಇದುವರೆ ನಡೆದಿರಲಿಲ್ಲ.
- ಸಿದ್ದಮ್ಮ