'ರಾಷ್ಟ್ರೀಯ ಏಕತೆಗೆ ಹಿಂದಿ ಸಹಕಾರಿ'
ಕ.ಪ್ರ.ವಾರ್ತೆ , ಮೈಸೂರು , ಸೆ. 27
ಭಾರತದಲ್ಲಿ ಹಿಂದಿ ಭಾಷೆಗೆ ಮಹತ್ವದ ಪಾತ್ರವಿದ್ದು, ರಾಷ್ಟ್ರೀಯ ಏಕತೆಗೆ ಹಿಂದಿ ಭಾಷೆ ಸಹಕಾರಿಯೆಂದು ಕೇಂದ್ರ ಭಾರತೀಯ ಭಾಷೆಗಳ ಸಂಸ್ಥೆಯ ಪ್ರಾಧ್ಯಾಪಕ ಪ್ರೊ.ಟೇಕ್ಚಂದ್ ಅಭಿಪ್ರಾಯಪಟ್ಟರು.
ಕೇಂದ್ರ ಕ್ಷೇತ್ರ ಪ್ರಚಾರ ನಿರ್ದೇಶನಾಲಯ ಹಾಗೂ ಎಸ್ಡಿಎಂ ಮಹಿಳಾ ಮಹಾವಿದ್ಯಾಲಯದ ಸಹಯೋಗದೊಂದಿಗೆ ಜರುಗಿದ ಹಿಂದಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ನಾನಾ ಭಾಗದ ಜನರ ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿಯೊಂದಿಗೆ ಭಾವನಾತ್ಮಕವಾಗಿ ಬೆರೆಯಲು ಹಿಂದಿ ಒಂದು ಉತ್ತಮ ಮಾಧ್ಯಮ. ಹಿಂದಿ ಭಾಷೆ ದೇಶದ ಸಂಪರ್ಕ ಭಾಷೆಯಾಗಿದ್ದರಿಂದ ಪ್ರಾಥಮಿಕ ಹಂತದಿಂದಲೇ ಮಕ್ಕಳಲ್ಲಿ ಮಾತೃ ಭಾಷೆಯೊಂದಿಗೆ ಹಿಂದಿ ಭಾಷೆ ಕಲಿಕೆಗೂ ಪ್ರೋತ್ಸಾಹಿಸಬೇಕು. ಈ ಮೂಲಕ ಹಿಂದಿ ಭಾಷೆಯನ್ನು ಎಲ್ಲರೂ ಬೆಳೆಸಬೇಕಾಗಿದೆ ಎಂದರು.
ಪ್ರಾಂಶುಪಾಲ ಪ್ರೊ.ಕೆ.ವಿ. ದಾಮೋದರಗೌಡ ಮಾತನಾಡಿ, ವಿದ್ಯಾರ್ಥಿಗಳೆಲ್ಲರೂ ಇತರೆ ವಿಷಯಗಳ ಕಲಿಕೆಯೊಂದಿಗೆ ಪ್ರಾರಂಭದಿಂದಲೇ ಹಿಂದಿ ವಿಷಯ ಹಾಗೂ ಭಾಷೆ ಕಲಿಕೆಗೆ ಒತ್ತು ನೀಡಬೇಕು. ಈ ಮೂಲಕ ತಮ್ಮ ಮುಂದಿನ ವೃತ್ತಿ ಜೀವನದಲ್ಲಿ ದೇಶದ ಯಾವುದೇ ಭಾಗದಲ್ಲಿ ಸೇವೆ ಸಲ್ಲಿಸಲು ಅನುಕೂಲವಾಗಲಿದೆ. ಈ ದೃಷ್ಟಿಯಿಂದ ಹಿಂದಿ ಭಾಷೆ ಕಲಿಯುವುದು ಅಗತ್ಯ ಎಂದು ಹೇಳಿದರು.
ಕ್ಷೇತ್ರ ಪ್ರಚಾರ ಇಲಾಖೆಯ ಸಿಬ್ಬಂದಿ ವರ್ಗ, ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥೆ ಡಾ.ಪುಷ್ಪಲತಾ ಹಾಗೂ ಇತರೆ ವಿಭಾಗದ ಪ್ರಾಧ್ಯಾಪಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ಆಯಿಷ್ನಲ್ಲಿ ಹಿಂದಿ ಸಪ್ತಾಹ ಆಚರಣೆ
ಮೈಸೂರು: ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯಿಂದ ನಡೆದ ಹಿಂದಿ ಸಪ್ತಾಹವನ್ನು ಸಂಸ್ಥೆಯ ನಿರ್ದೇಶಕಿ ಡಾ.ಎಸ್.ಆರ್. ಸಾವಿತ್ರಿ ಉದ್ಘಾಟಿಸಿದರು.ಸಪ್ತಾಹದಲ್ಲಿ ಸಂವಿಧಾನದ ಪ್ರಾವಧಾನಗಳ ಅಡಿಯಲ್ಲಿ ಕ, ಖ, ಮತ್ತು ಗ ಎಂದು ವಿಂಗಡಿಸಲಾದ ರಾಜ್ಯ ಕ್ಷೇತ್ರಗಳಿಂದ ಬಂದು ಸೇವೆ ಸಲ್ಲಿಸುತ್ತಿರುವ ನೌಕರರಿಗಾಗಿ ಸ್ಪರ್ಧೆ ಆಯೋಜಿಸಲಾಯಿತು. ಇವುಗಳಲ್ಲಿ ಎರಡು ಸ್ಪರ್ಧೆಗಳು ಪ್ರತ್ಯೇಕ ವಿದ್ಯಾರ್ಥಿಗಳಿಗಾಗಿಯೇ ಮೀಸಲಾಗಿದ್ದವು. ವರ್ಷವಿಡೀ ದಿನದಲ್ಲೊಂದು ಹಿಂದಿ ಶಬ್ದ ಬರೆಯುವುದರ ಜೊತೆಗೆ ಹಿಂದಿ ಸಪ್ತಾಹದಂದು ಆಯ್ದ ಐದು ಸ್ಧಳಗಳಲ್ಲಿ ಹಿಂದಿಯಲ್ಲಿ ಸ್ಲೋಗನ್ಗಳನ್ನು ರಚಿಸಿ ಪ್ರದರ್ಶಿಸಲಾಯಿತು.
ಸಂಸ್ಥೆಯ ಆವರಣದಲ್ಲಿ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕೇಂದ್ರೀಯ ಹಿಂದಿ ಸಂಸ್ಥಾನದ ಕ್ಷೇತ್ರೀಯ ನಿರ್ದೇಶಕ ಪ್ರೊ.ಎಂ. ಜ್ಞಾನಮ್ ಮಾತನಾಡಿ, ಸೆ.14ರ ದಿನ ಕೇವಲ ಸಾಧಾರಣರಿಗೆ ಮಾತ್ರವಲ್ಲದೆ, ಪ್ರಪಂಚದ ಇತಿಹಾಸದಲ್ಲೇ ಮಹತ್ವದ ದಿನವೆಂದು ಗುರುತಿಸಲಾಗಿದೆ. ಇದೇ ದಿನದಂದು ಆಡಳಿತ ಭಾಷೆಯಾಗಿ ಘೋಷಿಸಲಾದ ಹಿಂದಿ ಭಾಷೆಯನ್ನು ಹೆಚ್ಚು ಬಳಕೆ ಮಾಡುವುದರಿಂದ ನಾವು ಆರಿಸಿಕೊಂಡ ಯಾವುದೇ ಕ್ಷೇತ್ರದಲ್ಲಿ ಹಿರಿಮೆ ಸಾಧಿಸಬಹುದು ಎಂದು ಅಭಿಪ್ರಾಯಪಟ್ಟರು. ಸಂಸ್ಥೆಯ ನಿರ್ದೇಶಕಿ ಡಾ.ಎಸ್.ಆರ್. ಸಾವಿತ್ರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾಷೆಯಾವುದಾದರೇನು, ಅವನ್ನು ಕಲಿಯುವುದರಿಂದ ನಮಗೆ ಅನುಕೂಲವಾಗಲಿದೆ ಎಂದು ಹೇಳಿದರು.