ರೈತ ದಸರೆಗೆ 32 ಮಳಿಗೆಯಲ್ಲಿ ವಸ್ತು ಪ್ರದರ್ಶನ
ಕ.ಪ್ರ.ವಾರ್ತೆ , ಮೈಸೂರು , ಸೆ. 27
ದಸರಾ ಮಹೋತ್ಸವ ಅಂಗವಾಗಿ ಅ.8 ರಿಂದ 10 ರವರೆಗೆ ರೈತ ದಸರಾ ನಗರದ ವಿವಿಧ ಸ್ಥಳಗಳಲ್ಲಿ ನಡೆಯಲಿದೆ.
ಅ.8ರ ಬೆಳಗ್ಗೆ 9.30ಕ್ಕೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ರೈತ ದಸರಾ ಮೆರವಣಿಗೆಗೆ ಚಾಲನೆ ನೀಡಲಾಗುತ್ತದೆ. ಮೆರವಣಿಗೆಯಲ್ಲಿ ಸರ್ಕಾರದ ವಿವಿಧ ಕಾರ್ಯಕ್ರಮಗಳು, ವಿನೂತನ ತಾಂತ್ರಿಕತೆ, ಹೊಸ ಹೊಸ ಆವಿಷ್ಕಾರಗಳನ್ನು ಬಿಂಬಿಸುವ 8 ಸ್ತಬ್ಧ ಚಿತ್ರಗಳು ಸಾಗಲಿವೆ ಎಂದು ರೈತ ದಸರಾ ಉಪ ಸಮಿತಿಯ ಕಾರ್ಯಾಧ್ಯಕ್ಷ ಜಂಟಿ ಕೃಷಿ ನಿರ್ದೇಶಕ ಡಾ.ಮಹಂತೇಶ್ವಪ್ಪ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.
ಬೆಳಗ್ಗೆ 11.30ಕ್ಕೆ ವಸ್ತು ಪ್ರದರ್ಶನ ಹಾಗೂ ರೈತ ದಸರಾಗೆ ಚಾಲನೆ ನೀಡಲಾಗುತ್ತದೆ. ಮಧ್ಯಾಹ್ನ 3ಕ್ಕೆ ರೈತರೊಡನೆ ಸಂವಾದ, ಸಂಜೆ 4ಕ್ಕೆ ರೈತರಿಗೆ ರಸಪ್ರಶ್ನೆ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.
ವಸ್ತು ಪ್ರದರ್ಶನದಲ್ಲಿ 32 ಮಳಿಗೆಗಳಿದ್ದು, ಮಂಡ್ಯ ವಿಸಿ ಫಾರಂ, ನಾಗನಹಳ್ಳಿ ಕೃಷಿ ಸಂಶೋಧನಾ ಕೇಂದ್ರ, ಸುತ್ತೂರು ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರ, ಜಿಲ್ಲಾ ಜಲಾನಯನ ಇಲಾಖೆ, ರೇಷ್ಮೆ, ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಪಶುಪಾಲನಾ ಇಲಾಖೆ, ಸಾವಯವ ಗ್ರಾಮದ ಮಳಿಗೆಗಳು ಇರುತ್ತವೆ ಎಂದು ಹೇಳಿದರು.
ರೈತರಿಗೆ ಮಾಹಿತಿ: ರಾಸಾಯನಿಕ ಗೊಬ್ಬರ ಕಳಪೆಯಾಗಿರುವುದನ್ನು ಪತ್ತೆ ಮಾಡುವ ಸರಳ ವಿಧಾನವನ್ನು ರೈತರಿಗೆ ತಿಳಿಸಿಕೊಡಲಾಗುವುದು. ಅ.9ರ ಬೆಳಗ್ಗೆ 9ಕ್ಕೆ ವರುಣ ಗ್ರಾಮದಲ್ಲಿ ರೈತರಿಗೆ ಕೆಸರು ಗದ್ದೆ ಓಟದ ಸ್ಪರ್ಧೆ, ಬೆಳಗ್ಗೆ 11.30ಕ್ಕೆ ನಗರದ ಜೆ.ಕೆ. ಮೈದಾನದಲ್ಲಿ ರೈತರಿಗೆ ಗುಂಡು ಎತ್ತುವ ಸ್ಪರ್ಧೆ, ಮಧ್ಯಾಹ್ನ 12.30ಕ್ಕೆ ರೈತರಿಗೆ 50 ಕೆ.ಜಿ. ಗೊಬ್ಬರ ಮೂಟೆ ಹೊತ್ತು ಓಡುವ ಸ್ಪರ್ಧೆ, ಮಧ್ಯಾಹ್ನ 1ಕ್ಕೆ ರೈತ ಮಹಿಳೆಯರಿಗೆ ನೀರು ತುಂಬಿದ ಬಿಂದಿಗೆ ಹೊತ್ತು ಓಡುವ ಸ್ಪರ್ಧೆ ಆಯೋಜಿಸಲಾಗಿದೆ. ಅ.10ರ ಬೆಳಗ್ಗೆ 6.30 ಹಾಗೂ ಸಂಜೆ 5.30ಕ್ಕೆ ಜೆ.ಕೆ. ಮೈದಾನದಲ್ಲಿ ರಾಜ್ಯಮಟ್ಟದ ಹಾಲು ಕರೆಯುವ ಸ್ಪರ್ಧೆ ಏರ್ಪಡಿಸಲಾಗಿದೆ ಎಂದರು.
ಹಾಲು ಕರೆಯುವ ಸ್ಪರ್ಧೆ ವಿಜೇತರಿಗೆ ಕ್ರಮವಾಗಿ 50,000, 40,000, 30,000, 20,000 ಬಹುಮಾನ ನೀಡಲಾಗುತ್ತದೆ. ಚಿಕ್ಕಮಗಳೂರು, ಬೆಂಗಳೂರು, ದೊಡ್ಡಬಳ್ಳಾಪುರ, ಕೋಲಾರ, ಮೈಸೂರು ಜಿಲ್ಲೆಗಳಿಂದ 15ಕ್ಕೂ ಹೆಚ್ಚು ಗೋಪಾಲಕರು ಭಾಗವಹಿಸುವರು ಎಂದರು.
ವಿವಿಧ ಇಲಾಖೆಗಳ ಮೂಲಕ ಸಾಧನೆ ಮಾಡಿರುವ ರೈತರು, ರೈತ ವಿಜ್ಞಾನಿಗಳನ್ನು ಸನ್ಮಾನಿಸಲಾಗುವುದು ಎಂದು ಅವರು ತಿಳಿಸಿದರು. ರೈತ ದಸರಾ ಯಶಸ್ಸಿಗೆ ಪ್ರತಿಯೊಬ್ಬರೂ ಸಹಕರಿಸುವಂತೆ ಉಪ ಸಮಿತಿಯ ಅಧ್ಯಕ್ಷ ಎಂ.ಎಸ್. ಚಿದಂಬರ, ಉಪಾಧ್ಯಕ್ಷ ಕೆ.ಎನ್. ಅನಿಲ್ಕುಮಾರ್ ಮನವಿ ಮಾಡಿದರು.
ಸಮಿತಿಯ ಸದಸ್ಯ ಕಾರ್ಯದರ್ಶಿಯಾದ ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಡಾ. ದೇವದಾಸ್, ಸಮಿತಿಯ ಸದಸ್ಯರಾದ ಎಚ್.ಆರ್. ವೇಣುಗೋಪಾಲ್, ಎಂ.ಜಿ. ಪ್ರಕಾಶ್, ತೇಜಸ್ವಿಗೌಡ, ಬೀರೇಗೌಡ, ದೊಡ್ಡರಾಮೇಗೌಡ, ರುದ್ರಪ್ಪ, ಟಿ.ಎಸ್. ಸತ್ಯಾನಂದ, ಪಿ.ಜಯರಾಮ್, ಡಿ.ಎಲ್. ಜಗದೀಶ್, ವಾರ್ತಾ ಇಲಾಖೆ ಉಪನಿರ್ದೇಶಕ ಎ.ಆರ್. ಪ್ರಕಾಶ್, ಕೃಷಿ ಇಲಾಖೆ ಉಪ ನಿರ್ದೇಶಕ ಶಿವಕುಮಾರ್ ಇದ್ದರು.
ದಸರೆ ಯುವ ಸಂಭ್ರಮ
ಮೈಸೂರು: ದಸರಾ ಮಹೋತ್ಸವ ಅಂಗವಾಗಿ ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಸೆ.28 ರಿಂದ ಅ.3 ರವರೆಗೆ ಯುವ ಸಂಭ್ರಮ ನಡೆಯಲಿದೆ.
ಸೆ.28ರ ಸಂಜೆ 6ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್ ಯುವ ಸಂಭ್ರಮ ಉದ್ಘಾಟಿಸಲಿದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಂಸದೆ ರಮ್ಯಾ ಚಾಲನೆ ನೀಡುವರು. ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಮೇಯರ್ ಎನ್.ಎಂ. ರಾಜೇಶ್ವರಿ, ಜಿಪಂ ಅಧ್ಯಕ್ಷ ಕೂರ್ಗಳ್ಳಿ ಎಂ. ಮಹದೇವು, ಸಂಸದರಾದ ಎಚ್. ವಿಶ್ವನಾಥ್, ಆರ್. ಧ್ರುವನಾರಾಯಣ ಸೇರಿದಂತೆ ಅನೇಕ ಗಣ್ಯರು ಭಾಗವಹಿಸುವರು ಎಂದು ಉಪಸಮಿತಿ ಅಧ್ಯಕ್ಷ ಎಸ್.ಎಸ್. ನಿರಂಜನ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರತಿದಿನ ಸಂಜೆ 6 ರಿಂದ ರಾತ್ರಿ 10 ರವರೆಗೆ ರಾಜ್ಯದ ವಿವಿಧ ಕಾಲೇಜು ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡುವರು. ಒಟ್ಟು ಆರು ದಿನಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ 134 ಕಾಲೇಜುಗಳ ತಂಡವು ಸ್ವಾಗತ ನೃತ್ಯ, ಭಾರತೀಯ ಚಲನಚಿತ್ರೋದ್ಯಮಕ್ಕೆ 100 ವರ್ಷ, ದಶಾವತಾರ, ಪಾಶ್ಚಾತ್ಯ ನೃತ್ಯ, ಭಾರತೀಯ ಹಬ್ಬಗಳು, ಕೃಷ್ಣಾವತಾರ, ಜಾನಪದ ಕೋಲಾಟ, ನವರಾತ್ರಿ ವೈಭವ, ಕಂಸಾಳೆ ನೃತ್ಯ, ಪ್ರೀತಿ ಮತ್ತು ಶಾಂತಿ, ಪರಿಸರವೇ ಪರಮೋಚ್ಛ, ಸಮೂಹ ನೃತ್ಯ, ನವರಸ, ಪಟದ ಕುಣಿತ, ಮಹಿಳಾ ಸಬಲೀಕರಣ, ಶಿವತಾಂಡವ, ಕಂಸಾಳೆ, ಫ್ಯೂಷನ್ ಡ್ಯಾನ್ಸ್ ಇತ್ಯಾದಿ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸುವರು. ಮೈಸೂರು ವಿವಿಯಲ್ಲಿ ಕಲಿಯುತ್ತಿರುವ ವಿದೇಶಿ ವಿದ್ಯಾರ್ಥಿಗಳು ಕೂಡ ಕಾರ್ಯಕ್ರಮ ನೀಡವರು ಎಂದರು.
ಬಿಗಿ ಭದ್ರತೆ: ಹಿಂದಿನ ವರ್ಷಗಳಲ್ಲಿ ಕೆಲವೊಂದು ಅಹಿತಕರ ಘಟನೆಗಳು ನಡೆದಿರುವುದರಿಂದ ಈ ಬಾರಿ ಅದಕ್ಕೆ ಆಸ್ಪದ ಮಾಡಿಕೊಡುವುದಿಲ್ಲ ಎಂದರು.
ಉಪಸಮಿತಿಯ ಕಾರ್ಯಾಧ್ಯಕ್ಷ ಜಿಲ್ಲಾ ಯುವಜನ ಸಮನ್ವಯಾಧಿಕಾರಿ ಎಂ.ಎನ್. ನಟರಾಜ್, ಸದಸ್ಯ ಕಾರ್ಯದರ್ಶಿಯಾದ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಡಿ.ಬಿ. ಲಿಂಗಣ್ಣಯ್ಯ, ಉಪಾಧ್ಯಕ್ಷ ಎಂ.ರಾಮಕೃಷ್ಣ, ಪ್ರೊ..ಟಿ.ಎನ್. ಪ್ರಭಾಕರ್, ಪ್ರೊ.ಮನೋನ್ಮಣಿ, ಪ್ರೊ.ನೇತ್ರಾವತಿ ಇದ್ದರು.