ಇಲ್ಲಿ ಕೋಳಿಯೇ ಕೂಗಲ್ಲ!
ಕ.ಪ್ರ.ವಾರ್ತೆ , ಸಾಲಿಗ್ರಾಮ್ಣ ಸೆ. 29
ಹಸು, ಎಮ್ಮೆ, ಮೇಕೆ, ಕುರಿ, ಕೋಳಿಯನ್ನು ಸರ್ವೆ ಸಾಮಾನ್ಯವಾಗಿ ಎಲ್ಲ ಗ್ರಾಮಗಳಲ್ಲಿ ಇರುವುದು ಮತ್ತು ಇವುಗಳನ್ನು ಸಾಕುತ್ತಾರೆ.
ಆದರೆ ಇದಕ್ಕೆ ತದ್ವಿರುದ್ಧವಾಗಿರುವ ಗ್ರಾಮ ಕೆ.ಆರ್. ನಗರ ತಾಲೂಕಿನ ಭೇರ್ಯ- ಸಾಲಿಗ್ರಾಮ ಮುಖ್ಯ ರಸ್ತೆಯ ಬಾಚಹಳ್ಳಿ ಗ್ರಾಮದಿಂದ 2 ಕಿ.ಮೀ. ಅಂತರದಲ್ಲಿರುವ ಸಂಕನಹಳ್ಳಿ. ಅಲ್ಲಿ ಕೋಳಿಯ ಕೂಗು ಕೇಳುವುದೆ ಬಲು ಅಪರೂಪವಾಗಿದೆ.
ಪ್ರತಿದಿನ ಊರುಗಳಲ್ಲಿ ಬೆಳಗಿನ ಹೊತ್ತು ಕೋಳಿಯ ಕೂಗು ಕೇಳಿಸುತ್ತದೆ. ಆದರೆ ಈ ಗ್ರಾಮವು ಕೋಳಿಯೇ ಇಲ್ಲದ ಗ್ರಾಮವಾಗಿದ್ದು, ಕೋಳಿಯ ಕೂಗು ಮಾಯವಾಗಿದೆ. ಗ್ರಾಮದಲ್ಲಿ ಸುಮಾರು 365ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದು, ಇವರಲ್ಲಿ ಬಣಜಿಗಶೆಟ್ಟರು, ಲಿಂಗಾಯಿತರು ಹಾಗೂ ಅರ್ಚಕರು ಮಾತ್ರ ಇದ್ದಾರೆ. ಗ್ರಾಮದಲ್ಲಿ ಹಸು, ಎಮ್ಮೆ, ಕುರಿಗಳನ್ನ ಮಾತ್ರ ಸಾಕುತ್ತಿರುವುದು ವಿಶೇಷ ಒಂದು ಕಡೆಯಾದರೆ, ಇಡೀ ಗ್ರಾಮದ ಜನತೆಯೇ ಸಸ್ಯಹಾರಿಗಳೆಂಬುದು ಮತ್ತೊಂದು ವಿಶೇಷವಾಗಿದೆ. ಗ್ರಾಮದಲ್ಲಿ ಪರಶಿವನಿಂದ ಅನುಗ್ರಹ ಪಡೆದು ನಂದಿಯೂ ಈ ಗ್ರಾಮದಲ್ಲಿ ಬಸವೇಶ್ವರ ದೇವಾಲಯವಾಗಿ ನೆಲೆಸಿದ್ದು, ದಿನನಿತ್ಯ ಪೂಜಾ ಕೈಂಕರ್ಯಗಳು ನಡೆಯುತ್ತಿವೆ.
ಗ್ರಾಮಕ್ಕೆ ಹಿಂದೊಂದು ದಿನ ಗೊಂಬೆ ನಾಟಕವಾಡಿಸಲು ಬಂದಂತಹ ಕಲಾವಿದರು ಮಾಂಸಹಾರಿಗಳಾಗಿದ್ದು, ಊರಿನಿಂದ ಹೊರಗೆ ಅಡುಗೆ ಮಾಡಿಕೊಂಡು ಊಟ ಮಾಡಿ ನಂತರ ಗ್ರಾಮಕ್ಕೆ ಪ್ರವೇಶ ಮಾಡುತ್ತಿದ್ದರು. ಇಂತಹ ವೇಳೆಯಲ್ಲಿ ಗ್ರಾಮದ ಜನಕ್ಕೆ ತಿಳಿಯದ ರೀತಿಯಲ್ಲಿ ಒಂದು ಸಲ ಗೊಂಬೆಯವರು ಕದ್ದು ಗ್ರಾಮದೊಳಗೆ ಮಾಂಸದೂಟದಡಿಗೆ ಮಾಡಿ ಊಟ ಮಾಡಿದ್ದರು. ಆ ರಾತ್ರಿ ಕಳೆದು ಬೆಳಗಿನ ಹೊತ್ತಿಗೆ ಗೊಂಬೆಯವನ ಮೂರು ಕುದುರೆಗಳು ಮೃತಪಟ್ಟಿದ್ದವು ಎಂದು ಗ್ರಾಮದ ಹಿರಿಯರು ಹೇಳುತ್ತಾರೆ.
ಈ ಗ್ರಾಮದ ಒಳಿತಿಗಾಗಿ ಪ್ರತಿ ವರ್ಷವು ಬಂಡಿ ಹಬ್ಬವನ್ನು ಆಚರಿಸುತ್ತಾರೆ. ಜೊತೆಗೆ ಪಕ್ಕದ ಗ್ರಾಮವಾದ ಮೇಲೂರಿನಿಂದ ಶಂಭುಲಿಂಗೇಶ್ವರ ದೇವರನ್ನು ತಂದು ಊರಿನ ಮಧ್ಯಭಾಗದಲ್ಲಿರುವ ಕುರ್ಜಿನಲ್ಲಿ ಪ್ರತಿಷ್ಠಾಪಿಸಿ ಭಕ್ತಿಭಾವಗಳಿಂದ ಪೂಜಿಸುತ್ತಾರೆ. ಈ ಗ್ರಾಮದ ಜನತೆಯ ಮುಖ್ಯಕಸಬು ವ್ಯವಸಾಯವಾಗಿದ್ದು ತರಕಾರಿ, ಬತ್ತ, ರಾಗಿ, ಹೊಗೆಸೊಪ್ಪು ಬೆಳೆಯುತ್ತಾರೆ. ಗ್ರಾಮದಲ್ಲಿ ನೀರು ಬಳಕೆದಾರರ ಸಹಕಾರ ಸಂಘ ಹಾಗೂ 5 ಮಹಿಳಾ ಸ್ವ-ಸಹಾಯ ಸಂಘಗಳು ಇವೆ. ಆದರೆ ದಿನ ನಿತ್ಯ ಮದ್ಯಪಾನಗಳನ್ನು ಮಾರಾಟ ಮಾಡುವುದು ಹಾಗೂ ಕುಡಿದು ಗಲಾಟೆ ಮಾಡುವುದು ಸರ್ವೆ ಸಾಮಾನ್ಯವಾಗಿದ್ದು, ಈ ಗ್ರಾಮವು ಎಣ್ಣೆ ಮಾರಾಟ ಮಾಡದೆ ತನ್ನದೆಯಾದ ಹೆಸರನ್ನು ಹೊಂದಿದೆ. ಎಣ್ಣೆ ಮಾರುವುದನ್ನು ನಿಲ್ಲಿಸಿ ಎಂದು ಹೋರಾಟ ಮಾಡುವುದನ್ನು ಕಾಣುವ ಈ ಕಾಲದಲ್ಲಿ ಇಂತಹ ಆದರ್ಶ ಗ್ರಾಮ ಮಾದರಿಯಾಗಿದೆ. ಮದ್ಯಪಾನವು ಗ್ರಾಮದಲ್ಲಿ ಸಂಪೂರ್ಣವಾಗಿ ನಿಷೇಧವಾಗಿದೆ.
-ಕೆ.ಟಿ. ಮೋಹನ್‌ಕುಮಾರ್