ಗುಂಡಿ ಮುಚ್ಚುವುದರಿಂದಲೂ ಅನಾಹುತ ಸಾಧ್ಯತೆ
ಮೈಸೂರು: ನಗರದ ಬಹುತೇಕ ರಸ್ತೆಗಳು ಗುಂಡಿಗಳಿಂದಲೇ ಅಧ್ವಾನವಾಗಿ ಹೋಗಿದೆ. ದಸರಾ ಹಿನ್ನೆಲೆಯಲ್ಲಿ ಈ ಗುಂಡಿಗಳನ್ನು ಮುಚ್ಚಲು ಸರ್ಕಾರ ಸೂಚನೆ ನೀಡಿದೆಯಾದರೂ ಇಂತಹ ಗುಂಡಿ ಮುಚ್ಚುವುದರಿಂದಲೂ ಮತ್ತೊಂದು ಅನಾಹುತ ಸಂಭವಿಸುವ ಸಾಧ್ಯತೆ ಇದೆ ಎಂದು ರಾಜ್ಯ ಲೆಕ್ಕ ಪತ್ರ ಇಲಾಖೆಯ ಎಸ್.ಆರ್. ಭಾನುಮತಿ ಅಭಿಪ್ರಾಯಪಟ್ಟಿದ್ದಾರೆ. ಕಚೇರಿಗೆ ಹೋಗಿ ಬರುವ ಅಧಿಕಾರಿಗಳು ಹಾಗೂ ಸಿಬ್ಬಂದಿ ಅವಸರದಿಂದಲೇ ಗಾಡಿ ಓಡಿಸುತ್ತಾರೆ. ಅದರಲ್ಲೂ ಮಹಿಳೆಯರು ಮನೆಗೆಲಸ ಮುಗಿಸಿ ಕಚೇರಿಗೆ ಧಾವಿಸಬೇಕೆಂಬ ಉದ್ದೇಶದಿಂದಲೇ ಹೋಗುತ್ತಿರುತ್ತಾರೆ. ಇಂತಹ ಸಂದರ್ಭದಲ್ಲಿ ಗುಂಡಿ ಮುಚ್ಚಿದ ದಿಬ್ಬದ ಮೇಲೆ ಬೈಕ್ ಅನ್ನು ಬಿಟ್ಟಾಗ ಬೀಳುವ ಸಾಧ್ಯತೆ ಇರುತ್ತದೆ. ಕೇವಲ ದಸರಾ ಸಂದರ್ಭದಲ್ಲಿ ತೇಪೆ ಹಾಕುವ ಕೆಲಸದ ಬದಲು ಶಾಶ್ವತ ಪರಿಹಾರ ಒದಗಿಸುವ ಕಡೆ ಜಿಲ್ಲಾಡಳಿತ ಗಮನ ಹರಿಸಬೇಕಿದೆ ಎಂದು ಅವರು ಮನವಿ ಮಾಡಿದ್ದಾರೆ.
ಇಂದು ಕೆಲವೆಡೆ ವಿದ್ಯುತ್ ವ್ಯತ್ಯಯ
ಮೈಸೂರು: ನಗರದ 66/11ಕೆವಿ ಎಫ್ಟಿಎಸ್ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳುವುದುರಿಂದ ಸೆ.30ರ ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ನಗರದ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಕೋರಿದ್ದಾರೆ.
ಪ್ರದೇಶಗಳು: ತಿಲಕ್ನಗರ, ಕೈಲಾಸ್ಪುರಂ, ಅಶೋಕ ರಸ್ತೆ, ಪುಲಿಕೇಶಿ ರಸ್ತೆ, ಸಾಡೇ ರಸ್ತೆ, ದಿವಾನ್ಸ್ ರಸ್ತೆ, ಆರ್ಎಂಸಿ ವೃತ್ತ, ಚೆಲುವಾಂಬ ಆಸ್ಪತ್ರೆ, ಕೆ.ಆರ್. ಆಸ್ಪತ್ರೆ, ಧನ್ವಂತ್ರಿ ರಸ್ತೆ, ಮಂಡಿ ಮೊಹಲ್ಲಾ, ಮೇದರ ಬ್ಲಾಕ್, ವೀರನಗೆರೆ, ವಿನೋಬಾ ರಸ್ತೆ, ಕಬೀರ ರಸ್ತೆ, ಅಕ್ಬರ್ ರಸ್ತೆ, ಇರ್ವಿನ್ ರಸ್ತೆ, ಆರ್ಎಂಸಿ ಯಾರ್ಡ್ ಮತ್ತು ಜೆಎಲ್ಬಿ ರಸ್ತೆ, ಮೆಟ್ರೋಪೋಲ್ ವೃತ್ತ, ಕೆಸರೆ, ಎನ್.ಆರ್. ಮೊಹಲ್ಲಾ, ಬನ್ನಿಮಂಟಪ, ಗಾಂಧೀನಗರ, ಉದಯಗಿರಿ, ಸುಭಾಷ್ನಗರ, ಎ.ಜೆ. ಬ್ಲಾಕ್, ಕುರಿಮಂಡಿ, ಆರ್.ಎಸ್. ನಾಯ್ಡುನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
ಉಚಿತ ತಪಾಸಣೆ
ಮೈಸೂರು: ನಗರದ ಸಯ್ಯಾಜಿರಾವ್ ರಸ್ತೆಯಲ್ಲಿರುವ ಪ್ರೇರಣಾ ಮಹಿಳಾ ಜನನಾಂಗ ಆರೋಗ್ಯ ಚಿಕಿತ್ಸಾಲಯವು ಗರ್ಭಕೋಶದ ಬಾಯಿಯ ಕ್ಯಾನ್ಸರ್ ಉಚಿತ ತಪಾಸಣೆ ಶಿಬಿರವನ್ನು ಅ.1ರ ಬೆಳಗ್ಗೆ 10 ರಿಂದ ಸಂಜೆ 4 ರವರೆಗೆ ಆಯೋಜಿಸಿದೆ. ಆಸಕ್ತರು ಮೊ. 99862 85724 ಸಂಪರ್ಕಿಸಬಹುದು.
ಯೋಗ ಶಿಬಿರ
ಮೈಸೂರು: ರಾಘವೇಂದ್ರ ಯೋಗ ಕೇಂದ್ರವು ಅ.1 ರಿಂದ ನಗರದ ವಿವಿಧೆಡೆ ಒಂದು ತಿಂಗಳ ಯೋಗ ಶಿಬಿರವನ್ನು ಆಯೋಜಿಸಿದೆ. ಆಸಕ್ತರು ಮೊ. 98805 46675 ಸಂಪರ್ಕಿಸಬಹುದು.
ಪೋಷಕರ ಸಭೆ
ಮೈಸೂರು: ಕುವೆಂಪುನಗರದ ಸರ್ಕಾರಿ ಪಿಯು ಕಾಲೇಜಿನಲ್ಲಿ ಸೆ.30ರ ಬೆಳಗ್ಗೆ 9.30ಕ್ಕೆ ವಿದ್ಯಾರ್ಥಿಗಳ ಪೋಷಕರ ಸಭೆ ಕರೆಯಲಾಗಿದೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.
ಇಂದು ಪ್ರತಿಭಟನೆ
ಮೈಸೂರು: ರಾಜ್ಯದ ಎಲ್ಲಾ ಉದ್ಯೋಗಾಕಾಂಕ್ಷಿ ನಿರುದ್ಯೋಗಿ ಯುವಕರು ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡುವಂತೆ ಆಗ್ರಹಿಸಿ ಸೆ.30ರ ಬೆಳಗ್ಗೆ 10ಕ್ಕೆ ಬೆಂಗಳೂರಿನ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಲಿದ್ದಾರೆ.
ನಾಳೆ ಬೀಳ್ಕೊಡುಗೆ ಸಮಾರಂಭ
ಕೆ.ಆರ್.ನಗರ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅ.1 ರಂದು ಗುರುವಂದನೆ ಮತ್ತು ಬೀಳ್ಕೊಡುಗೆ ಸಮಾರಂಭ ಏರ್ಪಡಿಸಿದ್ದು, ಅಂದು ಬೆಳಗ್ಗೆ 11ಕ್ಕೆ ಪ್ರಾಂಶುಪಾಲ ಡಾ.ಕೊಂಡರಸಯ್ಯ ಅಧ್ಯಕ್ಷತೆ ವಹಿಸುವರು. ಬೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಅಪ್ಪಾಜಿಗೌಡ ಉದ್ಘಾಟಿಸಲಿದ್ದು, ಅತಿಥಿಗಳಾಗಿ ಡಾ.ಲವಲಿದೇವಿ, ಪ್ರೊ.ದಿನೇಶ್ ಉಡುಪಿ, ಪ್ರೊ.ಲತಾರಾಣಿ ಭಾಗವಹಿಸುವರು.
ರಮೇಶ್ ಆಯ್ಕೆ
ಕೆ.ಆರ್. ನಗರ: ತಾಲೂಕಿನ ಹೊಸಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಮೂಡಲಕೊಪ್ಪಲು ರಮೇಶ್ ಅವಿರೋಧವಾಗಿ ಅಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ರಮೇಶ್ ಅವರೊಬ್ಬರೆ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾ ಅಧಿಕಾರಿಯಾಗಿದ್ದ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿರೀಶ್ ಅವಿರೋಧ ಅಯ್ಕೆಯನ್ನು ಪ್ರಕಟಿಸಿದರು. ಇದೇ ವೇಳೆ ಮಾಜಿ ಅಧ್ಯಕ್ಷ ಎಲ್.ಪಿ. ರವಿಕುಮಾರ್, ಲೋಕೇಶ್, ಹೇಮಲತಾ, ಮಹದೇವ, ಮಹೇಶ್, ಶಿವಣ್ಣನಾಯಕ, ಜಿಲ್ಲಾ ಬ್ಯಾಂಕಿನ ಪ್ರತಿನಿಧಿ ಎಚ್.ಆರ್. ಮಂಜುನಾಥ್, ಮೇಲ್ವಿಚಾರಕ ಶಿವಲಿಂಗೇಗೌಡ ಇದ್ದರು.
ವಾಹನ ಡಿಕ್ಕಿ; ವಿದ್ಯಾರ್ಥಿನಿಗೆ ಗಾಯ
ಹುಣಸೂರು: ಶಾಲೆಗೆ ತೆರಳುತ್ತಿದ್ದ ಬಾಲಕಿಗೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿನಿಯ ಕಾಲು ಮುರಿದಿರುವ ಘಟನೆ ತಾಲೂಕಿನ ಕಡೇಮನುಗನಹಳ್ಳಿ ಸಮೀಪ ಜರುಗಿದೆ.ತಾಲೂಕಿನ ಹನಗೋಡು ಹೋಬಳಿಯ ಹೆಬ್ಬಾಳ ಗ್ರಾಮದ ನಿವಾಸಿ ಮಹದೇವನಾಯ್ಕರ ಪುತ್ರಿ ಮಣಿ(14) ಎಂಬಾಕೆಯೆ ಗಾಯಗೊಂಡಿರುವ ಬಾಲಕಿ. ಎಂದಿನಂತೆ ಗ್ರಾಮದ ಸಮೀಪದ ಕಡೇಮನುಗನಹಳ್ಳಿ ಗ್ರಾಮದ ಪ್ರೌಢಶಾಲೆಗೆ ಬೆಳಗ್ಗೆ ತೆರಳುತ್ತಿದ್ದ ವೇಳೆ ಹಿಂಬದಿಯಿಂದ ಬಂದ ದ್ವಿಚಕ್ರ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿದ್ದಾರೆ. ಹನಗೋಡು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
5 ರಿಂದ ಯೋಗ ನಮನ
ಮೈಸೂರು: ಯೋಗ ದಸರಾ ಉಪಸಮಿತಿಯು ಅ.5 ರಿಂದ 12 ರವರೆಗೆ ಬಿಗ್ ಬಜಾರ್ ಹಿಂಭಾಗದಲ್ಲಿರುವ ಭರತಾಂಜಲಿ ನಾಟ್ಯ ಮತ್ತು ಯೋಗ ಕೇಂದ್ರದಲ್ಲಿ ಯೋಗ ನಮನ ಅಭಿನಂದನಾ ಕಾರ್ಯಕ್ರಮ ಆಯೋಜಿಸಿದೆ. ಅ.5ರ ಸಂಜೆ 6.30ಕ್ಕೆ ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಬಿ.ಆರ್. ನಟರಾಜ್ ಜೋಯಿಸ್ ಕಾರ್ಯಕ್ರಮ ಉದ್ಘಾಟಿಸುವರು. ಪತಂಜಲಿ ವಿನ್ಯಾಸ ಅಷ್ಟಾಂಗ ಯೋಗ ಶಾಲೆಯ ವಿ.ಶೇಷಾದ್ರಿ ಅವರನ್ನು ಸನ್ಮಾನಿಸಲಾಗುವುದು ಎಂದು ಸಂಯೋಜಕ ಯೋಗ ಪ್ರಕಾಶ ತಿಳಿಸಿದ್ದಾರೆ. ಅ.6 ರಂದು ಭರತ್ ಶೆಟ್ಟಿ, ಅ.7 ರಂದು ಪಿ.ಆರ್. ವಿಶ್ವನಾಥ ಶೆಟ್ಟಿ, ಅ.8 ರಂದು ಡಾ.ಜಮುನಾ ರಾಣಿ ವಿ ಮಿರ್ಲೆ, ಅ.9 ರಂದು ವಿನಯಕುಮಾರ್, ಅ.10 ರಂದು ಡಾ.ಎ.ಆರ್. ಸೀತಾರಾಂ, ಅ.11 ರಂದು ರಾಘವೇಂದ್ರ ರಾವ್ ಹಾಗೂ ಅ.12 ರಂದು ಸ್ವಾಮಿಣಿ ವರದಾನಂದ ಸರಸ್ವತಿ ಅವರನ್ನು ಅಭಿನಂದಿಸಲಾಗುವುದು ಎಂದು ತಿಳಿಸಿದ್ದಾರೆ.
ದಸರಾ ಸ್ತಬ್ಧಚಿತ್ರ ಉಸಮಿತಿ ಸಭೆ
ಮೈಸೂರು: ದಸರಾ ಅಂಗವಾಗಿ ಸ್ತಬ್ಧಚಿತ್ರ ಉಪಸಮಿತಿಯು ಮೆರವಣಿಗೆಯಲ್ಲಿ ಭಾಗವಹಿಸುವ ಸ್ತಬ್ಧಚಿತ್ರಗಳನ್ನು ಪರಿಶೀಲನಾ ಸಭೆಯನ್ನು ಇತ್ತೀಚೆಗೆ ನಡೆಸಿತು.ಈ ಸಭೆಯಲ್ಲಿ 30 ಜಿಲ್ಲೆಗಳಿಂದ ಹಾಗೂ ಇತರೆ ಇಲಾಖೆ, ನಿಗಮಗಳಿಂದ ಬಂದಿರುವ 12 ವಿನ್ಯಾಸಗಳು ಸೇರಿ ಒಟ್ಟಾರೆ 42 ವಿನ್ಯಾಸಗಳನ್ನು ಪರಿಶೀಲಿಸಿ ಅಂಗೀಕರಿಸಲಾಯಿತು. ಎಲ್ಲ ಸ್ತಬ್ಧಚಿತ್ರಗಳನ್ನು ಆಕರ್ಷಣೀಯವಾಗಿ ನಿರ್ಮಿಸಲು ಸಂಬಂಧಪಟ್ಟ ನೋಡಲ್ ಅಧಿಕಾರಿಗಳಿಗೆ ಸೂಚನೆ ನೀಡುವಂತೆ ತೀರ್ಮಾನಿಸಲಾಯಿತು. ಸಮಿತಿಯ ಅಧ್ಯಕ್ಷ ಶಿವಮಲ್ಲು, ಉಪಾಧ್ಯಕ್ಷ ಜಿ.ಎನ್. ಮಂಜುನಾಥ್, ಕಾರ್ಯಾಧ್ಯಕ್ಷ ಎನ್.ಡಿ. ಪ್ರಕಾಶ್, ಕಾರ್ಯದರ್ಶಿ ಎಂ.ಎನ್. ಮುರುಳೇಶ್, ಸಿ.ಆರ್. ಶ್ರೀನಿವಾಸ ಭಾಗವಹಿಸಿದ್ದರು.
ಸ್ಥಳಾವಕಾಶ- ಮೇಲ್ವಿಚಾರಣೆ: ಕೃಷಿ ಮಾರುಕಟ್ಟೆ ಆವರಣದಲ್ಲಿ ಸ್ತಬ್ಧಚಿತ್ರ ನಿರ್ಮಾಣ ಕಾರ್ಯವು ಸುಗಮವಾಗಿ ನಡೆಯಲು ವಿವಿಧ ಜಿಲ್ಲೆಗಳಿಂದ ಹಾಗೂ ಇತರೆ ಇಲಾಖೆ, ನಿಗಮಗಳಿಂದ ಬರುವ ವಾಹನಗಳನ್ನು ನಿಗದಿತ ಸ್ಥಳಗಳಲ್ಲಿ ನಿಲುಗಡೆ ಮಾಡಲು ಹಾಗೂ ವಾಹನ ಚಾಲನೆಗೆ ಯಾವುದೇ ರೀತಿಯ ಅಡಚಣೆಯಾಗದಂತೆ ಮೇಲ್ವಿಚಾರಣೆ ಮಾಡಲು ಅಧಿಕಾರಿಯನ್ನು ನೇಮಿಸುವಂತೆ ಎಪಿಎಂಸಿ ಕಾರ್ಯದರ್ಶಿಗೆ ಸ್ತಬ್ಧಚಿತ್ರ ಉಪಸಮಿತಿ ಕಾರ್ಯಾಧ್ಯಕ್ಷ ಎನ್.ಡಿ. ಪ್ರಕಾಶ್ ಪತ್ರ ಬರೆದಿದ್ದಾರೆ.
ಇಂದು ಮಂಡ್ಯಕ್ಕೆ ಕಾರ್ಯಕರ್ತರು
ಮೈಸೂರು: ಕೆಪಿಸಿಸಿ ವತಿಯಿಂದ ಸೆ.30 ರಂದು ಮಂಡ್ಯದಲ್ಲಿ ನಡೆಯುವ ಬೃಹತ್ ಸಮಾವೇಶಕ್ಕೆ ಮೈಸೂರಿನಿಂದ ನಗರ ಕಾಂಗ್ರೆಸ್ ಸೇವಾದಳದ ಕಾರ್ಯಕರ್ತರು ಕೆ.ಎಸ್. ಕೃಷ್ಣಮೂರ್ತಿ ಅವರ ಮುಖಂಡತ್ವದಲ್ಲಿ ಭಾಗವಹಿಸುವರು ಎಂದು ಸಂಘಟನಾ ಕಾರ್ಯದರ್ಶಿ ರವೀಂದ್ರ ತಿಳಿಸಿದ್ದಾರೆ.
ಇಂದು ಮೈಸೂರಿಗೆ ಸೋನಿಯಾ, ಸಿಎಂ
ಮೈಸೂರು: ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸೆ.30 ರಂದು ನಗರಕ್ಕೆ ಆಗಮಿಸುವರು. ಸಿದ್ದರಾಮಯ್ಯ ಅವರು ಬೆಳಗ್ಗೆ 10.45ಕ್ಕೆ ಹೆಲಿಕಾಪ್ಟರ್ ಮೂಲಕ ನಗರಕ್ಕೆ ಆಗಮಿಸುವರು. ಮಧ್ಯಾಹ್ನ 2.30ಕ್ಕೆ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಸೋನಿಯಾಗಾಂಧಿ ಅವರನ್ನು ಬರಮಾಡಿಕೊಳ್ಳುವರು. ಅಲ್ಲಿಂದ ಅವರಿಬ್ಬರೂ ಹೆಲಿಕಾಪ್ಟರ್ ಮೂಲಕ ಮಂಡ್ಯದ ತೂಬಿನಕೆರೆಗೆ ತೆರಳುವರು. ಸರ್ ಎಂ.ವಿ. ಕ್ರೀಡಾಂಗಣದಲ್ಲಿ ನಡೆಯುವ ಕಾಂಗ್ರೆಸ್ ಪಕ್ಷದ ಸಮಾವೇಶದಲ್ಲಿ ಭಾಗವಹಿಸುವರು. ಪುನಃ ತೂಬಿನಕೆರೆಯಿಂದ ಹೆಲಿಕಾಪ್ಟರ್ನಲ್ಲಿ ಅವರಿಬ್ಬರು ಸಂಜೆ 4.40ಕ್ಕೆ ಮೈಸೂರಿನ ಮಂಡಕಳ್ಳಿ ವಿಮಾನನಿಲ್ದಾಣಕ್ಕೆ ಆಗಮಿಸುವರು. ಸೋನಿಯಾಗಾಂಧಿ ಅವರು ವಿಶೇಷ ವಿಮಾನದಲ್ಲಿ ವಾಪಸಾದ ನಂತರ ಸಿದ್ದರಾಮಯ್ಯ ಅವರು ಸಂಜೆ 5.15ಕ್ಕೆ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ನಿರ್ಗಮಿಸುವರು.
ನಾಳೆ ದಸಂಸ ಪ್ರತಿಭಟನೆ
ಮೈಸೂರು: ಗಿರಿಜನರ ಮೇಲೆ ಮಾಜಿ ಶಾಸಕ ವಿ. ಪಾಪಣ್ಣ ದೌರ್ಜನ್ಯ ನಡೆಸಿ ಭೂ ಕಬಳಿಸುತ್ತಿದ್ದಾರೆ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ಅ.1ರ ಬೆಳಗ್ಗೆ 11ಕ್ಕೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ದಸಂಸ ಸಂಚಾಲಕ ರತ್ನಪುರಿ ಪುಟ್ಟಸ್ವಾಮಿ ತಿಳಿಸಿದ್ದಾರೆ.
'ಶಾಲಾ ಆವರಣ ಸ್ವಚ್ಛಗೊಳಿಸಿ'
ಮೈಸೂರು: ಜಿಲ್ಲೆಯ ಎಲ್ಲ ಪ್ರಾಥಮಿಕ ಮತ್ತು ಪ್ರೌಢಶಾಲಾ ಆವರಣವನ್ನು ಸ್ವಚ್ಛಗೊಳಿಸುವಂತೆ ಡಿಡಿಪಿಐ ಬಿ.ಕೆ. ಬಸವರಾಜು ಶಿಕ್ಷಕರಿಗೆ ಸೂಚಿಸಿದ್ದಾರೆ. ಶಾಲೆ ಛಾವಣಿಯಲ್ಲಿ ಬೆಳೆದಿರುವ ಗಿಡಗಂಟೆಗಳನ್ನು ಸ್ವಚ್ಛಗೊಳಿಸಬೇಕು. ಶಾಲಾ ಆವರಣದ ಸುತ್ತಮುತ್ತ ಬೆಳೆದಿರುವ ಗಿಡಗಂಟೆಗಳನ್ನು ಸ್ವಚ್ಛಗೊಳಿಸಬೇಕು. ಸೆ.30 ರಿಂದ ಅ.5 ರೊಳಗೆ ಸ್ವಚ್ಛತೆ ಪೂರ್ಣಗೊಳಿಸಬೇಕು ಎಂದು ತಿಳಿಸಿದ್ದಾರೆ. ಸ್ವಚ್ಛಗೊಳಿಸಿರುವ ಬಗ್ಗೆ ಅ.6 ರಂದು ಶಿಕ್ಷಣ ಸಂಯೋಜಕರಿಗೆ ಮುಖ್ಯ ಶಿಕ್ಷಕರು ಮಾಹಿತಿ ನೀಡಬೇಕು. ಸೆ.30 ರಂದು ಪ್ರಾಥಮಿಕ ಶಾಲೆ ಹಾಗೂ ಅ.5 ರಂದು ಪ್ರೌಢಶಾಲೆಗಳಲ್ಲಿ ಸಮುದಾಯ ದತ್ತ ಶಾಲೆ ಕಾರ್ಯಕ್ರಮವನ್ನು ಕ್ರಮಬದ್ಧವಾಗಿ ನಡೆಸಲು ಡಿಡಿಪಿಐ ಸೂಚಿಸಿದ್ದಾರೆ.
ಮರದ ಅಂಬಾರಿ ಹೊತ್ತ ಅಭಿಮನ್ಯು
ಮೈಸೂರು: ದಸರಾ ಗಜಪಡೆಯು ಎಂದಿನಂತೆ ಭಾನುವಾರ ಸಹ ಬೆಳಗ್ಗೆ ಮತ್ತು ಸಂಜೆ ತಾಲೀಮು ನಡೆಸಿದವು. ಸುಮಾರು 600 ಕೆ.ಜಿ. ತೂಕವುಳ್ಳ ಮರದ ಅಂಬಾರಿಯನ್ನು ಅಭಿಮನ್ಯು ಆನೆಗೆ ಭಾನುವಾರ ಹೊರಿಸಲಾಗಿತ್ತು. ಅಭಿಮನ್ಯುನನ್ನು ಅರ್ಜುನ, ಬಲರಾಮ, ಗಜೇಂದ್ರ, ವರಲಕ್ಷ್ಮಿ, ಸರಳ, ಶ್ರೀರಾಮ, ವಿಜಯ, ವಿಕ್ರಮ, ಹರ್ಷ, ಗೋಪಾಲಸ್ವಾಮಿ, ದುರ್ಗಾಪರಮೇಶ್ವರಿ, ಗೋಪಿ ಮತ್ತು ಪ್ರಶಾಂತ ಆನೆಗಳು ಹಿಂಬಾಲಿಸಿದವು. ಅರಮನೆಯಿಂದ ಹೊರಟ ಆನೆಗಳ ತಾಲೀಮು ನಡಿಗೆಯು ಕೋಟೆ ಆಂಜನೇಯಸ್ವಾಮಿ ದೇವಸ್ಥಾನ, ಚಾಮರಾಜ ವೃತ್ತ, ಕೆ.ಆರ್. ವೃತ್ತ, ಸಯ್ಯಾಜಿರಾವ್ ರಸ್ತೆ, ಹೈವೇ ವೃತ್ತಕ್ಕೆ ತಲುಪಿ ಅದೇ ಮಾರ್ಗವಾಗಿ ವಾಪಸ್ ಬಂದವು ಎಂದು ಆನೆ ವೈದ್ಯ ಡಾ. ನಾಗರಾಜ್ ತಿಳಿಸಿದ್ದಾರೆ.
ಮಿರ್ಲೆ ಹಾಲು ಉತ್ಪಾದಕರ ಸಂಘ ಲಾಭದತ್ತ: ನಾಗರತ್ನ ಜಯರಾಜು
ಕ.ಪ್ರ.ವಾರ್ತೆ , ಭೇರ್ಯ , ಸೆ. 29
ಮಿರ್ಲೆ ಹಾಲು ಉತ್ಪಾದಕರ ಸಹಕಾರ ಸಂಘ ಕಳೆದ ಸಾಲಿನಲ್ಲಿ 3.56 ಲಕ್ಷ ಲಾಭ ಗಳಿಸಿದೆ ಎಂದು ಅಧ್ಯಕ್ಷೆ ನಾಗರತ್ನ ಜಯರಾಜು ಹೇಳಿದರು. ಭಾನುವಾರ ನಡೆದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಲಾಭದಲ್ಲಿ 1.15 ಲಕ್ಷ ಅನ್ನು ಬೋನಸ್ ಆಗಿ ಹಾಲು ಉತ್ಪಾದಕರಿಗೆ ವಿತರಿಸಲಾಗುವುದು ಎಂದರು. ಮೈಮುಲ್ ನಿರ್ದೇಶಕ ಎ.ಟಿ. ಸೋಮಶೇಖರ್, ಸಂಘದ ನಿರ್ದೇಶಕರಾದ ಧ್ರುವಕುಮಾರ್, ವಸಂತಕುಮಾರ್, ಮಂಜುನಾಥ್, ರಘು, ರಾಮೇಗೌಡ, ಪ್ರಶಾಂತ್ ಕುಮಾರ್, ಅರುಣ್ಕುಮಾರ್, ತುಕರಾಂ, ಕಾರ್ಯದರ್ಶಿ ಎಂ.ವಿ. ರಾಮಚಂದ್ರ, ಹೇಮಂತ್ ಕುಮಾರ್, ಮೈಮುಲ್ ನಿರ್ದೇಶಕಿ ವಿಜಯಲಕ್ಷ್ಮೀ, ಉಪವ್ಯವಸ್ಥಾಪಕ ಸಣ್ಣತಮ್ಮೇಗೌಡ ಇದ್ದರು.
ನೀರು ಬಳಕೆದಾರರ ಸಂಘಕ್ಕೆ ಆಯ್ಕೆ
ಭೇರ್ಯ: ಸಮೀಪದ ಹೊಸ ಅಗ್ರಹಾರ ನೀರು ಬಳಕೆ ಸಹಕಾರ ಸಂಘದ ಅಧ್ಯಕ್ಷರಾಗಿ ಕಂಚಿನಕೆರೆ ಬಸವರಾಜು ಮತ್ತು ಉಪಾಧ್ಯಕ್ಷರಾಗಿ ಹೊಸಅಗ್ರಹಾರ ಪುಟ್ಟಸ್ವಾಮಿ ಅವಿರೋಧವಾಗಿ ಆಯ್ಕೆಯಾದರು. ಈ ಎರಡು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಇವರಿಬ್ಬರನ್ನು ಹೊರತುಪಡಿಸಿ ಬೇರಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಯಾಗಿದ್ದ ಸಿ.ಪ್ರಸಾದ್ ಇವರು ಅವಿರೋಧ ಆಯ್ಕೆ ಪ್ರಕಟಿಸಿದರು. ಇದೇ ವೇಳೆ ಸಂಘದ ನಿರ್ದೇಶಕರಾದ ಬೂದಿಗೌಡ, ರಾಜೇಗೌಡ, ನಂಜುಂಡಶೆಟ್ಟಿ, ಕುಮಾರ, ಅರ್ಜುನ, ಪುಟ್ಟೇಗೌಡ, ಮಂಜುನಾಥ, ಚನ್ನಮ್ಮ, ನಾಗಮ್ಮ, ಕಾರ್ಯದರ್ಶಿ ಎಚ್.ಪಿ. ಮಲ್ಲೇಶ್ ಇದ್ದರು.