ದಸರೆಗೆ ಕಲಾಕೃತಿ ಪ್ರದರ್ಶನ, ಚಿತ್ರಕಲಾ ಶಿಬಿರ
ಕ.ಪ್ರ.ವಾರ್ತೆ , ಮೈಸೂರು , ಸೆ. 29
ದಸರಾ ಲಲಿತಕಲೆ ಮತ್ತು ಕರಕುಶಲ ಉಪಸಮಿತಿ ಹಾಗೂ ದಸರಾ ವಸ್ತುಪ್ರದರ್ಶನದ ಲಲಿತಕಲೆ, ಕರಕುಶಲ ಉಪಸಮಿತಿಯು ಜಂಟಿಯಾಗಿ ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟ, ಚಿತ್ರಕಲಾ ಶಿಬಿರ, ಹಿರಿಯ ಕಲಾವಿದರಿಗೆ ಸನ್ಮಾನ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಎರಡು ಸಮಿತಿಗಳು ಸಹಯೋಗದೊಂದಿಗೆ ಕಾರ್ಯ ನಿರ್ವಹಿಸಲು ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎರಡು ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಒಗ್ಗೂಡಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದಾಗಿ ಎರಡು ಉಪಸಮಿತಿ ಅಧ್ಯಕ್ಷರಾದ ಮೆಹಬೂಬ್ ಶರೀಫ್ ಬಾಬು, ಟಿ. ಹೇಮಾವತಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯಾದ್ಯಂತ ಕಲಾವಿದರು, ಕಲಾ ವಿದ್ಯಾರ್ಥಿಗಳು ಹಾಗೂ ಹವ್ಯಾಸಿ ಕಲಾವಿದರಿಂದ ಕಲಾಕೃತಿಗಳನ್ನು ಆಹ್ವಾನಿಸಲಾಗಿದೆ. ಚಿತ್ರ, ನಿಸರ್ಗ, ಸಾಂಪ್ರದಾಯ ಶಿಲ್ಪ, ಕರಕುಶಲ ಕಲೆ, ಗ್ರಾಫಿಕ್ಸ್, ಛಾಯಾಚಿತ್ರ ಮತ್ತು ಇನ್ಲೇ ಕಲಾಕೃತಿಗಳನ್ನು ಆಹ್ವಾನಿಸಲಾಗಿದ್ದು, ಉತ್ತಮವಾದ ಕಲಾಕೃತಿಗಳಿಗೆ ಬಹುಮಾನ ನೀಡಲಾಗುತ್ತಿದೆ. ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟಕ್ಕೂ ಸಹ ಅವಕಾಶ ಕಲ್ಪಿಸಲಾಗಿದೆ ಎಂದರು.
ಸಂಪ್ರದಾಯ ಚಿತ್ರ, ಗ್ಲಾಸ್ ಪೇಂಟಿಂಗ್, ಮಾಸ್ಕ್ ಮೇಕಿಂಗ್, ಮ್ಯೂರಲ್ ಡಿಸೈನ್, ಬಾಟಿಕ್ ಕಲೆ, ಪೇಪರ್ ಕ್ರಾಫ್ಟ್, ಜೇಡಿಮಣ್ಣಿನ ಶಿಲ್ಪ ರಚನೆ ಮೊದಲಾದ ಪ್ರಾತ್ಯಕ್ಷಿಕೆ ಹಾಗೂ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಮಕಾಲಿನ ಚಿತ್ರಕಲೆ, ಶಿಲ್ಪಕಲೆ ಹಾಗೂ ಸಾಂಪ್ರದಾಯ ಶಿಲ್ಪ ಶಿಬಿರ ಆಯೋಜಿಸಲಾಗುವುದು ಎಂದು ಹೇಳಿದರು.
ದಸರಾ ವಸ್ತುಪ್ರದರ್ಶನ ಆವರಣದ ಕನ್ನಡ ಕಾರಂಜಿಯಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ಕನ್ನಡ ಕಾರಂಜಿ ಆವರಣದಲ್ಲಿ ಸ್ವಾಗತ ಕಮಾನು ಹಾಗೂ ಆಕರ್ಷಕ ಬೃಹತ್ ಶಿಲ್ಪಗಳನ್ನು ನಿರ್ಮಿಸಲಾಗುವುದು ಎಂದರು.
ಅ.5 ರಿಂದ ಚಿತ್ರಕಲಾ ಪ್ರದರ್ಶನ ಆರಂಭವಾಗಲಿದೆ. ಅ.12ರಂದು ಹಿರಿಯ ಕಲಾವಿದರ ಕಲಾಕೃತಿ ಪ್ರದರ್ಶನ, ಸನ್ಮಾನ ಸಮಾರಂಭ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅದೇ ದಿನ ಬೆಳಗ್ಗೆ 9 ರಿಂದ ಮಕ್ಕಳಲ್ಲಿ ಚಿತ್ರಕಲಾ ಅಭಿರುಚಿ ಹೆಚ್ಚಿಸಲು 3 ವಿಭಾಗಗಳಲ್ಲಿ (1 ರಿಂದ 4, 5 ರಿಂದ 7, 8 ರಿಂದ 10ನೇ ತರಗತಿ) ಸ್ಥಳದಲ್ಲೇ ಚಿತ್ರ ರಚನಾ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಮೈಸೂರಿನ ಪರಂಪರೆ ಪ್ರೋತ್ಸಾಹಿಸುವ ಉದ್ದೇಶದಿಂದ ಮನೆ ಮನೆ ಗೊಂಬೆ ಪ್ರದರ್ಶನಕ್ಕೆ ಮೈಸೂರಿನ 3 ವಿಧಾನಸಭಾ ಕ್ಷೇತ್ರಗಳಲ್ಲಿ ಉತ್ತಮ ಪ್ರದರ್ಶನಕ್ಕೆ ತಲಾ 3 ನಗದು ಬಹುಮಾನ ನೀಡಲಾಗುವುದು ಎಂದರು.
ಚಿತ್ರಸಂತೆ: ವಿಶ್ವಮಾನವ ಯುವ ವಿದ್ಯಾರ್ಥಿ ವೇದಿಕೆ ಸಹಯೋಗದಲ್ಲಿ ಅ.6ರ ಬೆಳಗ್ಗೆ 9 ರಿಂದ ರಾತ್ರಿ 9 ರವರೆಗೆ ನಂಜರಾಜ ಬಹದ್ದೂರ್ ಛತ್ರದ ಎದುರು ಚಿತ್ರಸಂತೆ ಆಯೋಜಿಸಲು ನಿರ್ಧರಿಸಲಾಗಿದೆ. ಸಮಿತಿಗಾಗಿ 15 ಲಕ್ಷ ಅನುದಾನ ಕೋರಲಾಗಿದ್ದು, 2 ಲಕ್ಷ ಬಿಡುಗಡೆ ಆಗಿದೆ. ಉಳಿದ ಹಣ ಹಂತ ಹಂತವಾಗಿ ಒದಗಿಸುವ ಭರವಸೆ ಸಿಕ್ಕಿದೆ ಎಂದು ಹೇಳಿದರು.
ಕಾವಾ ಡೀನ್ ಹಾಗೂ ಸಮಿತಿ ಕಾರ್ಯಾಧ್ಯಕ್ಷ ವಿ.ಎ. ದೇಶಪಾಂಡೆ ಮಾತನಾಡಿ, ಪ್ರತಿ ವರ್ಷ ಶಿಲ್ಪಕಲೆಗಳನ್ನು ಸಂಗ್ರಹಿಸಿದರೆ ಉತ್ತಮವಾದ ಶಿಲ್ಪಕಲಾ ಸಂಗ್ರಹಾಲಯ ರೂಪಿಸಬಹುದು. ಚಿತ್ರಕಲಾ ಪ್ರದರ್ಶನಕ್ಕಾಗಿ ಈವರೆಗೂ 250 ಕಲಾಕೃತಿಗಳು ಬಂದಿದೆ. ದಸರಾ ವಸ್ತುಪ್ರದರ್ಶನ ಮುಗಿಯುವವರೆಗೂ ಚಿತ್ರಕಲಾ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ಮಾಡಲಾಗಿದೆ. ದಸರೆ ನಂತರ ಗ್ರಾಮೀಣ ಹಾಗೂ ಮೈಸೂರು ದಸರಾ ಕಾರ್ಯಕ್ರಮದ ಛಾಯಾಚಿತ್ರ ಸ್ಪರ್ಧೆ ಸಹ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಸಮಿತಿ ಕಾರ್ಯದರ್ಶಿಯಾದ ರಂಗಾಯಣದ ಉಪ ನಿರ್ದೇಶಕ ಬಿ.ಎಸ್. ಬಾವಿಕಟ್ಟೆ, ಉಪಾಧ್ಯಕ್ಷ ಆರ್. ನಾರಾಯಣಸ್ವಾಮಿ, ಇಂದಿರಾ, ಸದಸ್ಯರಾದ ಸಿ.ಎಸ್. ರಘು, ಹುಯಿಲಾಳು ರಾಮಸ್ವಾಮಿ, ವಸಂತ, ರವಿಶಂಕರ್, ಕಮಲಮ್ಮ, ಶೋಭಾ ರಮೇಶ್, ವಿಜಯಲಕ್ಷ್ಮಿ, ಭಾರತಿ, ದುರ್ಗೇಶ್, ರೇವಣ್ಣ, ನಾಗರಾಜ್, ಮಂಜುನಾಥ್, ಧನಂಜಯ ಇದ್ದರು.