ಪರಂಪರೆ ಉಳಿಸಿ ಅರಿವು ಜಾಥಾ
ಕ.ಪ್ರ.ವಾರ್ತೆ , ಹುಣಸೂರು , ಸೆ. 29
ಪ್ರಾಚೀನ ವಸ್ತುಗಳ ರಕ್ಷಣೆಗಾಗಿ ಎಲ್ಲ ಐತಿಹಾಸಿಕ ಸ್ಥಳಗಳನ್ನು ಪಾರಂಪರಿಕ ತಾಣವೆಂದು ಘೋಷಿಸಬೇಕು ಹಾಗೂ ಪಾರಂಪರಿಕ ತಾಣವಾಗಿ ನಿಲ್ಲಬೇಕಾದರೆ ಯುವ ಜನಾಂಗ ಈ ಕುರಿತು ಚಿಂತಿಸಬೇಕಾಗಿದೆ ಎಂದು ಗುಂಡ್ಲುಪೇಟೆ ಜೆಎಸ್ಎಸ್ ಕಲಾ ಮತ್ತು ವಾಣಿಜ್ಯ ಕಾಲೇಜಿನ ಪ್ರೊ. ಎನ್. ಮಹದೇವಸ್ವಾಮಿ ಅಭಿಪ್ರಾಯಪಟ್ಟರು.
ಡಿ. ದೇವರಾಜ ಅರಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವೇದಿಕೆ ವತಿಯಿಂದ ಐತಿಹಾಸಿಕ ಪರಂಪರೆ ಉಳಿಸಿ ಕಾರ್ಯಕ್ರಮದಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಅರಿವು ಜಾಥಾ ನಡೆಸಿದ ಬಳಿಕ ಮಾತನಾಡಿದ ಅವರು, ಪುರಾತನ ಶಾಸನಗಳ ನಾಶದಿಂದ ದೇಶದ ಇತಿಹಾಸ ಪುರುಷರಿಗೆ ನಾವು ಮಾಡುವ ಅವಮಾನವಾಗುತ್ತದೆ. ಪ್ರಾಚೀನ ಕೋಟೆಗಳು, ಕಟ್ಟಡಗಳು, ದೇವಾಲಯ, ಇಗರ್ಜಿ, ಮಸೀದಿಗಳು, ಕೆರೆಗಳು, ಶಾಸನ, ವೀರಗಲ್ಲು, ತಾಮ್ರಪಟ, ತಾಮ್ರಗರಿ ಮುಂತಾದ ಪ್ರಚಾರ ಮಾಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಹಾಗೂ ಸಂಸ್ಕೃತಿ ಬಿಟ್ಟು, ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗಿರುವ ಯುವಜನಾಂಗ ಒಂದಾಗಿ ದೇಶದ ಪರಂಪರೆಯ ರಕ್ಷಣೆಗಾಗಿ ಹೋರಾಡಬೇಕು ಎಂದು ಹೇಳಿದರು. ಕಾಲೇಜಿನ ಆವರಣದಿಂದ ಜಾಥಾ ಹೊರಟ ವಿದ್ಯಾರ್ಥಿಗಳು ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು. ಪ್ರಾಂಶುಪಾಲ ಪ್ರೊ. ಎಚ್.ಸಿ. ಲೋಹಿತಾಶ್ವ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರೊ. ಬ್ರಹ್ಮಾನಂದ, ನಿವೃತ್ತ ಪ್ರಾಧ್ಯಾಪಕ ಬಿ.ಜಿ. ಗೋಪಾಲಸಿಂಗ್, ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಕೆ.ಎನ್. ಮೋಹನ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.